ಇಲ್ಲಿ ಎಲ್ಲವೂ ಒಂದಕ್ಕೊಂದು ಸಂಬಂಧಿತವಾದದ್ದು. ಮನೆಯ ಗೋಡೆಗೆ ಎಸೆದ ಚೆಂಡು ಹೇಗೆ ಹಿಂತಿರುಗಿಬರುತ್ತದೋ ಅಂದರೆ ಗ್ರಾವಿಟಿಯ ಮೇಲೆ ಎಲ್ಲವೂ ನಿಗದಿತ. ಹಾಗೇ ಬಾಲ್ಯದಲ್ಲಿ ನಾವು ಅನುಕರಣೆಯ ಮೂಲಕವೇ ಅಭ್ಯಾಸ ಮಾಡುವುದು ಅದೇ ಜ್ಞಾನದ ಮೂಲ.
ಆಗ ಸುಮಾರು ೧೯೯೯ ಬೆಂಗಳೂರಿನ ಬಾಡಿಗೆ ಮನೆಗೆ ಗೋಡೆಯ ಮೇಲ್ಲಾ ನನ್ನಪ್ಪ ಸಾಕಷ್ಟು ಬುದ್ಧನ ಚಿತ್ರ ಗಳನ್ನು ಬಿಡಿಸಿದ್ದರು. ಆಗ ಮನೆಯ ಮಾಲೀಕರಂತೂ ಇದಕ್ಕೆ ಯಾವ ನಿಷೇಧ ವನ್ನು ಹೇರಿರಲಿಲ್ಲ. ಇಂತಹ ಅವಕಾಶವಿದ್ದರೆ ಸಾಕು ಎನ್ನುತ್ತಿದ್ದ ಅಪ್ಪ ಪುಸ್ತಕದ ಕಪಾಟಿನ ಬಳಿ, ಸ್ವಿಚ್ಛ್ ಬೋರ್ಡ್ ಗಳ ತುದಿಯಲ್ಲಿ ಪುಸ್ತಕದ ಒಳಪುಟಗಳಲ್ಲಿ ಖಾಲಿ ಹಾಳೆಗಳ ಮೇಲೆಲ್ಲಾ ಚಿತ್ರದ ಸುರಿಮಳೆಯನ್ನೇ ಹರಿಸುತ್ತಿದ್ದರು. ನಾನು ಅವರನ್ನು ಅನುಕರಣೆ ಮಾಡಲು ಆಗಷ್ಟೇ ಪ್ರಯತ್ನಿಸುತ್ತಿದ್ದೆ. ಮನೆಗೆ ಅತಿಥಿಗಳು ಬಂದಾಗಲೆಲ್ಲಾ ನನ್ನ ಡ್ರಾಯಿಂಗ್ ಪುಸ್ತಕ, ಬಣ್ಣದ ಡಬ್ಬಿಗಳ ಬಾಚಿಕೊಂಡು ಅವರ ಮುಂದೆ ಏನ್ನನ್ನೋ ಬಿಡಿಸುತ್ತೇನೆಂದು ಕೂರುತ್ತಿದಾಕೆ ಎಳೆಯುತ್ತಿದ್ದ ಮೊದಲ ರೇಖೆಯೇ ಹಂಸ ಪಕ್ಷಿಯದು. ಆಗಿನ್ನು ನನಗೆ ಬಣ್ಣಗಳ ಅರಿವಿರಲಿಲ್ಲ. ಆಗ ಈಗಿನಷ್ಟು ತಂತ್ರಜ್ಞಾನ ಮುಂದುವರೆದಿರಲಿಲ್ಲ.ಅನಿಸಿದ್ದನ್ನು ಕೇವಲ ನಮ್ಮ ನಮ್ಮ ಆಲೋಚನೆ ಚಿಂತನೆಗಳ ಸಹಾಯದಿಂದಲೇ ಹಾಳೆಯ ಮೇಲೆ ಇಳಿಸಬೇಕಾಗಿತ್ತು.
ಪಕ್ಷಿಯನ್ನು ಕಣ್ಣಿಂದ ಕಾಣದಿದ್ದ ನಾನು ಕೇವಲ ಔಟ್ ಲೈನ್ಗಳ ಮೂಲಕ ಚಿತ್ರ ಬಿಡಿಸುತ್ತಿದ್ದೆ. ಬಣ್ಣದ ಬಳಕೆಯಾಗಲಿ ಅದನ್ನು ಹೇಗೆ ಎಲ್ಲಿ ಬಳಸಿದರೆ ಸೂಕ್ತ ಚೆಂದ ಎನ್ನುವ ಅರಿವೂ ಇಲ್ಲದೆ ರೇಖೆಯ ಗಡಿಯೊಳಗೆ ನನ್ನ ಪುಟ್ಟ ಬಾತು ಪಕ್ಷಿಗಳ ಯಾವುದೇ ಜೀವ ತುಂಬದೆ ಬಂಧಿಸುತ್ತಿದ್ದೆ. ಹೆಚ್ಚು ಕಡಿಮೆ ಎಲ್ಲಾ ಚಿತ್ರ ರೂಪದಲ್ಲಿ ಈ ಹಂಸ ಇದ್ದೇ ಇರುತ್ತಿತ್ತು.
