ಚಾಮರಾಜನಗರ ಮಲೆಮಹದೇಶ್ವರ ಬೆಟ್ಟದ ಹೂಗ್ಯಂ ವಲಯದ ಅರಣ್ಯ ಪ್ರದೇಶದಲ್ಲಿ ಒಂದು ಹುಲಿ ಮತ್ತು ನಾಲ್ಕು ಹುಲಿ ಮರಿಗಳ ಸಾವಿಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅದರಂತೆ ತೀವ್ರ ವಿಚಾರಣೆ ಬಳಿಕ ಹುಲಿಗೆ ವಿಷ ಇಟ್ಟು ಕೊಂದದ್ದು ತಾವೇ ಎಂದು ಇಬ್ಬರು ಹಂತಕರು ತಪ್ಪೊಪ್ಪಿಕೊಂಡಿದ್ದಾರೆ.
ಮಾದ ಅಲಿಯಾಸ್ ಮಾದುರಾಜು ಹಾಗೂ ನಾಗರಾಜ್ ಎಂಬ ಇಬ್ಬರು ಹುಲಿಗಳನ್ನು ಕೊಂದ ಹಂತಕರಾಗಿದ್ದಾರೆ. ತಮ್ಮ ಹಸುವನ್ನು ಕೊಂದ ಜಿದ್ದಿಗೆ ಬಿದ್ದು ಹುಲಿಗೆ ವಿಷ ಇಟ್ಟ ಬಗ್ಗೆ ಹಂತಕರು ಪೊಲೀಸರಲ್ಲಿ ತಪ್ಪೊಪ್ಪಿಕೊಂಡಿದ್ದಾರೆ. ಸದ್ಯ ಪೊಲೀಸರು ಮತ್ತು ಅರಣ್ಯ ಸಿಬ್ಬಂದಿಗಳಿಂದ ವಿಚಾರಣೆ ನಡೆದಿದೆ.
ತನ್ನ ಹಸುವನ್ನು ಹುಲಿ ಕೊಂದಿದ್ದಕ್ಕೆ ತಾನೇ ವಿಷ ಹಾಕಿ ಹುಲಿಯನ್ನು ಕೊಂದಿರುವುದಾಗಿ ಮಾದನ ತಂದೆ ಶಿವಣ್ಣ ಹೇಳಿಕೆ ನೀಡಿದ್ದರು. ಪುತ್ರನನ್ನು ರಕ್ಷಿಸುವ ಸಲುವಾಗಿ ತಾನು ಹುಲಿ ಸಾಯಿಸಿದ್ದಾಗಿ ಶಿವಣ್ಣ ಹೇಳಿದ್ದರು.
ಆದರೆ ಅನುಮಾನಗೊಂಡ ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ಶಿವಣ್ಣನ ಪುತ್ರ ಮಾದ ಅಲಿಯಾಸ್ ಮಾದುರಾಜು ಐದು ಹುಲಿಗಳ ಸಾವಿಗೆ ತಾನೇ ಕಾರಣ ಎಂದು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಹುಲಿಗಳನ್ನು ಉದ್ದೇಶಪೂರ್ವಕವಾಗಿ ತಾನೇ ವಿಷಹಾಕಿ ಕೊಂದಿದ್ದಾಗಿ ಮಾದ ತಪ್ಪೊಪ್ಪಿಕೊಂಡಿದ್ದಾನೆ.
ಶಿವಣ್ಣನಿಗೆ ಸೇರಿದ ಹಸುವಿನ ಮೇಲೆ ಹುಲಿ ದಾಳಿ ನಡೆಸಿ ಕೊಂದಿತ್ತು. ಇದರಿಂದ ಕುಪಿತನಾಗಿದ್ದ ಆರೋಪಿ ಮಾದ ಮೃತ ದೇಹಕ್ಕೆ ವಿಷ ಸಿಂಪಡನೆ ಮಾಡಿದ್ದ. ಈ ವಿಷಪೂರಿತ ಹಸುವಿನ ಮಾಂಸ ತಿಂದ ಹುಲಿಗಳು ಮೃತಪಟ್ಟಿವೆ ಎಂದು ಹೇಳಲಾಗಿದೆ.
ಮಲೆ ಮಹದೇಶ್ವರ ವನ್ಯಜೀವಿಧಾಮದ ಮೀಣ್ಯಂನಲ್ಲಿ ಒಂದು ತಾಯಿ ಹುಲಿ ಮತ್ತು ನಾಲ್ಕು ಮರಿ ಹುಲಿಗಳು ಅನುಮಾನಸ್ಪದವಾಗಿ ಸಾವನ್ನಪ್ಪಿದ್ದವು. ತಾಯಿ ಹುಲಿಗೆ 8 ವರ್ಷ, ಮರಿ ಹುಲಿಗಳಿಗೆ 10 ತಿಂಗಳಾಗಿತ್ತು. ವಿಷ ಬೆರೆಸಿದ್ದ ಹಸುವಿನ ಮಾಂಸ ತಿಂದು ಹುಲಿಗಳು ಮೃತಪಟ್ಟಿದ್ದವು.