ದೆಹಲಿ: ಭೂತಾನ್‌ಗೆ ಇ20 (E20) ಪೆಟ್ರೋಲ್ ಪೂರೈಕೆ ಮಾಡುವ ಕುರಿತು ಮಾಧ್ಯಮಗಳ ಕೆಲವು ವಿಭಾಗಗಳಲ್ಲಿ ವರದಿಯಾಗುತ್ತಿರುವ ಸುದ್ದಿಗಳು ಸಂಪೂರ್ಣವಾಗಿ ಸುಳ್ಳು ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಸ್ಪಷ್ಟನೆ ನೀಡಿದೆ. ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) ಭೂತಾನ್‌ಗೆ ಇಂತಹ ಯಾವುದೇ ಆಫರ್ ನೀಡಿಲ್ಲ ಎಂದು ಸರ್ಕಾರ ತಿಳಿಸಿದೆ.
ಭೂತಾನ್‌ಗೆ ಇ20 ಪೆಟ್ರೋಲ್ ರಫ್ತು ಮಾಡುವ ಯಾವುದೇ ಪ್ರಸ್ತಾವನೆ ಸಲ್ಲಿಕೆಯಾಗಿಲ್ಲ. ಹೀಗಾಗಿ ಭೂತಾನ್ ದೇಶವು ಈ ಪ್ರಸ್ತಾಪವನ್ನು ತಿರಸ್ಕರಿಸಿದೆ ಎಂಬ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಮತ್ತು ಅಂತಹ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸಚಿವಾಲಯವು ಸ್ಪಷ್ಟಪಡಿಸಿದೆ.
ಸಾರ್ವಜನಿಕರು ಮತ್ತು ಮಾಧ್ಯಮಗಳು ಕೇವಲ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಹಾಗೂ ತೈಲ ಮಾರುಕಟ್ಟೆ ಕಂಪನಿಗಳು ಬಿಡುಗಡೆ ಮಾಡುವ ಅಧಿಕೃತ ಮಾಹಿತಿಯನ್ನು ಮಾತ್ರ ಅವಲಂಬಿಸಬೇಕು ಎಂದು ಕೋರಿದೆ.
