Home ವಿದೇಶ ಕದನ ವಿರಾಮಕ್ಕೆ ಇಸ್ರೇಲ್ ಅಡ್ಡಗಾಲು: ಅಮೇರಿಕಾ ಗಳಿಸಿದ್ದಕ್ಕಿಂತ ಕಳೆದುಕೊಂಡದ್ದೇ ಹೆಚ್ಚು, ಇಕ್ಕಟ್ಟಿನಲ್ಲಿ ಟ್ರಂಪ್

ಕದನ ವಿರಾಮಕ್ಕೆ ಇಸ್ರೇಲ್ ಅಡ್ಡಗಾಲು: ಅಮೇರಿಕಾ ಗಳಿಸಿದ್ದಕ್ಕಿಂತ ಕಳೆದುಕೊಂಡದ್ದೇ ಹೆಚ್ಚು, ಇಕ್ಕಟ್ಟಿನಲ್ಲಿ ಟ್ರಂಪ್

0

ಇರಾನ್ ವಿರುದ್ಧದ ಯುದ್ಧದಲ್ಲಿ ಅಮೆರಿಕ ಹಲವು ಉದ್ದೇಶಗಳನ್ನು ಇಟ್ಟುಕೊಂಡು ಧುಮುಕಿದ್ದರೂ, ಅಪೇಕ್ಷಿತ ಫಲ ದೊರೆಯದ ಕಾರಣ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಯುದ್ಧ ನಿಲ್ಲಿಸಲು ಅಮೆರಿಕ ಮುಂದಾದರೂ, ಮಿತ್ರರಾಷ್ಟ್ರ ಇಸ್ರೇಲ್ ಕದನ ವಿರಾಮಕ್ಕೆ ಅಡ್ಡಗಾಲು ಹಾಕುತ್ತಿದೆ ಎಂದು ರಾಜತಾಂತ್ರಿಕ ವಲಯಗಳಲ್ಲಿ ವಿಶ್ಲೇಷಿಸಲಾಗುತ್ತಿದೆ.

ಖಮೇನಿ ಹತ್ಯೆಯಾದರೂ ವ್ಯವಸ್ಥೆ ಅಲ್ಲಾಡಲಿಲ್ಲ
ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ವಾಯು ದಾಳಿಯಲ್ಲಿ ಇರಾನ್ ಸರ್ವೋಚ್ಚ ನಾಯಕ ಆಯತೊಲ್ಲಾ ಖಮೇನಿ ಹಾಗೂ ಪ್ರಮುಖ ಮಿಲಿಟರಿ ಅಧಿಕಾರಿಗಳನ್ನು ಹತ್ಯೆ ಮಾಡುವಲ್ಲಿ ಯಶಸ್ಸು ಸಿಕ್ಕಿತು. ಆದರೆ, ಇದರಿಂದ ಇರಾನ್ ಶರಣಾಗುತ್ತದೆ ಎಂಬ ಅಮೆರಿಕದ ಲೆಕ್ಕಾಚಾರ ತಲೆಕೆಳಗಾಯಿತು. ಖಮೇನಿ ಅವರ ಪುತ್ರ ಅಧಿಕಾರ ವಹಿಸಿಕೊಂಡಿದ್ದು, ಧಾರ್ಮಿಕ ಆಡಳಿತ ವ್ಯವಸ್ಥೆ ಯಥಾಸ್ಥಿತಿಯಲ್ಲಿ ಮುಂದುವರಿದಿದೆ. “ನಾಯಕ ಬದಲಾದರೂ ನಮ್ಮ ವ್ಯವಸ್ಥೆ ಬದಲಾಗದು” ಎಂಬ ಸ್ಪಷ್ಟ ಸಂದೇಶವನ್ನು ತೆಹರಾನ್ ರವಾನಿಸಿದೆ.

ಅಮೆರಿಕಕ್ಕೆ ಶತಕೋಟಿ ಡಾಲರ್ ಆರ್ಥಿಕ ಪೆಟ್ಟು
ಈ ಯುದ್ಧದಲ್ಲಿ ಅಮೆರಿಕ ಶತಕೋಟಿ ಡಾಲರ್‌ಗೂ ಅಧಿಕ ನಷ್ಟ ಅನುಭವಿಸಿದೆ. ಅತ್ಯಾಧುನಿಕ ಡ್ರೋನ್‌ಗಳು, ಕ್ಷಿಪಣಿಗಳು ಹಾಗೂ ಫೈಟರ್ ಜೆಟ್‌ಗಳು ಪತನಗೊಂಡಿವೆ. ಇರಾನ್‌ನ ವಾಯು ರಕ್ಷಣಾ ವ್ಯವಸ್ಥೆ ಅಮೆರಿಕ ನಿರೀಕ್ಷೆಗಿಂತ ಎಷ್ಟೋ ಪಟ್ಟು ಪ್ರಬಲವಾಗಿದೆ ಎನ್ನುವುದು ಈ ಮೂಲಕ ಬಹಿರಂಗವಾಗಿದ್ದು, ಅಮೆರಿಕದ ಮಿಲಿಟರಿ ಪ್ರತಿಷ್ಠೆಗೆ ಭಾರಿ ಹೊಡೆತ ಬಿದ್ದಿದೆ.

