Home ಜನ-ಗಣ-ಮನ ದಲಿತ ನೋಟ ಐಕ್ಯ ಹೋರಾಟ ಮತ್ತು ಒಗ್ಗಟ್ಟಿನ ಪ್ರತಿರೋಧ ಇಂದಿನ ಅಗತ್ಯ

ಐಕ್ಯ ಹೋರಾಟ ಮತ್ತು ಒಗ್ಗಟ್ಟಿನ ಪ್ರತಿರೋಧ ಇಂದಿನ ಅಗತ್ಯ

0
ದಲಿತ ಸಂಘಟನೆಗಳ ಐಕ್ಯತಾ ಸಮಾವೇಶವು ಯಶಸ್ವಿಯಾಗಿ ದಲಿತ ದಮನಿತರ ಹೊಸ ಭವಿಷ್ಯಕ್ಕೆ ನಾಂದಿ ಹಾಡುವುದು, ಮತ್ತೆ ಅದು ತನ್ನ ಗತವೈಭವದಿಂದೊಂದಿಗೆ ಎದ್ದೇಳುವುದು ಎಂದು ತಮ್ಮ ವಿಶ್ವಾಸವನ್ನು ವ್ಯಕ್ತಪಡಿಸುತ್ತಾರೆ ಕಲಬುರ್ಗಿಯ ವಕೀಲರೂ, ಮಹಿಳಾ ಹೋರಾಟಗಾರರೂ ಆದ ಅಶ್ವಿನಿ ಮದನಕರ

ಶತಮಾನಗಳ ನಂತರದಲ್ಲಿ ದಲಿತರ ಜೋಪಡಿಗಳಲ್ಲಿ ಹೋರಾಟದ ಮಿಣುಕು ದೀಪ ಉರಿಯುತ್ತಿದೆ. ಹೊರಗೆ ಭಾರಿ ಬಿರುಗಾಳಿ ಬೀಸುತ್ತಿದೆ. ಹೋರಾಟದ ದೀಪ ಆರದಂತೆ ರಕ್ಷಿಸುವ ಜವಾಬ್ದಾರಿ ಪ್ರಜ್ಞಾವಂತ ನಾಗರಿಕರ ಮೇಲಿದೆ –  ಪ್ರೊ. ಬಿ. ಕೃಷ್ಣಪ್ಪ

