ಆಗಸ್ಟ್ ತಿಂಗಳು ಪ್ರಾರಂಭವಾಗುತ್ತಿದ್ದು, ಪ್ರತಿ ತಿಂಗಳಂತೆ ಈ ತಿಂಗಳೂ ಸಹ ಹಣಕಾಸಿನ ವಹಿವಾಟುಗಳಿಗೆ ಸಂಬಂಧಿಸಿದ ಕೆಲವು ನಿಯಮಗಳು ಬದಲಾಗಲಿವೆ. ಈ ಬದಲಾವಣೆಗಳು ಸಾಮಾನ್ಯ ಜನರ ದೈನಂದಿನ ಜೀವನದ ಮೇಲೆ ಪ್ರಭಾವ ಬೀರಬಹುದು. ಕ್ರೆಡಿಟ್ ಕಾರ್ಡ್ ಮತ್ತು ಎಲ್‌ಪಿಜಿ ಬೆಲೆಗಳ ನಿಯಮಗಳಲ್ಲಿ ಬದಲಾವಣೆ ನಿರೀಕ್ಷಿಸಲಾಗಿದೆ. ಇದರ ಜೊತೆಗೆ, ಕೇಂದ್ರ ಸರ್ಕಾರ ಯುಪಿಐ ಸೇವೆಗಳಲ್ಲಿಯೂ ಕೆಲವು ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ.
ಆಗಸ್ಟ್ 1 ರಿಂದ ಯುಪಿಐಗೆ ಸಂಬಂಧಿಸಿದ ಹಲವು ಹೊಸ ನಿಯಮಗಳು ಜಾರಿಗೆ ಬರಲಿವೆ. ನೀವು ನಿಯಮಿತವಾಗಿ PhonePe, Google Pay, ಅಥವಾ Paytm ಬಳಸುತ್ತಿದ್ದರೆ ಈ ಬದಲಾವಣೆಗಳನ್ನು ತಿಳಿದುಕೊಳ್ಳುವುದು ಮುಖ್ಯ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಉತ್ತಮ ಪಾವತಿ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಈ ನಿಯಮಗಳನ್ನು ಪರಿಷ್ಕರಿಸಿದೆ. ಈ ಹೊಸ ನಿಯಮಗಳು ನಿಮ್ಮ ಪಾವತಿಗಳ ಮೇಲೆ ನೇರವಾಗಿ ಪರಿಣಾಮ ಬೀರದಿರಬಹುದು, ಆದರೆ ಬ್ಯಾಲೆನ್ಸ್ ಚೆಕ್, ಸ್ಟೇಟಸ್ ರಿಫ್ರೆಶ್ ಮತ್ತು ಇತರ ಕ್ರಿಯೆಗಳ ಮೇಲೆ ಕೆಲವು ಮಿತಿಗಳನ್ನು ವಿಧಿಸಲಿವೆ.
ಬ್ಯಾಲೆನ್ಸ್ ಚೆಕ್: ಆಗಸ್ಟ್ 1ರಿಂದ, ನೀವು ಒಂದು ದಿನದಲ್ಲಿ 50 ಬಾರಿ ಮಾತ್ರ ನಿಮ್ಮ ಯುಪಿಐ ಖಾತೆಯ ಬ್ಯಾಲೆನ್ಸ್ ಪರಿಶೀಲಿಸಬಹುದು.
ಬ್ಯಾಂಕ್ ಖಾತೆ ಪರಿಶೀಲನೆ: ಒಂದು ದಿನದಲ್ಲಿ ನಿಮ್ಮ ಮೊಬೈಲ್ ಸಂಖ್ಯೆಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗಳನ್ನು ಕೇವಲ 25 ಬಾರಿ ಮಾತ್ರ ಪರಿಶೀಲಿಸಬಹುದಾಗಿದೆ.
ಆಟೋಪೇ ವಹಿವಾಟುಗಳು: ನೆಟ್‌ಫ್ಲಿಕ್ಸ್ ಅಥವಾ ಮ್ಯೂಚುಯಲ್ ಫಂಡ್‌ನಂತಹ ಆಟೋಪೇ ವಹಿವಾಟುಗಳು ಈಗ ಕೇವಲ 3 ನಿರ್ದಿಷ್ಟ ಸಮಯಾವಧಿಗಳಲ್ಲಿ ಮಾತ್ರ ಪ್ರಕ್ರಿಯೆಗೊಳ್ಳುತ್ತವೆ. ಅವುಗಳೆಂದರೆ, ಬೆಳಿಗ್ಗೆ 10 ಗಂಟೆಯ ಮೊದಲು, ಮಧ್ಯಾಹ್ನ 1 ರಿಂದ ಸಂಜೆ 5 ಗಂಟೆಯವರೆಗೆ ಮತ್ತು ರಾತ್ರಿ 9:30 ರ ನಂತರ.
ವಿಫಲ ವಹಿವಾಟಿನ ಸ್ಟೇಟಸ್: ಒಂದು ದಿನದಲ್ಲಿ ವಿಫಲವಾದ ವಹಿವಾಟುಗಳ ಸ್ಥಿತಿಯನ್ನು 3 ಬಾರಿ ಮಾತ್ರ ಪರಿಶೀಲಿಸಲು ಸಾಧ್ಯ. ಪ್ರತಿ ಚೆಕ್ ನಡುವೆ 90 ಸೆಕೆಂಡುಗಳ ಅಂತರ ಇರಬೇಕು.
ಕ್ರೆಡಿಟ್ ಕಾರ್ಡ್ ನಿಯಮಗಳು
ನೀವು SBI ಕ್ರೆಡಿಟ್ ಕಾರ್ಡ್ ಹೊಂದಿದ್ದರೆ, ಆಗಸ್ಟ್ 11 ರಿಂದ ಕೆಲವು ದೊಡ್ಡ ಬದಲಾವಣೆಗಳು ಬರಲಿವೆ. SBI ತನ್ನ ಕೆಲವು ಕೋ-ಬ್ರಾಂಡೆಡ್ ಕ್ರೆಡಿಟ್ ಕಾರ್ಡ್‌ಗಳ ಮೇಲೆ ಒದಗಿಸುತ್ತಿದ್ದ ಉಚಿತ ವಿಮಾನ ಅಪಘಾತ ವಿಮಾ ರಕ್ಷಣೆಯನ್ನು ಸ್ಥಗಿತಗೊಳಿಸಲಿದೆ. ಇದುವರೆಗೆ, SBI, UCO ಬ್ಯಾಂಕ್, ಸೆಂಟ್ರಲ್ ಬ್ಯಾಂಕ್, PSB ಮತ್ತು ಕರೂರ್ ವೈಶ್ಯ ಬ್ಯಾಂಕ್‌ನಂತಹ ಸಂಸ್ಥೆಗಳ ಸಹಯೋಗದೊಂದಿಗೆ ಕೆಲವು ಎಲೈಟ್ ಮತ್ತು ಪ್ರೈಮ್ ಕಾರ್ಡ್‌ಗಳ ಮೇಲೆ ₹1 ಕೋಟಿ ಅಥವಾ ₹50 ಲಕ್ಷದವರೆಗೆ ವಿಮಾ ರಕ್ಷಣೆಯನ್ನು ನೀಡುತ್ತಿತ್ತು. ಈ ಸೇವೆ ಇನ್ನು ಮುಂದೆ ಲಭ್ಯವಿರುವುದಿಲ್ಲ.