Home ವಿದೇಶ ಇರಾನ್ ಮೇಲೆ ಇಸ್ರೇಲ್ ವೈಮಾನಿಕ ದಾಳಿ: ಟೆಹ್ರಾನ್‌ನಲ್ಲಿ 13 ಮಂದಿ ಸಾವು, ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಹಾನಿ

ಇರಾನ್ ಮೇಲೆ ಇಸ್ರೇಲ್ ವೈಮಾನಿಕ ದಾಳಿ: ಟೆಹ್ರಾನ್‌ನಲ್ಲಿ 13 ಮಂದಿ ಸಾವು, ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಹಾನಿ

0

ಟೆಹ್ರಾನ್: ಅಮೆರಿಕ ಮತ್ತು ಇರಾನ್ ನಡುವೆ ಸಂಧಾನದ ಮಾತುಕತೆಗಳ ಪ್ರಸ್ತಾಪ ನಡೆಯುತ್ತಿರುವ ಬೆನ್ನಲ್ಲೇ, ಇಸ್ರೇಲ್ ತನ್ನ ಆಕ್ರಮಣಕಾರಿ ದಾಳಿಯನ್ನು ಮುಂದುವರಿಸಿದೆ. ಇರಾನ್ ರಾಜಧಾನಿ ಟೆಹ್ರಾನ್ ಸಮೀಪ ಇಸ್ರೇಲ್ ನಡೆಸಿದ ಭೀಕರ ವೈಮಾನಿಕ ದಾಳಿಯಲ್ಲಿ ಕನಿಷ್ಠ 13 ಮಂದಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಸೋಮವಾರ ಮುಂಜಾನೆ ನಡೆದ ಈ ದಾಳಿಯಲ್ಲಿ ಎಸ್ಲಾಮ್‌ಶಹರ್ ಪಟ್ಟಣ ಮತ್ತು ಪ್ರತಿಷ್ಠಿತ ಶರೀಫ್ ತಾಂತ್ರಿಕ ವಿಶ್ವವಿದ್ಯಾಲಯವನ್ನು ಗುರಿಯಾಗಿಸಿಕೊಳ್ಳಲಾಗಿತ್ತು.

ಈ ದಾಳಿಯಲ್ಲಿ ಜನವಸತಿ ಪ್ರದೇಶಗಳ ಮೇಲೆ ಬಾಂಬ್ ಬಿದ್ದ ಪರಿಣಾಮ 13 ನಾಗರಿಕರು ಮೃತಪಟ್ಟಿದ್ದಾರೆ. ಶರೀಫ್ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿದ್ದ ಹಲವು ಕಟ್ಟಡಗಳು ಧ್ವಂಸಗೊಂಡಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ವಿಶ್ವವಿದ್ಯಾಲಯವನ್ನು ಬಂದ್ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳನ್ನು ನಡೆಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಹಾರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸದಿದ್ದರೆ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಈ ದಾಳಿ ನಡೆದಿರುವುದು ಗಮನಾರ್ಹವಾಗಿದೆ.

ಶರೀಫ್ ತಾಂತ್ರಿಕ ವಿಶ್ವವಿದ್ಯಾಲಯದ ಮೇಲೆ ದಾಳಿ ನಡೆಸಲು ಬಲವಾದ ಕಾರಣವಿದೆ ಎಂದು ಶಂಕಿಸಲಾಗಿದೆ. ಈ ವಿಶ್ವವಿದ್ಯಾಲಯವು ಇರಾನ್‌ನ ಬ್ಯಾಲಿಸ್ಟಿಕ್ ಕ್ಷಿಪಣಿಗಳ ತಯಾರಿಕೆ ಮತ್ತು ಮಿಲಿಟರಿ ಸಂಶೋಧನಾ ಚಟುವಟಿಕೆಗಳೊಂದಿಗೆ ನಿಕಟ ಸಂಬಂಧ ಹೊಂದಿದೆ ಎನ್ನಲಾಗಿದೆ. ಇರಾನ್ ಸೇನೆಯು ಈ ಪ್ರದೇಶವನ್ನು ತನ್ನ ಎರಡನೇ ಹಂತದ ಕಾರ್ಯಾಚರಣಾ ಕೇಂದ್ರವನ್ನಾಗಿ ಬಳಸಿಕೊಳ್ಳುತ್ತಿತ್ತು ಎಂಬ ಅನುಮಾನಗಳ ಹಿನ್ನೆಲೆಯಲ್ಲಿ ಇಸ್ರೇಲ್ ಈ ದಾಳಿ ನಡೆಸಿದೆ ಎಂದು ಅಂದಾಜಿಸಲಾಗಿದೆ.

ಮತ್ತೊಂದೆಡೆ, ಟೆಹ್ರಾನ್ ಸಮೀಪದ ಮತ್ತೊಂದು ನಗರವಾದ ಕ್ವಾಮ್ ಮೇಲೆಯೂ ವೈಮಾನಿಕ ದಾಳಿ ನಡೆದಿದ್ದು, ಅಲ್ಲಿ ಐವರು ಸಾವನ್ನಪ್ಪಿದ್ದಾರೆ ಎಂದು ಇರಾನ್ ಅಧಿಕೃತ ಮಾಧ್ಯಮಗಳು ದೃಢಪಡಿಸಿವೆ. ಈ ದಾಳಿಗಳ ಬಗ್ಗೆ ಇಸ್ರೇಲ್ ಆಗಲಿ ಅಥವಾ ಅಮೆರಿಕ ಆಗಲಿ ಈವರೆಗೆ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ. ಇತ್ತ ಇರಾನ್ ಕೂಡ ದಾಳಿಯಲ್ಲಿ ಮೃತಪಟ್ಟ ನಾಗರಿಕರು ಮತ್ತು ಸೈನಿಕರ ಬಗ್ಗೆ ಪೂರ್ಣ ಪ್ರಮಾಣದ ವಿವರಗಳನ್ನು ಗೌಪ್ಯವಾಗಿಟ್ಟಿದೆ. ಈ ಬೆಳವಣಿಗೆಯಿಂದ ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಮತ್ತಷ್ಟು ತೀವ್ರಗೊಂಡಿದೆ.

You cannot copy content of this page

Exit mobile version