ಜಾತಿ, ವರ್ಗ ರಹಿತ ಸಮಾಜಕ್ಕಾಗಿ ಘನತೆಯ ಬದುಕಿನ ಚಳುವಳಿಯ ಹುಟ್ಟೇ ದಲಿತ ಸಂಘರ್ಷ ಸಮಿತಿ. ಅಸ್ಪೃಶ್ಯತೆ, ಸಮಾನತೆ, ದಲಿತ, ಮಹಿಳೆಯರ ಮೇಲಿನ ದೌರ್ಜನ್ಯ ಕೊಲೆ ಸುಲಿಗೆಯನ್ನು ಖಂಡಿಸಿ ಎಂದ ಒಂದು ಬಹುದೊಡ್ಡ ಚಳುವಳಿಯ ಹೆಜ್ಜೆ ದಲಿತ ಸಂಘರ್ಷ ಸಮಿತಿ. ಅಸಮಾನತೆಯ ರಸವನ್ನು ವೈಭವೀಕರಿಸಿ ಹೇಳುವ ಮತ್ತು ಕೆಲವೇ ಕೆಲವು ಕೃತಿಗಳು ಬಿಟ್ಟರೆ ಕನ್ನಡ ಸಾಹಿತ್ಯದಲ್ಲಿ ಬರೀ “ಬೂಸಾ” ಇದೆ ಎಂದು ಹೇಳಿದ ದಿ.ಬಸವಲಿಂಗಪ್ಪನವರ ವಿಮರ್ಶಾತ್ಮಕ ದೃಷ್ಟಿಕೋನ ಅರಗಿಸಿಕೊಳ್ಳಲಾಗದ ಮೇಲ್ವರ್ಗ, ಮೇಲ್ಜಾತಿಯ ಕಳಪೆ ಸಾಹಿತಿಗಳು, ನಕಲಿ ಬುದ್ಧಿಜೀವಿಗಳು ಅವರ ಮೇಲೆ ಮುಗಿ ಬಿದ್ದರು. ಬೂಸಾ ಪ್ರಕರಣ ಕೈಗೆ ಸಿಕ್ಕೊಡನೆ ನಾಡಿನ ಉದ್ದಗಲಕ್ಕೂ ಅವರ ವಿರುದ್ಧ ಆಂದೋಲನ ಆರಂಭಿಸಿ ಅವರ ರಾಜೀನಾಮೆಗೆ ಒತ್ತಾಯಿಸಿದರು. ಪರಿಣಾಮವಾಗಿ ದಿ. ದೇವರಾಜ ಅರಸು ಅವರು ಬಿ. ಬಸವಲಿಂಗಪ್ಪನವರನ್ನು ಸಂಪುಟದಿಂದ ಕೈಬಿಟ್ಟರು. ಈ ಎಲ್ಲ ಘಟನೆಯನ್ನು ಕಣ್ಣಾರೆ ನೋಡಿದ ದಲಿತ ಯುವಜನ ವಿದ್ಯಾರ್ಥಿಗಳು ಇವರ ಬೆಂಬಲಕ್ಕೆ ನಿಂತರು. ಜೊತೆಗೆ ದಲಿತ, ರೈತ, ಕಾರ್ಮಿಕರ ನಡುವೆ ಹೋರಾಟದ ಕಿಚ್ಚು ಹುಟ್ಟಿತು. ಭದ್ರಾವತಿಯಲ್ಲಿ ನಡೆದ ಬೃಹತ್‌ ಸಮಾವೇಶದಲ್ಲಿ ಸಾಂಸ್ಥಿಕ ಹೆಸರಾದ ದಲಿತ ಸಂಘರ್ಷ ಸಮಿತಿಯ ಹೆಸರಿನೊಂದಿಗೆ ಕೆಲವೇ ಕೆಲವು ದಿನಗಳಲ್ಲಿ ನಾಡಿನ ಉದ್ದಗಲಕ್ಕು ಹೋರಾಟದ ಕಿಚ್ಚು ಪಸರಿಸಿತು; ಕೋಟ್ಯಂತರ ದಲಿತರ ಕೊರಳ ದನಿಯಾಯಿತು. ಸಂವಿಧಾನಬದ್ಧ ದಲಿತರ ಹಕ್ಕುಗಳ ಹೋರಾಟದ ಮುಂಚೂಣಿಯಾಯಿತು. ಸಾವಿರಾರು ಊರಿನ ಕೇರಿಗಳಲ್ಲಿ ದಲಿತ ಸಂಘರ್ಷ ಸಮಿತಿಯ ಘಟಕಗಳು ಆರಂಭವಾದವು. ಎಳೆಯರಿಗೆ, ಹೊಸಬರಿಗೆ, ಸೈದ್ಧಾಂತಿಕ ಮತ್ತು ಸಂಘಟನಾತ್ಮಕ ತಿಳುವಳಿಕೆ ಹಾಗೂ ಸ್ಪೂರ್ತಿ ನೀಡಲು ಹಲವಾರು ಪರಿಣಾಮಕಾರಿ ಅಧ್ಯಯನ ಶಿಬಿರಗಳನ್ನು ಮಾಡಿದ್ದರ ಪ್ರಯುಕ್ತ ಇಂದು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಿಗೂ ಕಡಿಮೆಯಿಲ್ಲದಂತೆ ಮಾತಾಡುವ ಹಲವು ನಾಯಕ ನಾಯಕಿಯರು ಹುಟ್ಟಿಕೊಂಡರು. ಕವಿಗಳು, ಸಾಹಿತಿಗಳು, ಲೇಖಕರು, ಪತ್ರಕರ್ತರು ರೂಪುಗೊಂಡರು. ಅಂಬೇಡ್ಕರವಾದ ಎಲ್ಲರನ್ನು ಒಂದೆಡೆ ಸೇರಿಸುವ ಶಕ್ತಿಯಾಯಿತು. ಗ್ರಾಮಾಂತರಗಳಲ್ಲಿ ಅಸ್ಪೃಶ್ಯತೆ, ಜಾತಿವ್ಯವಸ್ಥೆ,  ದೌರ್ಜನ್ಯದ ವಿರುದ್ಧ, ಭೂಮಿ ಹೋರಾಟಗಳು ಪ್ರಾರಂಭವಾದವು. ಹಾಸ್ಟೆಲ್‌ ವ್ಯವಸ್ಥೆಯ ಸುಧಾರಣೆಗಾಗಿ ನಡೆದ ಹೋರಾಟಗಳು ಅಗಣಿತ.

