Home ಅಂಕಣ ಬೊಗಸೆಗೆ ದಕ್ಕಿದ್ದು12 – ಏಶ್ಯಾದ ಮೊದಲ ಚೆಸ್ ಗ್ರ್ಯಾನ್‌ಮಾಸ್ಟರ್ ಮೀರ್ ಸುಲ್ತಾನ್ ಖಾನ್

ಬೊಗಸೆಗೆ ದಕ್ಕಿದ್ದು12 – ಏಶ್ಯಾದ ಮೊದಲ ಚೆಸ್ ಗ್ರ್ಯಾನ್‌ಮಾಸ್ಟರ್ ಮೀರ್ ಸುಲ್ತಾನ್ ಖಾನ್

0

ಮೀರ್ ಸುಲ್ತಾನ್ ಖಾನ್ ಎಂದರೆ, ಬಹುಶಃ ಇಂದು ಚೆಸ್ ಪ್ರಪಂಚದಲ್ಲಿ ಒಂದು ಶಕ್ತಿಯಾಗಿರುವ ಭಾರತೀಯ ಉಪಖಂಡದಲ್ಲಿ ಚೆಸ್ ಆಡುತ್ತಿರುವ ಎಳೆಯರಿಗೂ ಗೊತ್ತಾಗಲಾರದು. ಆದರೆ, ವಿಶ್ವನಾದನ್ ಆನಂದ್ ಎಂದರೆ ಎಲ್ಲರಿಗೂ ಗೊತ್ತು. ಅದೇ ವಿಶ್ವನಾಥನ್ ಆನಂದ್ ಅವರು ಗ್ರ್ಯಾನ್‌ಮಾಸ್ಟರ್ ಡೇನಿಯಲ್ ಕಿಂಗ್ ಅವರ ಪುಸ್ತಕ “ಸುಲ್ತಾನ್ ಖಾನ್-ದಿ ಇಂಡಿಯನ್ ಸರ್ವೆಂಟ್ ಹೂ ಬಿಕೇಮ್ ಚೆಸ್ ಚಾಂಪಿಯನ್” ಎಂಬ ಪುಸ್ತಕದಲ್ಲಿ ಹೀಗೆ ಬರೆದಿದ್ದಾರೆ: “ಸುಲ್ತಾನ್ ಖಾನ್ ಬದುಕಿದ್ದ ಪ್ರಪಂಚ ಕೂಡಾ ಇಂದು ಬಹಳ ದೂರದಲ್ಲಿ ಇರುವಂತೆ ಕಾಣುತ್ತಿದ್ದರೂ, ಅಂತರರಾಷ್ಟ್ರೀಯ ಚೆಸ್ ಕ್ಷೇತ್ರದ ಉನ್ನತ ಶ್ರೇಣಿಯನ್ನು ಮುರಿದು ಮೇಲೆದ್ದ ಮೊದಲ ಏಶ್ಯನ್ ಎಂದು ನಾವವರನ್ನು ನೆನಪಿಸಿಕೊಳ್ಳಬೇಕು.”

ಹೌದು. ಬ್ರಿಟಿಷರ ಆಡಿಯಲ್ಲಿದ್ದ ಅವಿಭಜಿತ ಭಾರತದ ಮಾಮೂಲಿ “ಸೇವಕ”ನೊಬ್ಬ ಇಂಗ್ಲೆಂಡಿಗೆ ಹೋಗಿ ಅಲ್ಲಿ ಸಾರ್ವಕಾಲಿಕ ಶ್ರೇಷ್ಟ ಎನಿಸಿಕೊಂಡಿದ್ದ ವಿಶ್ವಚಾಂಪಿಯನ್ ಸೇರಿದಂತೆ ಘಟಾನುಘಟಿ ಚೆಸ್ ಆಟಗಾರನ್ನು ಮಣಿಸುವುದು; ಕಂದು ಮನುಷ್ಯನೊಬ್ಬ ಬಿಳಿಯರ ಪ್ರಪಂಚಕ್ಕೆ ನುಗ್ಗಿ ಅವರನ್ನೇ ಸೋಲಿಸುವುದು ಅಸಾಧಾರಣ ಪ್ರತಿಭೆಗೆ ಮಾತ್ರ ಸಾಧ್ಯ. ಯಾಕೆಂದರೆ, ಚದುರಂಗವು ಭಾರತದಲ್ಲಿ ಹುಟ್ಟಿದ ಆಟ ಎಂದು ಹೇಳಲಾಗುತ್ತಿದ್ದರೂ, ಅದು ರಾಜಮಹಾರಾಜರುಗಳ, ಜಮೀನ್ದಾರರ ಸಮಯ ಕಳೆಯುವ ಶೋಕಿಯ ಆಟವಾಗಿತ್ತು ಮತ್ತು ಆ ಕಾಲದಲ್ಲಿ ಯುರೋಪ್, ರಶ್ಶಾದ ಆಟಗಾರರೇ ಪ್ರಾಬಲ್ಯ ಹೊಂದಿದ್ದರು.

