Home ದೇಶ ಅಯೋಧ್ಯೆಯಲ್ಲಿ ದಿನಕ್ಕೆ 6ರಿಂದ 8 ಲಕ್ಷ ರೂಪಾಯಿಗಳ ತನಕ ಲೂಟಿಯಾಗಿದೆ: ತನಿಖಾ ತಂಡ ಅಂದಾಜು

ಅಯೋಧ್ಯೆಯಲ್ಲಿ ದಿನಕ್ಕೆ 6ರಿಂದ 8 ಲಕ್ಷ ರೂಪಾಯಿಗಳ ತನಕ ಲೂಟಿಯಾಗಿದೆ: ತನಿಖಾ ತಂಡ ಅಂದಾಜು

0

ಅಯೋಧ್ಯೆ ರಾಮಮಂದಿರದಲ್ಲಿ ಪ್ರತಿದಿನ 6 ರಿಂದ 8 ಲಕ್ಷ ರೂಪಾಯಿ ದೇಣಿಗೆ ಹಣ ದುರುಪಯೋಗವಾಗಿರಬಹುದು ಎಂದು ವಿಶೇಷ ತನಿಖಾ ತಂಡ (SIT) ಅಂದಾಜಿಸಿದೆ. ವರದಿಗಳ ಪ್ರಕಾರ, ಈ ದೇಣಿಗೆ ಕಳ್ಳತನದ ಪ್ರಕರಣ ಬೆಳಕಿಗೆ ಬರುವ ಮುನ್ನ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಬ್ಯಾಂಕ್ ಖಾತೆಗಳಿಗೆ ಪ್ರತಿದಿನ 16 ರಿಂದ 18 ಲಕ್ಷ ರೂಪಾಯಿ ದೇಣಿಗೆ ಹರಿದು ಬರುತ್ತಿತ್ತು. ಆದರೆ, ಪ್ರಕರಣ ದಾಖಲಾದ ನಂತರ ಬ್ಯಾಂಕ್ ಖಾತೆಗಳಿಗೆ ಜಮೆಯಾಗುವ ದೈನಂದಿನ ದೇಣಿಗೆ ಮೊತ್ತ 24 ರಿಂದ 26 ಲಕ್ಷ ರೂಪಾಯಿಗೆ ಏರಿಕೆಯಾಗಿದೆ ಎಂದು ಬ್ಯಾಂಕ್ ಅಧಿಕಾರಿಗಳು ಎಸ್‌ಐಟಿಗೆ ತಿಳಿಸಿದ್ದಾರೆ.

ನಗದು ದೇಣಿಗೆಯನ್ನು ಎಸ್‌ಬಿಐ ಬ್ಯಾಂಕ್ ಖಾಸಗಿ ಏಜೆನ್ಸಿಯೊಂದರ ಜೊತೆಗೂಡಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದು, ದೇಣಿಗೆ ಎಣಿಕೆ ಪ್ರಕ್ರಿಯೆಯನ್ನು ನಿವೃತ್ತ ಬ್ಯಾಂಕ್ ಉದ್ಯೋಗಿ ಸುಭಾಷ್ ಶ್ರೀವಾಸ್ತವ ಎಂಬುವರು ಮೇಲ್ವಿಚಾರಣೆ ನಡೆಸುತ್ತಿದ್ದರು. ದೇಣಿಗೆ ಹಣ ನಾಪತ್ತೆಯಾಗುತ್ತಿರುವ ಬಗ್ಗೆ ಸಹೋದ್ಯೋಗಿಯೊಬ್ಬರು ಅವರ ಗಮನಕ್ಕೆ ತಂದಾಗ, ದೇವರು ಎಲ್ಲವನ್ನೂ ನೋಡುತ್ತಿದ್ದಾನೆ, ಇದು ನಿನ್ನ ಮನೆಯಿಂದಾಗಲಿ ಅಥವಾ ನನ್ನ ಮನೆಯಿಂದಾಗಲಿ ಹೋಗುತ್ತಿಲ್ಲ ಎಂದು ಅವರು ಪ್ರತಿಕ್ರಿಯಿಸಿದ್ದರು ಎನ್ನಲಾಗಿದೆ.