ಕರ್ನಾಟಕ ದಲಿತ ಸಂಘರ್ಷ ಸಮಿತಿಯು ದಲಿತರ ಮೇಲಾಗುವ ಕೆಲವು ದೌರ್ಜನ್ಯದ ಮೇಲಷ್ಟೆ ಹೋರಾಡಲಿಲ್ಲ. ಅದು ಲಿಂಗಾಯತ, ಹಿಂದುಳಿದ ಎಲ್ಲ ಜಾತಿಗಳಲ್ಲಿನ ಶೋಷಣೆಯನ್ನು ಪ್ರಶ್ನಿಸಿ ಪ್ರತಿಭಟಿಸಿದೆ. ಇದೆಲ್ಲದರ ಪರಿಣಾಮವಾಗಿ ಕರ್ನಾಟಕದಲ್ಲಿ ದಲಿತ ಸಂಘರ್ಷ ಸಮಿತಿ ಒಂದು ಬಲಿಷ್ಠವಾದ ಸಾಮಾಜಿಕ ಮತ್ತು ಸಾಂಸ್ಕೃತಿಕ ಮಹಾಶಕ್ತಿಯ ಸಂಘಟನೆಯಾಗಿ ಮಾರ್ಪಟ್ಟಿತು. ದಲಿತ ಸಂಘರ್ಷ ಸಮಿತಿಯ ಹೋರಾಟಕ್ಕೆ ಮಣಿದ ಸರ್ಕಾರಗಳು ಹಲವಾರು ಜನಪರ ಕಾಯ್ದೆ ತಂದಿದ್ದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಮೇಲ್ಜಾತಿಯ ರಾಜಕೀಯ ನಾಯಕರು ದಲಿತ ಸಂಘರ್ಷ ಸಮಿತಿಯ ವೇಗಕ್ಕೆ ದಂಗು ಬಡಿದಿದ್ದರು. ಬಹುಶ: ಇಂತಹ ಹಲವು ಕಾರಣಗಳಿಗಾಗಿಯೇ ರಾಜಕೀಯ ನಾಯಕರ ನಿದ್ದೆಗೆಡಿಸಿದ ದಲಿತ ಸಂಘರ್ಷ ಸಮಿತಿಯ ಮೇಲೆ ಆಳುವವರ ಕುತಂತ್ರ ಪ್ರಾರಂಭವಾಗಿ ಸಂಘಟನೆಯ ಇಳಿಗಾಲ ಪ್ರಾರಂಭವಾಯಿತು. ದಲಿತ ಸಂಘರ್ಷ ಸಮಿತಿ ಬಿಡಿ ಬಿಡಿಯಾಗಿ ಕೆಲಸ ಮಾಡತೊಡಗಿತು.

ಆದರೆ, ಸುಮಾರು ಮೂರು ದಶಕಗಳ ನಂತರ ದಲಿತ ಸಂಘರ್ಷ ಸಮಿತಿಯು ಇಂದಿನ ವಾಸ್ತವವನ್ನು ಅರ್ಥೈಸಿಕೊಂಡಿದೆ. ದಲಿತ-ಹಿಂದುಳಿದ ವಿರೋಧಿ, ಮಹಿಳಾ ವಿರೋಧಿ, ಸಂವಿಧಾನ ವಿರೋಧಿ, ಆರ್. ಎಸ್. ಎಸ್‌ ಮತ್ತು ಅದರ ಕೂಸು ಬಿಜೆಪಿಯ ದುರಾಡಳಿತದಿಂದಾಗಿ ಇತ್ತೀಚಿನ ದಿನಗಳಲ್ಲಿ ದಲಿತರ ಮೇಲೆ ಹೆಚ್ಚಾಗುತ್ತಿರುವ ದೌರ್ಜನ್ಯಗಳು, ಅತ್ಯಾಚಾರಗಳು, ಅನಾಚಾರಗಳನ್ನು ಖಂಡಿಸುವ ತುರ್ತಿನೊಂದಿಗೆ ನಾವೊಂದು ಶಕ್ತಿ ಎಂಬುದನ್ನು ನಿರೂಪಿಸಲು ಹರಿದು ಹಂಚಿ ಹೋಗಿದ್ದ ದಲಿತ ಸಂಘಟನೆಗಳೆಲ್ಲ ಒಟ್ಟಾಗುವ ನಿರ್ಧಾರ ಮಾಡಿದ್ದಾರೆ; ಊರು-ಕೇರಿಗಳತ್ತ ದಲಿತರು ಬರುವರು ದಾರಿ ಬಿಡಿ ಎಂಬ ಘೋಷವಾಕ್ಯದೊಂದಿಗೆ ಹೆಜ್ಜೆಯಿಡುತ್ತಿದ್ದಾರೆ. ಇದು ದಲಿತ ಚಳವಳಿಯ ಒಂದು ಹೊಸ ಚಾರಿತ್ರಿಕ ಮೈಲಿಗಲ್ಲು ಎಂದು ಹೇಳಿದರೆ ತಪ್ಪಾಗಲಾರದು.

