ಎಪ್‌ಸ್ಟೀನ್ ಫೈಲ್ಸ್‌ನಲ್ಲಿ ತಮ್ಮ ಹೆಸರಿದೆ ಎಂಬ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಆರೋಪಕ್ಕೆ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಪತ್ರಿಕಾಗೋಷ್ಠಿಯಲ್ಲಿ ತಿರುಗೇಟು ನೀಡಿದ್ದಾರೆ.
ರಾಹುಲ್ ಗಾಂಧಿ ಅವರಿಗೆ ಆಧಾರರಹಿತ ಆರೋಪಗಳನ್ನು ಮಾಡುವ ಅಭ್ಯಾಸವಿದೆ ಎಂದು ಪುರಿ ಟೀಕಿಸಿದರು. ರಾಜಕೀಯ ವ್ಯವಸ್ಥೆಯಲ್ಲಿ ಜವಾಬ್ದಾರಿಯನ್ನು ಹೊತ್ತು ದೇಶದ ಅಭಿವೃದ್ಧಿಗೆ ಶ್ರಮಿಸುವ ನಾಯಕರು ಒಂದು ಕಡೆಯಾದರೆ, ದೇಶದ ಆರ್ಥಿಕತೆಯನ್ನು 10ನೇ ಸ್ಥಾನದಿಂದ 4ನೇ ಸ್ಥಾನಕ್ಕೆ ತಂದವರು ಇನ್ನೊಂದು ಕಡೆ ಇದ್ದಾರೆ. ಆದರೆ ರಾಹುಲ್ ಗಾಂಧಿಯಂತಹ ನಾಯಕರು ಕೇವಲ ವಿದೇಶ ಪ್ರವಾಸ ಮಾಡುತ್ತಾರೆ ಮತ್ತು ಸಂಸತ್ತಿನಲ್ಲಿ ಗಂಭೀರ ಚರ್ಚೆ ನಡೆಯುವಾಗ ಹೊರನಡೆಯುತ್ತಾರೆ ಎಂದು ಅವರು ಕಿಡಿಕಾರಿದರು.
ಎಪ್‌ಸ್ಟೀನ್ ಫೈಲ್ಸ್ ಬಗ್ಗೆ ಮಾಹಿತಿ ಹಂಚಿಕೊಂಡ ಪುರಿ, “ನಾನು ನ್ಯೂಯಾರ್ಕ್‌ನಲ್ಲಿ ವಿಶ್ವಸಂಸ್ಥೆಯ ಭಾರತದ ರಾಯಭಾರಿಯಾಗಿದ್ದಾಗ 2009 ರಿಂದ 2017ರ ವರೆಗಿನ ಅವಧಿಯ 30 ಲಕ್ಷ ಇಮೇಲ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಕೇವಲ ಮೂರರಿಂದ ನಾಲ್ಕು ಸಭೆಗಳ ಉಲ್ಲೇಖವಿದ್ದು, ಅವೆಲ್ಲವೂ ಅಂತರಾಷ್ಟ್ರೀಯ ಕೆಲಸಗಳಿಗೆ ಸಂಬಂಧಿಸಿದ ಸಂಪೂರ್ಣ ವೃತ್ತಿಪರ ಭೇಟಿಗಳಾಗಿವೆ. ಎಪ್‌ಸ್ಟೀನ್ ಜೊತೆ ನಾನು ಕೇವಲ ಒಂದು ಇಮೇಲ್ ಹಂಚಿಕೊಂಡಿದ್ದೇನೆ ಅಷ್ಟೇ” ಎಂದು ಸ್ಪಷ್ಟಪಡಿಸಿದರು. ಅಲ್ಲದೆ, ರಾಹುಲ್ ಗಾಂಧಿ ಅವರ ಆರೋಪಗಳಲ್ಲಿ ಹಾಸ್ಯಾಸ್ಪದ ಅಂಶಗಳಿವೆ ಎಂದು ಅವರು ಲೇವಡಿ ಮಾಡಿದರು.
