ಕರ್ನಾಟಕದ ಬಹುತೇಕ ಭಾಗಗಳಲ್ಲಿ ಈ ದಿನ ಬಾರಿ ಮಳೆಯಾಗುವ ಮುನ್ಸೂಚನೆ ಕಂಡುಬಂದಿದ್ದು, ಹವಾಮಾನ ಇಲಾಖೆ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಮಳೆಯ ಪ್ರಮಾಣ ಇನ್ನೂ ಎರಡು ದಿನ ಮುಂದುವರಿಯುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದೆ.
ಜುಲೈ 25 ಮತ್ತು 26 ಕ್ಕೆ ಮಳೆಯ ಪ್ರಮಾಣ ಏರಿಕೆ ಆಗುವ ಸಾಧ್ಯತೆ ಇರುವುದರಿಂದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ. ಹಾಗೆಯೇ ಉತ್ತರ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಕಲಬುರಗಿ, ವಿಜಯಪುರ, ಹಾವೇರಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದೆ.
ಜುಲೈ 27 ಕ್ಕೆ ಮಳೆ ಸ್ವಲ್ಪ ಮಟ್ಟಿಗೆ ಕಡಿಮೆ ಆಗಲಿದ್ದು, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಭಾಗಗಳಲ್ಲಿ ಆರೆಂಜ್ ಅಲರ್ಟ್ ಮುಂದುವರಿಯುವ ಸಾಧ್ಯತೆ ಇದೆ.
ಸೋಮವಾರ ಒಂದೇ ದಿನ ಕರಾವಳಿ ಜಿಲ್ಲೆಗಳಲ್ಲಿ 20 ಸೆ.ಮೀ ಗೂ ಅಧಿಕ ಮಳೆ ಆಗಿದೆ. ಬುಧವಾರ ಮತ್ತು ಗುರುವಾರ ಮಳೆ ಸ್ವಲ್ಪ ಮಟ್ಟಿಗೆ ತಗ್ಗಲಿದ್ದು, ಬಿರುಗಾಳಿ ಬೀಸುವ ಮುನ್ಸೂಚನೆ ಕಾರಣಕ್ಕೆ ಆರೆಂಜ್ ಅಲರ್ಟ್ ಮುಂದುವರಿಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಒಟ್ಟಾರೆ ಈ ವರೆಗೂ ಬಂದ ಮಳೆ ಹೋಲಿಸಿದರೆ ರಾಜ್ಯದ ಬಹುತೇಕ ಕಡೆಗಳಲ್ಲಿ ವಾಡಿಕೆಗಿಂತ ಮಳೆ ಕಡಿಮೆ ಎಂದು ಮಾಹಿತಿ ಲಭ್ಯವಾಗಿದೆ. ಅದರಲ್ಲೂ ವಿಶೇಷವಾಗಿ ಕಳೆದ ಬಾರಿಗೆ ಹೋಲಿಸಿದರೆ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದ ರಾಮನಗರ, ಕೊಡಗು, ಹಾಸನ ಚಿಕ್ಕಮಗಳೂರು, ಶಿವಮೊಗ್ಗ, ಹಾವೇರಿ, ಚಿತ್ರದುರ್ಗ, ವಿಜಯಪುರ ಜಿಲ್ಲೆಗಳಲ್ಲಿ ಮಳೆ ಬಹುತೇಕ ಕಡಿಮೆ ಆಗಿದೆ ಎಂದು ಇಲಾಖೆ ತಿಳಿಸಿದೆ.