ಇತ್ತೀಚಿನ ದಿನಗಳಲ್ಲಿ ಇಡೀ ದಲಿತ ಸಮುದಾಯವೇ ತಲೆತಗ್ಗಿಸುವಂತ ಹೀನಾಯ ಘಟನೆಗಳು ನಡೆಯುತ್ತಿವೆ. ಮೇಲ್ಜಾತಿಯ, ಮೇಲ್ವರ್ಗದ ಜನರ ಅಟ್ಟಹಾಸ ಮೇರೆ ಮೀರುತ್ತಿದೆ. ದಲಿತರ ಮಕ್ಕಳನ್ನು ಶಿಕ್ಷಣದಿಂದ ವಂಚಿಸುವ, ಮೀಸಲಾತಿಯನ್ನು ಸರ್ವನಾಶ ಮಾಡಿ ಮೀಸಲಾತಿ ಹೆಚ್ಚಳದ ನಾಟಕವಾಡುವ ದುಷ್ಟ ಕೋಮುವಾದಿ ಶಕ್ತಿಗಳು ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ; ನೇರಾನೇರವಾಗಿ ದಲಿತರ ಮೇಲೆ, ಮಹಿಳೆಯರ ಮೇಲೆ ಧಾಳಿ ಮಾಡುತ್ತಿವೆ. ಇವೆಲ್ಲವುಗಳನ್ನು ಕಣ್ಣಾರೆ ಕಂಡ  ಹಿರಿಯರು ಮತ್ತು ಇಂದಿನ ಕ್ರಾಂತಿಕಾರಿ ಯುವಜನತೆ ನಾಡಿನ ಸಮಸ್ತ ಸಂವೇದನಾಶೀಲ ದಲಿತ ನಾಯಕರನ್ನು ಒಂದೇ ವೇದಿಕೆಗೆ ತಂದು ಸಂಘಟನೆಯನ್ನು ಈ ಕಾಲದ ವಾತಾವರಣಕ್ಕೆ, ಇಂದಿನ ಸವಾಲುಗಳಿಗೆ ತಕ್ಕಂತೆ ಮರು ರೂಪಿಸಲು ದಿನಾಂಕ 6-12-2022 ರಂದು ಒಂದು ಚರಿತ್ರಾರ್ಹ ಐಕ್ಯತಾ ಸಮಾವೇಶವನ್ನು ಹಮ್ಮಿಕೊಂಡಿರುವುದು ನಾಡಿನ ಸಮಸ್ತ ದಲಿತ ದಮನಿತರೊಳಗೆ ಒಂದು ಹೊಸ ಚೈತನ್ಯವನ್ನು ಅಪೂರ್ವ ಹುಮ್ಮಸ್ಸಿನ ಹೊಸ ಉತ್ಸಾಹವನ್ನು ಉಕ್ಕಿಸುತ್ತಿದೆ. ಈ ಮಹಾ ಐಕ್ಯತಾ ಸಮಾವೇಶವು ಯಶಸ್ವಿಯಾಗಿ ದಲಿತ ದಮನಿತರ ಹೊಸ ಭವಿಷ್ಯಕ್ಕೆ ನಾಂದಿ ಹಾಡಲೆಂದು ಆಶಿಸುತ್ತೇನೆ. ಮತ್ತೆ ಅದು ತನ್ನ ಗತವೈಭವದಿಂದೊಂದಿಗೆ ಎದ್ದೇಳುವುದೆಂಬ ವಿಶ್ವಾಸದೊಂದಿಗೆ ನಾವೆಲ್ಲ ಹಲವು ವೈರುಧ್ಯಗಳ ನಡುವೆಯೂ ಒಂದಾಗುತ್ತಿರುವುದು ತುಂಬಾ ಅಭಿನಂದನಾರ್ಹ. ಐಕ್ಯ ಹೋರಾಟ ಮತ್ತು ಒಗ್ಗಟ್ಟಿನ ಪ್ರತಿರೋಧ ಇಂದಿನ ಅಗತ್ಯ ಮತ್ತು ನಮ್ಮ ಸಂವಿಧಾನಬದ್ಧ ಹಕ್ಕಿಗಾಗಿ ನಾವೆಲ್ಲ ಒಂದಾಗುವ ಕಾಲವಿದು.

ಅಶ್ವಿನಿ ಮದನಕರ, ಕಲಬುರಗಿ

ವಕೀಲರು ಮತ್ತು ಮಹಿಳಾಪರ ಹೋರಾಟಗಾರರು.

You cannot copy content of this page

Exit mobile version