1920ರ ದಶಕದ ಕೊನೆ ಮತ್ತು 1930ರ ದಶಕದ ಆರಂಭದ ಕೇವಲ ಐದು ವರ್ಷಗಳಲ್ಲಿ ಅವರು ಚೆಸ್ ಪ್ರಪಂಚದಲ್ಲಿ ಬಿರುಗಾಳಿ ಎಬ್ಬಿಸಿದ್ದರು. 1929, 1932 ಮತ್ತು 1933ರಲ್ಲಿ ಅವರು ಬ್ರಿಟಿಷ್ ಸಾಮ್ರಾಜ್ಯದ ಚೆಸ್ ಚಾಂಪಿಯನ್ ಎನಿಸಿದ್ದರು. ಅವರು ಸೋಲಿಸಿದ್ದು ಆ ಕಾಲದ ಘಟಾನುಘಟಿಗಳನ್ನು. ಜೀನಿಯಸ್, ಸಾರ್ವಕಾಲಿಕ ಶ್ರೇಷ್ಟ ಸಹಜ ಆಟಗಾರ ಎಂಬೆಲ್ಲಾ ಉಪಮೆಗಳಿಂದ ಕರೆಯಲ್ಪಟ್ಟ ಅವರ ಅಸಾಧಾರಣ ಸಾಧನೆಗಳನ್ನು ಈಗ ಎಲ್ಲರೂ ಮರೆತುಬಿಟ್ಟಿದ್ದಾರೆ.

ಈಗ ಪಾಕಿಸ್ತಾನದಲ್ಲಿರುವ ಕುಶಾಬ್ ಜಿಲ್ಲೆಯ ಮೀಟಾ ತಿವಾನ ಎಂಬ ಹಳ್ಳಿಯಲ್ಲಿ 1903ರಲ್ಲಿ ಹುಟ್ಟಿದ ಸುಲ್ತಾನ್, ಸೂಫಿ ಪೀರ್‌ಗಳ ವಂಶದ ಆವಾನ್ ಬುಡಕಟ್ಟಿನ ಚಿಕ್ಕ ಜಮೀನ್ದಾರರ ಕುಟುಂಬಕ್ಕೆ ಸೇರಿದವರು. ಬಾಲಕ ಸುಲ್ತಾನ್, ತನ್ನ ತಂದೆ ಮಿಯಾಂ ನಿಜಾಮುದ್ದೀನ್ ಅವರಿಂದ ಚೆಸ್ ಕಲಿತು, ಅಣ್ಣತಮ್ಮಂದಿರ ಜೊತೆ ಆಡುತ್ತಿದ್ದರು. ಆದರೆ, ಸ್ವಲ್ಪ ಬೆಳೆದ ಮೇಲೆ ಅವರು ನೆರೆಯ ಜಮೀನ್ದಾರರು ಮತ್ತು ನೆರೆಯ ಸರ್ಗೋದ ಪಟ್ಟಣದ ಚೆಸ್ ಹವ್ಯಾಸಿಗಳ ಜೊತೆಗೆ ಆಡಲು ಆರಂಭಿಸಿದರು. ಮನೆಯಲ್ಲಿ ಯಾವುದೇ ಜವಾಬ್ದಾರಿ ಹೊರುವ ಅಗತ್ಯ ಇಲ್ಲದ ಸುಲ್ತಾನ್, ಭಾರತೀಯ ಶೈಲಿಯ ಚದುರಂಗದಲ್ಲಿ ತನ್ನ ಕೌಶಲ ಹೆಚ್ಚಿಸಿಕೊಂಡರು. ಆದರೆ, ಅದರ ನಿಯಮಗಳು ಆಧುನಿಕ ಪಾಶ್ಚಾತ್ಯ ಆಟದ ನಿಯಮಗಳಿಗಿಂತ ಬಹಳಷ್ಟು ಬೇರೆಯಾಗಿತ್ತು. 21ನೇ ವಯಸ್ಸು ತಲಪುವುದರ ಒಳಗೆ ಅವರು ಅವಿಭಜಿತ ಪಂಜಾಬ್ ಪ್ರಾಂತ್ಯದ ಅತ್ಯುತ್ತಮ ಚೆಸ್ ಆಟಗಾರ ಎನಿಸಿದ್ದರು. ಅವರ ಅದ್ಭುತ ಪ್ರತಿಭೆಯು ಬ್ರಿಟಿಶ್ ಸಾಮ್ರಾಜ್ಯದ ನಿಷ್ಟಾವಂತ ಮತ್ತು ಅವರ ಕೃಪೆಯಿಂದಲೇ ಐಷಾರಾಮಿಯಾಗಿ ಬದುಕುತ್ತಿದ್ದ ಶ್ರೀಮಂತ ಜಮೀನ್ದಾರ ಸರ್ ಉಮ್ಮರ್ ತಿವಾನ ಅವರ ಕಣ್ಣಿಗೆ ಬಿತ್ತು. ಸುಲ್ತಾನ್‌ರ ಉಜ್ವಲ ಆಟವು ಸ್ವತಃ ಚೆಸ್ ಆಟದ ಶೋಕಿ ಹೊಂದಿದ್ದ ಉಮ್ಮರ್ ಅವರ ಕಣ್ಣುಕುಕ್ಕಿತು. ಕಲೆ ಮತ್ತು ಕ್ರೀಡೆಯ ಆಶ್ರಯದಾತನಾಗಿ ತನ್ನನ್ನು ತಾನು ಕಾಣುತ್ತಿದ್ದ ಅವರು, ಸುಲ್ತಾನ್ ಅವರಿಗೆ ಒಂದು ಕೊಡುಗೆ ಮುಂದಿಟ್ಟರು.

ಅದೆಂದರೆ, ತನ್ನ ಆಧೀನದ ಪ್ರದೇಶ ಮತ್ತು ನೆರೆಯ ಕಾಲ್ರ ಎಂಬ ಹಳ್ಳಿಗೆ ಒಂದು ಚೆಸ್ ತಂಡವನ್ನು ಕಟ್ಟಿಕೊಟ್ಟರೆ, ತಾನು ಸುಲ್ತಾನ್ ಅವರನ್ನು ಪ್ರಾಯೋಜಿಸಿ, ಹೋದಲ್ಲೆಲ್ಲಾ ಪ್ರಯಾಣ, ಊಟ, ವಸತಿಯ ವೆಚ್ಚ ಭರಿಸುವುದಾಗಿ ಹೇಳಿದರು. ಹಾಗೆ ಅವರು 1928ರಲ್ಲಿ ಬ್ರಿಟಿಶ್ ಭಾರತ ಮಟ್ಟದ ಚೆಸ್ ಚಾಂಪಿಯನ್‌ಶಿಪ್‌ಗೆ ಹೋದರು. ಅಲ್ಲಿ ಒಂಬತ್ತು ಆಟಗಳಲ್ಲಿ ಒಂದು ಡ್ರಾ ಬಿಟ್ಟರೆ ಉಳಿದೆಲ್ಲಾ ಆಟಗಳನ್ನು ಗೆದ್ದರು.