ಈ ಕಥೆಯ ಹುರುಳೆಂದರೆ ಮನುಷ್ಯ ನ ಹುಟ್ಟು ಆರಂಭದಿಂದ ಅಂತ್ಯದ ವರೆಗೂ ಅನುಕರಣೆ ಎಂಬ ಸಾಧನದಿಂದಲೇ ಕಳೆದು ಹೋಗುತ್ತದೆಯೇ ಹೊರತು ನಮ್ಮದು ನಮ್ಮತನ ವೆಂಬುದ ಅರಿಯದಿದ್ದರೆ ನಾವುಗಳು ಮೃಗಗಳಂತಾಗುತ್ತವೆ ಅಂದರೆ ಕಠೋರ, ವ್ಯಾಘ್ರ, ಮಂದ ಬುದ್ದಿ, ಅಶಕ್ತ, ಹೀಗೆ ಒಂದಕ್ಕೊಂದು ತಾಳೆಯಿಲ್ಲದಂತಾಗುತ್ತೇವೆ. ಸ್ವತಃ ಕಲ್ಪನೆ ಹಾಗೂ ಅನುಭವದಿಂದ ಮೂಡುವುದೇ ಪ್ರಪಂಚದ ಅತ್ಯಂತ ಸುಂದರ ಚಿತ್ರ ಉಳಿದ್ದದ್ದೆಲ್ಲಾ ಚೌರ್ಯ ಎನ್ನಬಹುದು ಇದು ಎಲ್ಲಾ ವಿಷಯಕ್ಕೂ ಸಂಬಂಧಿಸಿದ್ದು.
ನಮ್ಮತನವನ್ನು ಉಳಿಸಿಕೊಂಡಷ್ಟು ದಿನ ನಮ್ಮನ್ನು ಯಾರೂ ಪ್ರಶ್ನಿಸಲೂ ಸಾಧ್ಯವಿರುವುದಿಲ್ಲ. ಎಲ್ಲವನ್ನೂ ಹೀಗೆ ಅರಿವಿನಿಂದ ಅರಿತಾಗ ಮೌನವೇ ನಮಗೆ ಅಲಂಕಾರ ವಾಗುತ್ತದೆ. ಬಣ್ಣಗಳ ಅರ್ಥಗಳ ಅರಿಯದೆ ಬಿಡಿಸಿದ ಚಿತ್ರ ವೂ ವಿಚಿತ್ರ ಮತ್ತು ವರ್ತಮಾನಕ್ಕೆ ಅದೂ ವ್ಯಂಗ್ಯ ಚಿತ್ರದಂತೆ ಕಾಣುತ್ತದೆ. ಬಣ್ಣಗಳು – ಭಾವನೆಗಳ ಪ್ರತಿಬಿಂಬಿಸುವಂತ್ತದ್ದು. ಏಳು ಬಣ್ಣದ ಕಾಮನಬಿಲ್ಲಿಗೂ ಏಳು ಸ್ವರದ ಹಾಡಿಗೂ ಒಂಬತ್ತು ಗ್ರಹಗಳಿಗೂ ನವ ರಸಗಳಿಗೂ ಹೀಗೆ ಪ್ರಕೃತಿಯ ಎಲ್ಲಾ ಅಂಶಗಳನ್ನು ಸತ್ಯಾಂಶವನ್ನು ತಿಳಿದಾಗಲೇ ನಾವೂ ಮನುಜರಾಗುವುದು ಹಾಗೂ ಅರಿಯದಿದ್ದರೆ ವಿಕೃತರಾಗುವುದು. ಬಣ್ಣಗಳ ಅರ್ಥವ ಅರಿಯದೇ ಭಾವವಿಲ್ಲದೆ ಎಂದೂ ಚಿತ್ರ ಬಿಡಿಸಬೇಡಿ ಅದು ವಿಚಿತ್ರವಾಗುತ್ತದೆ.
– ಸಂಘಮಿತ್ರೆ ನಾಗರಘಟ್ಟ