ಬೆಂಗಳೂರು : ಜನಪದ, ಸಿನಿಮಾ ಸೇರಿದಂತೆ ಸಾಕಷ್ಟು ಶೈಲಿಯ ಹಾಡುಗಳನ್ನು ಹಲವಾರು ವರ್ಷಗಳಿಂದ ಸಂಗೀತ ಪ್ರಿಯರಿಗೆ ನೀಡುತ್ತಾ ಬಂದಿರುವ ಖ್ಯಾತ ʼಜಂಕಾರ್ ಮ್ಯೂಸಿಕ್ ಸಂಸ್ಥೆʼ ಪುನೀತ್ ರಾಜಕುಮಾರ್ ಪ್ರಥಮ ಪುಣ್ಯಸ್ಮರಣೆಯ ನೆನಪಿಗಾಗಿ ʼಮತ್ತೊಮ್ಮೆ ಬಾ ಮಗುವಾಗಿ ಬಾʼ ಎಂಬ ಹಾಡನ್ನು ಬಿಡುಗಡೆ ಮಾಡಿದೆ.
ಪುನೀತ್ ಎಸ್ ಎಸ್ ಬರೆದಿರುವ ಈ ಹಾಡನ್ನು ಅರ್ಫಜ್ ಉಲ್ಲಾಳ್ ಸುಮಧುರವಾಗಿ ಹಾಡಿದ್ದಾರೆ. ಅವರೆ ಸಂಗೀತವನ್ನು ನೀಡಿದ್ದಾರೆ.
ನಗುವಿನ ರಾಜ ಕನ್ನಡದ ತೇಜ ಡಾ. ಪುನೀತ್ ರಾಜ್‍ಕುಮಾರ್ ಅವರ ಸ್ಮರಣೆಗಾಗಿ ಎಂಬ ವಾಕ್ಯದೊಂದಿಗೆ ಈ ಹಾಡು ಬಿಡುಗಡೆಯಾಗಿದೆ.
ಅಭಿಮಾನಿಗಳ ಆರಾಧ್ಯದೈವ ಪುನೀತ್ ರಾಜ್‍ಕುಮಾರ್ ಅವರ ಮೇಲಿರುವ ಅಪಾರ ಅಭಿಮಾನ ಈ ಹಾಡಿನಲ್ಲಿ ಎದ್ದು ಕಾಣುತ್ತಿದೆ. ಬಿಡುಗಡೆಯಾದ ಕ್ಷಣದಿಂದಲೇ ಈ ಹಾಡಿಗೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ.