“..ಮಹಿಳಾ ಶೋಷಣೆಯ ಅಮಾನವೀಯ ಹೆರಿಗೆ, ಬೆತ್ತಲೆ ಸೇವೆ, ಅರೆಬೆತ್ತಲೆ ಸೇವೆ ಅಥವಾ ಬೇವಿನುಡುಗೆ ಬಗ್ಗೆ ಇಲ್ಲಿ ನೋಡಿದ್ದೇವೆ. ಇನ್ನೂ ಕೆಲವು ಲೈಂಗಿಕತೆ ಸಂಬಂಧಿ ಆಚರಣೆಗಳನ್ನು ಈಗ ನೋಡೋಣ..” ನಿಖಿಲ್ ಕೋಲ್ಪೆಯವರ ಬರಹದಲ್ಲಿ
ಉಳ್ಳವರು ಮತ್ತು ಮೇಲು ಜಾತಿ ಎಂದು ಕರೆದುಕೊಳ್ಳುವವರು ತಮಗಿಂತ ದುರ್ಬಲರನ್ನು, ಅದರಲ್ಲೂ ಹೆಣ್ಣುಮಕ್ಕಳನ್ನು ಲೈಂಗಿಕವಾಗಿ ಶೋಷಿಸಲು ಧರ್ಮದ ಹೆಸರಿನಲ್ಲಿ ಹಲವಾರು ದಾರಿಗಳನ್ನು ಕಂಡುಕೊಂಡಿದ್ದಾರೆ. ಇದರಲ್ಲಿ ಈ ಕೆಳಜಾತಿ ಎನಿಸಿಕೊಳ್ಳುವ, ಹಿಂದುಳಿದ ಜಾತಿಗಳ ಬಲಾಢ್ಯರೂ ಸೇರಿಕೊಂಡಿರುವುದರಲ್ಲಿ ಯಾವುದೇ ಆಶ್ಚರ್ಯ ಇಲ್ಲ. ಕೆಲವು ಸಲ ಕೇವಲ ಅಜ್ಞಾನ, ಭಯ, ಒತ್ತಡ, ಲಾಲಸೆ ಮತ್ತು ಮೂಢನಂಬಿಕೆಗಳೇ ಜನರನ್ನು ಬಲಿಪಶುಗಳನ್ನಾಗಿ ಮಾಡುತ್ತವೆ. ಪ್ರತಿಭಟಿಸದಿರುವ ಮತ್ತು ವಿರೋಧಿಸದೇ ಒಪ್ಪಿಕೊಳ್ಳುವ ಸಾಮೂಹಿಕ ಮನೋಭಾವವೇ ಇವುಗಳನ್ನು ಮುಂದುವರಿಸಿಕೊಂಡು ಹೋಗಲು ಅನುಕೂಲವಾಗುತ್ತದೆ. ಕೇವಲ ಸರಕಾರದ ಮತ್ತು ಕೆಲವು ಸಂಘಸಂಸ್ಥೆಗಳ ಪ್ರಯತ್ನಗಳಷ್ಟೇ ಸಾಲವು. ಮಹಿಳಾ ಶೋಷಣೆಯ ಅಮಾನವೀಯ ಹೆರಿಗೆ, ಬೆತ್ತಲೆ ಸೇವೆ, ಅರೆಬೆತ್ತಲೆ ಸೇವೆ ಅಥವಾ ಬೇವಿನುಡುಗೆ ಬಗ್ಗೆ ಇಲ್ಲಿ ನೋಡಿದ್ದೇವೆ. ಇನ್ನೂ ಕೆಲವು ಲೈಂಗಿಕತೆ ಸಂಬಂಧಿ ಆಚರಣೆಗಳನ್ನು ಈಗ ನೋಡೋಣ. ಇವೆಲ್ಲವೂ ಹಿಂದೆ ಹೇಳಿರುವ ಎರಡು ದಶಕಗಳ ಹಿಂದೆ ನಡೆದ ಸರಕಾರಿ ಪ್ರಾಯೋಜಿತ ಕಿರು ದಾಖಲಾತಿ ಕಾರ್ಯಕ್ರಮದಲ್ಲಿ ಕಂಡುಬಂದವುಗಳ ಮೇಲೆ ಆಧರಿತವಾದದ್ದು ಮತ್ತು ಪ್ರಸ್ತುತ ಪರಿಸ್ಥಿತಿ ಏನು ಎಂಬ ಬಗ್ಗೆ ತಿಳಿದುಕೊಳ್ಳಲು ನನಗೆ ಯಾವುದೇ ಅವಕಾಶ ಅಥವಾ ಸಾಧ್ಯತೆಗಳಿಲ್ಲ ಎಂದು ಮತ್ತೆಮತ್ತೆ ಸ್ಪಷ್ಟಪಡಿಸಬೇಕಾಗಿದೆ.
ತಮಗೆ ಗುರುತು ಪರಿಚಯ ಇಲ್ಲದವರ ಜೊತೆ ಲೈಂಗಿಕ ಸಂಬಂಧ ಬೆಳೆಸುವುದು, ಮಕ್ಕಳಿಲ್ಲದವರು ಮಕ್ಕಳಾಗುವ ಆಸೆಯಿಂದ ಅಪರಿಚಿತರ ಜೊತೆಗೆ ದೇವರ ಹೆಸರಿನಲ್ಲಿ ಲೈಂಗಿಕ ಸಂಬಂಧ ಬೆಳೆಸುವುದು, ಮಕ್ಕಳಾಗುತ್ತವೆ ಎಂದು ನಂಬಿ ಮಹಿಳೆಯರು ರಾತ್ರಿಯ ಸಮಯದಲ್ಲಿ ಬೆತ್ತಲಾಗಿ ಊರಲ್ಲಿ ಸುತ್ತುವುದು ಇತ್ಯಾದಿ ಅಮಾನವೀಯ ಆಚರಣೆಗಳು ನಮ್ಮ ಕರ್ನಾಟಕದಲ್ಲಿ ನಡೆಯುತ್ತವೆ ಎಂದರೆ ಎಲ್ಲರಿಗೂ ಆಶ್ಚರ್ಯ ಆಗಬಹುದು. ಆದರೆ, ಮೇಲೆ ಹೇಳಿದ ದಾಖಲಾತಿಯ ಸಮಯದಲ್ಲಿ ಇವೆಲ್ಲವೂ ನಡೆಯುತ್ತಿದ್ದವು. ಈಗಲೂ ನಡೆಯುತ್ತಿವೆಯೋ ಎಂಬುದನ್ನು ತಮ್ಮ ಸುತ್ತಮುತ್ತಲೂ ಗಮನಿಸಿ, ಓದುಗರಾದ ನೀವೇ ಹೇಳಬೇಕು.
ದಾಖಲಾತಿಯ ವೇಳೆಯಲ್ಲಿ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿ ರಂಗನ ಬೆಟ್ಟ ಪರಿಸರದಲ್ಲಿ, ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕೆಂಗೊಂಡ, ಕಲಬುರ್ಗಿ ಜಿಲ್ಲೆಯ ಭೂಪಾಲ ತ್ಯಾಗನೂರು ಗ್ರಾಮದಲ್ಲಿ ಈ ರೀತಿಯ ಆಚರಣೆಗಳು ನಡೆಯುತ್ತಿದ್ದವು. ಚಾಮರಾಜನಗರ ಜಿಲ್ಲೆಯ ನಂಜನಗೂಡಿನಲ್ಲಿ, ತುಮಕೂರಿನ ದೇವರಾಯ ಬೆಟ್ಟದ ಬಳಿ, ಮಂಡ್ಯ ಜಿಲ್ಲೆಯ ಮಳವಳ್ಳಿಯ ಒಂದು ದೇವಾಲಯದ ಜಾತ್ರೆಯ ಸಮಯದಲ್ಲಿ ಇಂತಾ ಆಚರಣೆಗಳು ನಡೆಯುತ್ತಿವೆ ಎಂಬ ಪ್ರಾಥಮಿಕ ಮಾಹಿತಿಗಳಿದ್ದರೂ, ಅವುಗಳನ್ನು ಆಗ ದೃಢಪಡಿಸಿಕೊಳ್ಳಲು ಆಗಿರಲಿಲ್ಲ.
ಬಿದಿರುಮೆಳೆ ಉತ್ಸವ
ರಾಜ್ಯದ ಪ್ರಮುಖ ಪ್ರವಾಸಿ ತಾಣವಾದ ಬಿಳಿಗಿರಿರಂಗನ ಬೆಟ್ಟದ ಸುತ್ತಮುತ್ತಲಿನ ಪ್ರದೇಶಗಳು ವನ್ಯಜೀವಿಗಳಿಗಷ್ಟೇ ಅಲ್ಲದೇ ಸೋಲಿಗರೂ ಸೇರಿದಂತೆ ಬುಡಕಟ್ಟು ಜನರಿಗೆ ಆಶ್ರಯ ತಾಣ. ಇಲ್ಲಿನ ಬಿಳಿಗಿರಿ ರಂಗನಾಥಸ್ವಾಮಿ ಅಥವಾ ರಂಗಯ್ಯ ದೇವಸ್ಥಾನ ಬಹಳ ಪ್ರಸಿದ್ಧ. ರಂಗಯ್ಯ ಸೋಲಿಗರ ಹೆಣ್ಣನ್ನು ಮದುವೆಯಾಗಿ ಇಲ್ಲಿಯೇ ನೆಲೆಸಿದ, ಅವನು ತಮ್ಮ ಹತ್ತಿರದ ಸಂಬಂಧಿ ಎಂಬ ಖಚಿತ ನಂಬಿಕೆ ಸೋಲಿಗರಿಗೆ.
ಪ್ರತೀ ವರ್ಷ ನಡೆಯುವ ಜಾತ್ರೆಯಲ್ಲಿ ಬೇರೆಬೇರೆ ಕಡೆಗಳಿಂದ ಸಾವಿರಾರು ಜನರು ಸೇರುತ್ತಾರೆ. ಸೋಲಿಗರೂ ಬಂದು ಜಾತ್ರೆಯಲ್ಲಿ ಭಾಗವಹಿಸುತ್ತಾರೆ. ಹೀಗೆ ಬಂದ ಸೋಲಿಗರಲ್ಲಿ ಒಂದು ವರ್ಗದ ಮಂದಿ ಒಂದು ವಿಲಕ್ಷಣ ಸಂಪ್ರದಾಯ ಅನುಸರಿಸುತ್ತಿದ್ದರು. ಅದಕ್ಕೆ ಬಿದಿರುಮೆಳೆ ಉತ್ಸವ ಎಂದು ಹೆಸರು. ಆಗ ದೇವಾಲಯದ ಸುತ್ತಮುತ್ತಲಿನ ಪ್ರದೇಶಗಳ ಬಿದಿರುಮೆಳೆಗಳ ನಡುವೆ ಸೋಲಿಗ ಮಹಿಳೆಯರು ಅಪರಿಚಿತ ಪುರುಷರೊಂದಿಗೆ ಲೈಂಗಿಕ ಕ್ರಿಯೆಗಳಲ್ಲಿ ಪಾಲುಗೊಳ್ಳುತ್ತಾರೆ. ಹರಕೆಯ ರೂಪದಲ್ಲಿಯೂ ಕೆಲವರು ಭಾಗವಹಿಸುತ್ತಾರೆ.
ತಮ್ಮ ಸಂಬಂಧಿ, ಎಂದರೆ ಬಾವನಾದ ರಂಗನಾಥನ ಮನರಂಜನೆಗಾಗಿ ಇದನ್ನು ಮಾಡುತ್ತೇವೆ ಎಂಬುದು ಅವರ ಬಲವಾದ ನಂಬಿಕೆ! ವಿಶೇಷವೆಂದರೆ, ಇದರಲ್ಲಿ ಭಾಗವಹಿಸುವವರೆಲ್ಲರೂ ಸೋಲಿಗ ಮಹಿಳೆಯರಾಗಿದ್ದರೂ, ಅದರ ದುರ್ಲಾಭ ಪಡೆಯುವವರು ಸೋಲಿಗರಲ್ಲದೇ ಬೇರೆಬೇರೆ ಜನಾಂಗಗಳ ಪುರುಷರಾಗಿರುತ್ತಾರೆ. ಆದಿಮ ಜನಾಂಗದ ಮುಕ್ತ ಲೈಂಗಿಕತೆಯ ಸಂಕೇತವಾದ ಆಚರಣೆ ಇದಾಗಿರಬಹುದಾದರೂ, ಇದನ್ನೊಂದು ಶೋಷಕ ವ್ಯವಸ್ಥೆಯನ್ನಾಗಿ ಆಚರಣೆಗೆ ತಂದವರು ಯಾರು ಮತ್ತು ಯಾವತ್ತಿನಿಂದ ಇದು ನಡೆಯುತ್ತಿತ್ತು ಎಂಬುದು ಯಾರಿಗೂ ಗೊತ್ತಿಲ್ಲ. ಇಂತಾ ಸಂದರ್ಭಗಳ ಕಾರಣದಿಂದ ಮಕ್ಕಳೇನಾದರೂ ಹುಟ್ಟಿದರೆ, ಅವುಗಳನ್ನು ಬಿಳಿಗಿರಿರಂಗನ ಪ್ರಸಾದ ಎಂದು ಭಾವಿಸಿ, ಯಾವುದೇ ಭೇದಭಾವ ಮಾಡದೇ ಹಾಕುವಷ್ಟು ಈ ನಂಬಿಕೆ ಬಲವಾಗಿತ್ತು. ಈ ದಾಖಲಾತಿ ನಡೆದ ಹೊತ್ತಿಗೆ ಜಾತ್ರೆಯ ವೇಳೆಯಲ್ಲಿ ದೇವಾಲಯದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತಾದುದರಿಂದ ಎರಡು ಮೂರು ಕಿ.ಮೀ. ದೂರದೂರದಲ್ಲಿ ಇದು ನಡೆಯುತ್ತಿತ್ತು. ಈ ಕುರಿತು ಪ್ರತ್ಯಕ್ಷದರ್ಶಿ ಸಾಕ್ಷ್ಯವೂ ಇತ್ತು.
ಸಾಮೂಹಿಕ ಸಂಭೋಗ
ಈ ದಾಖಲಾತಿ ಹೊತ್ತಿಗೆ, ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕೆಂಗೊಂಡ ಎಂಬಲ್ಲಿ ನಡೆಯುವ ಜಾತ್ರೆಯು ಸಾಮೂಹಿಕ ಸಂಭೋಗಕ್ಕೆ ಕುಖ್ಯಾತವಾಗಿತ್ತು. ಲಂಬಾಣಿ ಸಮುದಾಯದ ಕೆಲವರು ಸೇರಿ ನಡೆಸುವ ಈ ಆಚರಣೆಯು ಮಧ್ಯರಾತ್ರಿ ಆರಂಭವಾಗಿ ಬೆಳಗ್ಗಿನ ಜಾವದ ತನಕ ನಡೆಯುತ್ತಿತ್ತು. ದೇವಾಲಯದ ಸುತ್ತಮುತ್ತಲಿನ ಗಿಡಗಂಟಿಗಳ ಮರೆಯಲ್ಲಿ ಮದ್ಯಪಾನ ಮಾಡಿ, ಸಾಮೂಹಿಕ ಮತ್ತು ಎಗ್ಗಿಲ್ಲದ ರೇವ್ ಪಾರ್ಟಿಯಂತೆ ಇದು ನಡೆಯುತ್ತಿತ್ತು. ಇದು ಎಷ್ಟು ಕುಖ್ಯಾತಿ ಪಡೆದಿತ್ತು ಎಂದರೆ, ಯಾರನ್ನಾದರೂ “ಕೆಂಕೊಂಡಕ್ ಹೋಗಿದ್ದಿ?” ಎಂದು ಚುಡಾಯಿಸುವುದು ಸಾಮಾನ್ಯವಾಗಿತ್ತು. ನಂತರ ಪೊಲೀಸರ ಬಿಗು ಕ್ರಮದಿಂದಾಗಿ ಇದು ಕಡಿಮೆಯಾಗಿತ್ತು ಎಂದು ಕೇಳಿದ್ದೇನೆ. ಕೆಲವು ಗುಡಿಗಳಲ್ಲಿ ಕೆಳ ವರ್ಗದ ದಂಪತಿಗಳು ಆವರಣದ ಒಳಗೆಯೇ ಈ ರೀತಿಯ ಸಾಮೂಹಿಕ ಆಚರಣೆ ನಡೆಸುತ್ತಾರೆ ಎಂದು ತಿಳಿದುಬಂದಿತ್ತಾದರೂ, ದಾಖಲಾತಿಯ ಸಂಪನ್ಮೂಲ ಮತ್ತು ಸಮಯದ ಸೀಮಿತತೆಯಲ್ಲಿ ಇದನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ.
ಮಕ್ಕಳಾಗದವರ ಬೆತ್ತಲೆ ತಿರುಗಾಟ
ಕಲಬುರ್ಗಿ ಜಿಲ್ಲೆಯ ಭೂಪಾಲ ತ್ಯಾಗನೂರು ಎಂಬಲ್ಲಿ ಊರಿನ ಮಾದಿಗ ಸಮುದಾಯದಲ್ಲಿ ಮದುವೆಯಾದ ಮಹಿಳೆಗೆ ಮಕ್ಕಳಾಗದೇ ಇದ್ದಲ್ಲಿ, ಆಕೆ ಬತ್ತಲಾಗಿ ಊರಿಡೀ ತಿರುಗಬೇಕು ಎಂದು ನಿರ್ಧರಿಸಲಾಗುತ್ತಿತ್ತು. ಈ ಅಮಾನವೀಯ ಪದ್ಧತಿಯಲ್ಲಿ ಆಕೆಯ ಸಂಬಂಧಿಕರು, ನೆರೆಹೊರೆಯವರು ಸ್ನಾನ ಮಾಡಿಸಿ, ಕೆಲವು ವಿಧಿವಿಧಾನಗಳೊಂದಿಗೆ ಅರಿಶಿನ ಕುಂಕುಮದಿಂದ ಅಲಂಕಾರ ಮಾಡುತ್ತಾರೆ. ಆಕೆ ರಾತ್ರಿಯ ವೇಳೆ ಮಾರಮ್ಮನ ಹೆಸರು ಹೇಳಿಕೊಂಡು ಬೆತ್ತಲೆಯಾಗಿ ಊರು ತಿರುಗಲು ಹೋಗುತ್ತಾಳೆ. ನಂತರ ಏನು ನಡೆಯುತ್ತದೆ ತಿಳಿಯದು. ಇಂತದ್ದೊಂದು ಪದ್ಧತಿ ಇರುವಲ್ಲಿ ಮಕ್ಕಳಾಗದ ಮಹಿಳೆಯ ಪರಿಸ್ಥಿತಿ ಹೇಗಿರಬಹುದೆಂದು ನೀವು ಊಹಿಸಬಹುದು.
ಕುಲಗೂಡಿಸುವುದು, ನಾಲಿಗೆಗೆ ಬರೆ
ಮಂಡ್ಯ ಜಿಲ್ಲೆಯ ಹಲವಾರು ಹಳ್ಳಿಗಳಲ್ಲಿ ಕುಲಗೂಡಿಸುವುದು ಎಂಬೊಂದು ಪದ್ಧತಿಯು ದಲಿತರು ಮತ್ತು ಹಿಂದುಳಿದ ಜಾತಿಗಳಲ್ಲಿ ಆಚರಣೆಯಲ್ಲಿತ್ತು. ಹೆಣ್ಣು ಕುಲಗೆಟ್ಟಿದ್ದಾಳೆ ಎಂದು ಭಾವಿಸಲಾದರೆ, ಆಕೆಯನ್ನು ಮತ್ತೆ ಕುಲಕ್ಕೆ ಸೇರಿಸಿಕೊಳ್ಳಲು ಈ ಆಚರಣೆ ನಡೆಯುತ್ತದೆ. ಆಕೆಯನ್ನು ಗಂಜಳ ಅಥವಾ ಸೆಗಣಿ ನೀರಿನಿಂದ ಸ್ನಾನ ಮಾಡಿಸಿ, ಅದನ್ನೇ ಆಕೆಗೆ ಕುಡಿಸುತ್ತಾರೆ. ನಂತರ ಬೆಳ್ಳಿಯ ಕಡ್ಡಿಯೊಂದನ್ನು ಕಾಯಿಸಿ, ಆಕೆಯ ನಾಲಗೆ ಬರೆ ಹಾಕಲಾಗುತ್ತದೆ.
ದೇವಸ್ಥಾನದಲ್ಲಿ ಪತ್ನಿಗೆ ಹೊಡೆಸುವುದು
ದೇವಸ್ಥಾನದಲ್ಲಿ ಪತ್ನಿಗೆ ಹೊಡೆಸುವ ವಿಲಕ್ಷಣ ಪದ್ಧತಿಯೊಂದು ಉತ್ತರ ಕನ್ನಡ ಜಿಲ್ಲೆಯ ಅನಿಲ್ಗೋಡು ಎಂಬ ಊರಿನಲ್ಲಿ ಆಚರಿಸಲಾಗುತ್ತಿತ್ತು. ಪತ್ನಿ ವಿವಾಹ ಬಾಹಿರ ಸಂಬಂಧ ಹೊಂದಿದ್ದಾಳೆ ಎಂದೇನಾದರೂ ಪತಿಗೆ ಸಂಶಯ ಬಂದರೆ, ಆತ ಊರಿನ ದೇವಾಲಯಕ್ಕೆ ದೂರು ನೀಡುತ್ತಾನೆ. ಅಲ್ಲಿನ ಪೂಜಾರಿಯು ಆಕೆ ತಪ್ಪೊಪ್ಪಿಕೊಳ್ಳುವ ತನಕ ಆಕೆಗೆ ಹೊಡೆದು “ಪ್ರಾಯಶ್ಚಿತ್ತ” ಮಾಡುತ್ತಾನೆ.
ವಿಧವೆಯರಿಗೆ ವೇಶ್ಯೆಯರಿಂದ ಬೈಯ್ಯಿಸುವುದು
ದಾಖಲಾತಿಯ ವೇಳೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಚಂದಾವರ ಎಂಬ ಊರಿನಲ್ಲಿ ಜಾತ್ರೆಯ ದಿನದಂದು ಊರಿನ ವಿಧವೆ ಮಹಿಳೆಯರನ್ನು ಅವಮಾನಕಾರಕವಾಗಿ ನಿಂದಿಸಲಾಗುತ್ತದೆ ಮತ್ತು ಅದಕ್ಕಾಗಿಯೇ ವಿಶೇಷವಾಗಿ ಪೇಟೆಯಿಂದ ವೇಶ್ಯೆಯರನ್ನು ಕರೆಸಲಾಗುತ್ತದೆ ಎಂಬುದು ಬೆಳಕಿಗೆ ಬಂದಿತ್ತು. ಆದರೆ, ಈ ಕುರಿತು ಮಾಹಿತಿ ನೀಡಲು ಯಾರೂ ಮುಂದೆ ಬಂದಿರಲಿಲ್ಲ.
ಇವೆಲ್ಲವೂ ನೇರವಾಗಿ ಮಹಿಳೆಯನ್ನು, ಮುಖ್ಯವಾಗಿ ಕೆಳಜಾತಿ ಎನಿಸಿಕೊಂಡಿರುವ ಮಹಿಳೆಯನ್ನು ಗುರಿ ಮಾಡಿರುವಂತ ಆಚರಣೆಗಳು. ಸದ್ಯ ಇರುವ ಕಾನೂನುಗಳ ವ್ಯಾಪ್ತಿಯಲ್ಲಿಯೇ ಇವುಗಳಲ್ಲಿ ಕೆಲವನ್ನು ಮಟ್ಟಹಾಕಲು ಸಾಧ್ಯವಿದೆಯಾದರೂ, ಧಾರ್ಮಿಕ ನೆಪ ಹೊಂದಿರುವ ಮತ್ತು ಜನರ ಮನಸ್ಸಿನಲ್ಲಿ ಆಳವಾಗಿ ಬೇರುಬಿಟ್ಟಿರುವ ಕೆಲವನ್ನು ಸಂಪೂರ್ಣವಾಗಿ ತೊಡೆದುಹಾಕುವುದು ದೃಢ ಸಂಕಲ್ಪ, ಮನಃಪರಿವರ್ತನೆ, ಶಿಕ್ಷಣ ಇತ್ಯಾದಿಗಳು ಬೇಕಾಗುತ್ತವೆ. ಮೂಢನಂಬಿಕೆ ಆಳವಾಗಿರುವಾಗ ಕಾನೂನಿನ ಮೂಲಕ ತಡೆದರೂ, ಆ ಮನೋಭಾವವು ಸಾಯದೇ ಬೇರೊಂದು ರೂಪದಲ್ಲಿ ಮೈದಾಳುತ್ತದೆ ಅಥವಾ ಯಾರಿಗೂ ಗೊತ್ತಾಗದಂತೆ ಗುಟ್ಟಿನಲ್ಲಿ ನಡೆಯುತ್ತದೆ.
ಮುಂದಿನ ಕೆಳಜಾತಿಗಳ ಪುರುಷರನ್ನು ಅವಮಾನಿಸುವ ಕೆಲವು ವಿಚಿತ್ರ ಅಮಾನವೀಯ ಆಚರಣೆಗಳನ್ನು ಕಿರು ವಿವರಗಳೊಂದಿಗೆ ನೋಡೋಣ.