ಹಾಸನ : ವಿದ್ಯಾರ್ಥಿನಿಯರು ಈ ವಯಸ್ಸಿನಲ್ಲಿ ಆಕರ್ಷಣೆಗೆ ಒಳಗಾಗುವುದು ಸಹಜ. ಆದರೆ ಅದು ಜೀವನವನ್ನು ಹಾಳು ಮಾಡುವ ಮಾರ್ಗವಾಗಬಾರದು. ಕೆಟ್ಟ ವಿಚಾರಗಳ ಕಡೆ ಮನಸ್ಸು ಕೊಡುವುದನ್ನು ಬಿಟ್ಟು, ಉತ್ತಮ ವಿಚಾರಗಳ ಕಡೆ ಯೋಚಿಸಬೇಕು. ಭವಿಷ್ಯದ ಬಗ್ಗೆ ಗಂಭೀರವಾಗಿ ಆಲೋಚಿಸಿ, ಸಮಾಜದಲ್ಲಿ ಒಳ್ಳೆಯ ಪ್ರಜೆಯಾಗಿ ಬೆಳೆದುಕೊಳ್ಳಬೇಕು,” ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜಿ.ಕೆ. ದಾಕ್ಷಾಯಿಣಿ ಕರೆ ನೀಡಿದರು.
ನಗರದ ಮಹಾವೀರ ವೃತ್ತದ ಬಳಿಯ ವಾಣಿವಿಲಾಸ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ ಹಾಗೂ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ವಿಶ್ವ ಆತ್ಮಹತ್ಯೆ ದಿನದ ಅಂಗವಾಗಿ ಹಾಗೂ ಖಾಯಂ ಜನತಾ ನ್ಯಾಯಾಲಯ ಕುರಿತಂತೆ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಗಿಡಕ್ಕೆ ನೀರು ಎರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ದಾಕ್ಷಾಯಿಣಿ ಅವರು, ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು, ವಿಶೇಷವಾಗಿ ಎಸ್.ಎಸ್.ಎಲ್.ಸಿ. ಮತ್ತು ಪಿಯು ಪರೀಕ್ಷೆಗಳಲ್ಲಿ ಫೇಲಾಗುವವರು ಅಥವಾ ಕಡಿಮೆ ಅಂಕಗಳಿಸುವವರು ಆತ್ಮಹತ್ಯೆಗೆ ಮುಂದಾಗುತ್ತಿರುವುದರ ಬಗ್ಗೆ ಚಿಂತನೆ ವ್ಯಕ್ತಪಡಿಸಿದರು.
ಫೇಲ್ ಆದರೆ ಜೀವನ ಮುಗಿಯುವುದಿಲ್ಲ. ಬದಲಿಗೆ ಅದು ಹೊಸ ಅವಕಾಶಕ್ಕೆ ದಾರಿ ತೋರಬಹುದು. ಆದ್ದರಿಂದ ವಿದ್ಯಾರ್ಥಿಗಳು ಮನಸ್ಸು ಗಟ್ಟಿಗೊಳಿಸಿ ಓದುವುದರ ಕಡೆ ಹೆಚ್ಚು ಗಮನ ಕೊಡಬೇಕು. ಏನಾದರೂ ಸಾಧನೆ ಮಾಡುವ ಛಲವನ್ನು ಬೆಳೆಸಿಕೊಂಡರೆ ಜೀವನವನ್ನು ಉತ್ತಮವಾಗಿ ಕಟ್ಟಿಕೊಳ್ಳಬಹುದು. ಹೆಣ್ಣು ಮಕ್ಕಳು ಆಗಲಿ, ಗಂಡು ಮಕ್ಕಳು ಆಗಲಿ, ಸಮಾಜದಲ್ಲಿ ಉತ್ತಮ ಪ್ರಜೆಯಾಗುವುದು ಪ್ರತಿಯೊಬ್ಬರ ಹೊಣೆಗಾರಿಕೆ ಎಂದು ಅವರು ಸಲಹೆ ನೀಡಿದರು.
ದಾಕ್ಷಾಯಿಣಿ ಅವರು ಮುಂದುವರೆದು, ಪೋಕ್ಸೊ ಕಾಯಿದೆ ಬಗ್ಗೆ ಪ್ರತಿಯೊಬ್ಬ ವಿದ್ಯಾರ್ಥಿಗೂ ಅರಿವು ಅಗತ್ಯ. ತಪ್ಪು ಮಾಡಿದಾಗ ಬಹಳ ಬಾರಿ ತಪ್ಪು ಎಸಗಿದ ವ್ಯಕ್ತಿಗೇ ತನ್ನ ತಪ್ಪಿನ ಅರಿವು ಇರುವುದಿಲ್ಲ. ಆದರೆ ಕಾನೂನು ಯಾರನ್ನೂ ಬಿಟ್ಟುಕೊಡುವುದಿಲ್ಲ. ಎಷ್ಟೇ ಶ್ರೀಮಂತರಾಗಿದ್ದರೂ ತಪ್ಪು ಮಾಡಿದರೆ ಶಿಕ್ಷೆ ಕಟ್ಟಿಟ್ಟ ಬುತ್ತಿ. ಪೋಕ್ಸೊ ಕಾಯಿದೆಯಡಿ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಗಂಡು-ಹೆಣ್ಣು ಮಕ್ಕಳಿಗೆ ಸಮಾನವಾಗಿ ಜಾಗೃತಿ ಅಗತ್ಯವಿದೆ. ದೌರ್ಜನ್ಯಕ್ಕೆ ಒಳಗಾದಾಗ ಕಾನೂನು ಬಲವಾಗಿ ನಿಂತು ನ್ಯಾಯ ಒದಗಿಸುತ್ತದೆ. ಆದ್ದರಿಂದ ಆತ್ಮವಿಶ್ವಾಸ ಕಳೆದುಕೊಳ್ಳದೆ ಕಾನೂನು ಮಾರ್ಗವನ್ನು ನಂಬಬೇಕು ಎಂದರು.
ಈ ಸಂದರ್ಭದಲ್ಲಿ ವಾಣಿವಿಲಾಸ ಪದವಿಪೂರ್ವ ಕಾಲೇಜು ಪ್ರಾಂಶುಪಾಲೆ ಮಲ್ಲಿಗೆಮ್ಮ, ವಕೀಲರ ಸಂಘದ ಅಧ್ಯಕ್ಷ ಕಾರ್ಲೇ ಮೊಗಣ್ಣಗೌಡ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ. ನಾಗೇಶ್ ಪಿ. ಆರಾಧ್ಯ, ಉಪನ್ಯಾಸಕ ಆರ್. ರಂಗರಾಜು ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಅಶ್ವಿನಿ ಮತ್ತು ಸಂಜನಾ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ರವೀಂದ್ರ ನಡೆಸಿಕೊಟ್ಟರು.
;;;;;;;;;;;;; ;;;;;;;;;;;;;;;;; ;;;;;;;;;;;;;;;;; ;;;;;;;;;;;;;;;;;; ;;;;;;;;;;;;;;;;; ;;;;;;;;;;;;;;
—
Srinivasa……..
I LIKE GOOD FRIEND ONLY