ಇಂಫಾಲ : ಮೈಥಿ ಸಮುದಾಯಕ್ಕೆ ಪರಿಶಿಷ್ಟ ಪಂಗಡದ (Scheduled Tribe) ಸ್ಥಾನಮಾನದ ಕುರಿತು ಶಿಫಾರಸು ಮಾಡಿದ್ದ ವಿಚಾರ ಮಣಿಪುರದಲ್ಲಿ (Manipur) ದೊಡ್ಡ ಕೋಲಾಹಲವನ್ನೇ ಸೃಷ್ಟಿ ಮಾಡಿತ್ತು. ಇದೇ ಆದೇಶವು ಮಣಿಪುರದಲ್ಲಿ ಭಾರೀ ಜನಾಂಗೀಯ ಹಿಂಸಾಚಾರಕ್ಕೆ ಕಾರಣವಾಗಿದ್ದು, ಬುಡಕಟ್ಟು ಕುಕಿ ಸಮುದಾಯವು ನ್ಯಾಯಾಲಯದ ನಿರ್ದೇಶನವನ್ನು ವಿರೋಧಿಸಿತ್ತು.
ಈ ಹಿನ್ನೆಲೆಯಲ್ಲಿ ಮಣಿಪುರದಲ್ಲಿ ಕುಕಿ ಮತ್ತೂ ಮೇಥಿ ಸಮುದಾಯದ ನಡುವೆ ಭಾರೀ ಸಂಘರ್ಷ ಏರ್ಪಟ್ಟಿತ್ತು. ಆಗ ಪ್ರಧಾನಿ ನರೇಂದ್ರ ಮೋದಿ ಮಣಿಪುರಕ್ಕೆ ಭೇಟಿ ಕೊಡುತ್ತಿಲ್ಲ ಎಂದು ವಿರೋಧ ಪಕ್ಷಗಳು ಹೇಳಿದ್ದವು. ಆದರೆ, ನಾಳೆ ಪ್ರಧಾನಿ ನರೇಂದ್ರ ಮೋದಿ (Narendra Modi) ಮಣಿಪುರಕ್ಕೆ ಭೇಟಿ ಕೊಡುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ 13ರಂದು ಮಣಿಪುರಕ್ಕೆ ಭೇಟಿ ನೀಡಲಿದ್ದಾರೆ. ಮಣಿಪುರದ ಮುಖ್ಯ ಕಾರ್ಯದರ್ಶಿ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿಯವರ ಮಣಿಪುರ ಭೇಟಿ ಶಾಂತಿ ಮತ್ತು ಅಭಿವೃದ್ಧಿಗೆ ದಾರಿ ಮಾಡಿಕೊಡುತ್ತದೆ ಎಂದು ಹೇಳಿದ್ದಾರೆ.
ನಾಳೆ ಮಧ್ಯಾಹ್ನ 12:15ಕ್ಕೆ ಪ್ರಧಾನಿ ಮೋದಿ ಮಿಜೋರಾಂ ರಾಜಧಾನಿ ಐಜ್ವಾಲ್ನಿಂದ ಮಣಿಪುರದ ಚುರಚಂದಪುರ ತಲುಪಲಿದ್ದಾರೆ. ಚುರಚಂದಪುರದಲ್ಲಿ ಸ್ಥಳಾಂತರಗೊಂಡ ಜನರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಹಲವು ಅಭಿವೃದ್ಧಿ ಯೋಜನೆಗಳಿಗೆ ಅಡಿಗಲ್ಲು ಹಾಕಲಿದ್ದಾರೆ.