ಆರ್ಥಿಕ ದಿಗ್ಬಂಧನ: ಅರ್ಧ ಯಶಸ್ಸು
2015ರ ಪರಮಾಣು ಒಪ್ಪಂದದಿಂದ (JCPOA) ಹೊರಬಂದ ಅಮೆರಿಕ, ಇರಾನ್ ಮೇಲೆ ಕಠಿಣ ನಿರ್ಬಂಧ ಹೇರಿದ ಪರಿಣಾಮ ಇರಾನ್ ಕರೆನ್ಸಿ ಮೌಲ್ಯ ಪಾತಾಳ ಕಂಡಿದೆ. ತೈಲ ರಫ್ತು ಗಣನೀಯವಾಗಿ ಕುಸಿದಿದ್ದರೂ, ಇರಾನ್ ಮಿಲಿಟರಿ ಚಟುವಟಿಕೆ ಮಾತ್ರ ನಿಂತಿಲ್ಲ. ಆರ್ಥಿಕ ಒತ್ತಡ ಮಿಲಿಟರಿ ಶಕ್ತಿಯನ್ನು ದುರ್ಬಲಗೊಳಿಸಬಹುದೆಂಬ ನಿರೀಕ್ಷೆ ಹುಸಿಯಾಗಿದೆ.

ಪ್ರಾಕ್ಸಿ ಯುದ್ಧ ಹಾಗೂ ಪರಮಾಣು ಬೆದರಿಕೆ ತೀವ್ರ
ಯುದ್ಧ ಆರಂಭವಾದ ನಂತರ ಇರಾನ್ ತನ್ನ ಯುರೇನಿಯಂ ಸಂಗ್ರಹವನ್ನು ಹೆಚ್ಚಿಸಿಕೊಳ್ಳುತ್ತಾ ಸಾಗಿದ್ದು, ಪರಮಾಣು ಸಾಮರ್ಥ್ಯದತ್ತ ಇನ್ನಷ್ಟು ಹೆಜ್ಜೆ ಇಟ್ಟಿದೆ. ಇದರ ಜೊತೆಗೆ, ಹಿಜ್ಬುಲ್ಲಾ ಮತ್ತು ಹೂತಿ ಉಗ್ರರ ಮೂಲಕ ಪ್ರಾಕ್ಸಿ ಯುದ್ಧವನ್ನು ಮುಂದುವರಿಸಿದ್ದು, ಕೊಲ್ಲಿ ರಾಷ್ಟ್ರಗಳಲ್ಲಿರುವ ಅಮೆರಿಕ ಮಿಲಿಟರಿ ನೆಲೆಗಳ ಮೇಲೆ ದಾಳಿ ನಿರಂತರವಾಗಿ ಮುಂದುವರಿದಿದೆ.

ಅಬ್ರಹಾಂ ಒಪ್ಪಂದ: ಒಂದು ಕೈ ಗೆದ್ದರೆ, ಮತ್ತೊಂದು ಕೈ ಸೋತಂತೆ
ಅಬ್ರಹಾಂ ಒಪ್ಪಂದದ ಮೂಲಕ ಯುಎಇ, ಬಹರೇನ್ ಮತ್ತು ಇಸ್ರೇಲ್ ನಡುವೆ ಶಾಂತಿ ಏರ್ಪಡಿಸಿ ಇರಾನ್ ಅನ್ನು ಏಕಾಂಗಿಯಾಗಿಸುವಲ್ಲಿ ಟ್ರಂಪ್ ಯಶಸ್ವಿಯಾದರು. ಆದರೆ, ಇರಾನ್ ಪ್ರತಿಕ್ರಿಯೆಯಾಗಿ ಕೊಲ್ಲಿ ರಾಷ್ಟ್ರಗಳಲ್ಲಿರುವ ಅಮೆರಿಕದ ಮಿಲಿಟರಿ ಆಸ್ತಿ ಹಾಗೂ ಅಮೆರಿಕ ಮೂಲದ ಬಹುರಾಷ್ಟ್ರೀಯ ಕಂಪೆನಿಗಳ ಮೇಲೆ ದಾಳಿ ನಡೆಸಲು ಆರಂಭಿಸಿದೆ. ಇದರ ಪರಿಣಾಮ ಈ ಯುದ್ಧ ಕೇವಲ ಮೂರು ದೇಶಗಳ ನಡುವಿನ ಸಂಘರ್ಷವಾಗಿ ಉಳಿಯದೆ, ಇಡೀ ವಿಶ್ವದ ಮೇಲೆ ಪರಿಣಾಮ ಬೀರುತ್ತಿದೆ.

You cannot copy content of this page

Exit mobile version