ಟ್ರಸ್ಟ್‌ನೊಂದಿಗೆ ಮಾಡಿಕೊಂಡ ಒಪ್ಪಂದದಲ್ಲಿನ ವ್ಯತ್ಯಾಸಗಳು ಮತ್ತು ನೀತಿ ಬದಲಾವಣೆಗಳ ಕುರಿತು ಎಸ್‌ಐಟಿ ಬ್ಯಾಂಕ್ ಅಧಿಕಾರಿಗಳನ್ನು ಪ್ರಶ್ನಿಸಿದ್ದು, ಶಂಕಿತ ಅಕ್ರಮಗಳನ್ನು ಉನ್ನತ ಅಧಿಕಾರಿಗಳ ಗಮನಕ್ಕೆ ಏಕೆ ತರಲಿಲ್ಲ ಎಂದು ಕೇಳಿದೆ. ನಗದು ಎಣಿಕೆಯಲ್ಲಿ ಖಾಸಗಿ ಭದ್ರತಾ ಏಜೆನ್ಸಿಯ ಪಾತ್ರದ ಕುರಿತೂ ಪ್ರಶ್ನೆಗಳನ್ನು ಎತ್ತಲಾಗಿದ್ದು, ಟ್ರಸ್ಟ್‌ನ ವಾರ್ಷಿಕ ಆಡಿಟ್ ವರದಿಗಳು, ಹಣಕಾಸು ದಾಖಲೆಗಳು ಮತ್ತು ಇತರ ಪ್ರಮುಖ ದಾಖಲೆಗಳನ್ನು ಒದಗಿಸುವಂತೆ ಎಸ್‌ಐಟಿ ಕೋರಿದೆ. ತನಿಖೆಯ ಭಾಗವಾಗಿ ಇವುಗಳನ್ನು ಮರು ಆಡಿಟಿಂಗ್ ಮಾಡಲು ಎಸ್‌ಐಟಿ ಪರಿಶೀಲಿಸುತ್ತಿದೆ.

ಇದೇ ವೇಳೆ, ತಮ್ಮ ಕುಟುಂಬದ ವತಿಯಿಂದ ದೇಣಿಗೆಯಾಗಿ ನೀಡಲಾಗಿದ್ದ 5 ಕೋಟಿ ರೂಪಾಯಿ ಮೌಲ್ಯದ ಚಿನ್ನದ ಲೇಪಿತ ರಾಮಚರಿತ ಮಾನಸ್ ಗ್ರಂಥವನ್ನು ಅಯೋಧ್ಯೆ ರಾಮಮಂದಿರದಿಂದ ಹೊರಗೆ ಸಾಗಿಸಲಾಗಿದೆ ಎಂದು ಮಾಜಿ ಐಎಎಸ್ ಅಧಿಕಾರಿ ಎಸ್. ಲಕ್ಷ್ಮೀನಾರಾಯಣನ್ ಆರೋಪಿಸಿದ್ದಾರೆ. 2024 ರ ಏಪ್ರಿಲ್‌ನಲ್ಲಿ ತಾವು ಈ ಕಾಣಿಕೆಯನ್ನು ಟ್ರಸ್ಟ್‌ಗೆ ಹಸ್ತಾಂತರಿಸಿದ್ದಾಗಿ ಮತ್ತು ನಂತರ ಅದನ್ನು ಮಂದಿರದ ಆವರಣದಿಂದ ಸ್ಥಳಾಂತರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಆದರೆ, ಮಂದಿರಕ್ಕೆ ಬರುವ ಪ್ರತಿಯೊಂದು ಕಾಣಿಕೆಯನ್ನೂ ಮಂದಿರದಲ್ಲೇ ಪ್ರದರ್ಶಿಸಲು ಸಾಧ್ಯವಿಲ್ಲ ಎಂದು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಮಗೆ ತಿಳಿಸಿರುವುದಾಗಿ ಅವರು ಬಹಿರಂಗಪಡಿಸಿದ್ದಾರೆ.

ಇನ್ನು ಕೆಲವು ದಿನಗಳ ಹಿಂದಷ್ಟೇ, ಮಂದಿರಕ್ಕೆ ದೇಣಿಗೆಯಾಗಿ ಬಂದಿದ್ದ ಅಪಾರ ಪ್ರಮಾಣದ ಬೆಳ್ಳಿ ಇಟ್ಟಿಗೆಗಳು ಮತ್ತು ಕಡ್ಡಿಗಳು ನಾಪತ್ತೆಯಾಗಿವೆ ಎಂದು ವಿರೋಧ ಪಕ್ಷಗಳು ಹಾಗೂ ಭಾರತೀಯ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ ಆರೋಪಿಸಿದ್ದವು.

You cannot copy content of this page

Exit mobile version