ಮುಂದಿನ ವರ್ಷ ಸರ್ ಉಮ್ಮರ್, ಸುಲ್ತಾನ್‌ರನ್ನು ಲಂಡನ್‌ಗೆ ಕರೆದೊಯ್ದರು. ಅಲ್ಲಿ ಅವರನ್ನು ಇಂಪೀರಿಯಲ್ ಚೆಸ್ ಕ್ಲಬ್‌ನ ಸದಸ್ಯನಾಗಿ ಸೇರಿಸಲಾಯಿತು. ಅವರು ಆಲ್ಲಿ ಪಾಶ್ಚಾತ್ಯ ಶೈಲಿಯ ಆಟವನ್ನು ಬೇಗನೇ ಕಲಿತುಕೊಂಡರು. ಅದು ಗಮನಾರ್ಹವಾಗಿ ಬೇರೆಯಾಗಿದ್ದು, ಲಂಡನ್‌ನಲ್ಲಿ ಚೆಸ್ ಅತೀ ಶ್ರೀಮಂತರ ಆಟವಾಗಿತ್ತು. ಕ್ಲಬ್ ಸೇರಲು ಮತ್ತು ಟೂರ್ನಮೆಂಟ್‌ಗಳಲ್ಲಿ ಭಾಗವಹಿಸಲು ಭಾರಿ ಮೊತ್ತದ ಶುಲ್ಕ ಕೊಡಬೇಕಾಗಿತ್ತು. ಇದು ಬಹುಶಃ ಸರ್ ಉಮ್ಮರ್ ಹೊರತು ಸಾಧ್ಯವಾಗುತ್ತಿರಲಿಲ್ಲ.

ಆದರೆ, ಪಾಶ್ಚಾತ್ಯ ಶೈಲಿಯ ಅನುಭವ ಇಲ್ಲದಿದ್ದರೂ, ಅದೇ ವರ್ಷ ಸುಲ್ತಾನ್ ಬ್ರಿಟಿಶ್ ಚೆಸ್ ಚಾಂಪಿಯನ್‌ಶಿಪ್ ಗೆದ್ದುದರಿಂದ ಅವರ ಪ್ರತಿಭೆಯನ್ನು ಲೆಕ್ಕ ಹಾಕಬಹುದು. ಬ್ರಿಟಿಶ್ ಸಾಮ್ರಾಜ್ಯದ ವಿಸ್ತಾರ ಮತ್ತು ಪ್ರಭಾವದಿಂದಾಗಿ ಇದನ್ನು ಆಗ ವಿಶ್ವ ಚಾಂಪಿಯನ್‌ಶಿಪ್ ಎಂದೇ ಪರಿಗಣಿಸಲಾಗಿತ್ತು. ಆ ಬಳಿಕ ಅವರಿಗೆ ಯುರೋಪಿನಾದ್ಯಂತ ಆಡಲು ಕರೆ ಬಂತು. ಆದರೆ ಅವರು 1923ರಲ್ಲಿ ಸ್ವದೇಶಕ್ಕೆ ಮರಳಿ ಬಂದು, ಮರುವರ್ಷ ಮೇಯಲ್ಲಿ ಲಂಡನ್‌ಗೆ ಹಿಂತಿರುಗಿದರು. ಅಲ್ಲಿ ಅವರು ಪ್ರಖ್ಯಾತ ಸ್ಕಾರ್‌ಬರೋ, ಹಂಬರ್ಗ್ ಒಲಿಂಪಿಯಾಡ್, ಲೀಜ್ ಟೂರ್ನಮೆಂಟ್‌ಗಳಲ್ಲಿ ಭಾಗವಹಿಸಿದರು. ಇಲ್ಲಿ ಅವರು ಗೆದ್ದ ತಲೆಗಳಲ್ಲಿ ಒಂದು ಬೆಲ್ಜಿಯನ್ ಚೆಸ್ ಮಾಸ್ಟರ್ ವಿಕ್ಟರ್ ಸೋಲ್ತನ್‌ಬಿಯೆಫ್. ಅದರೆ, 1930ರ ಡಿಸೆಂಬರ್ 30ರಂದು ಹೇಸ್ಟಿಂಗ್ಸ್‌ನ ಕ್ರಿಸ್ಮಸ್ ಚೆಸ್ ಫೆಸ್ಟಿವಲ್‌ನಲ್ಲಿ ಹಾಲಿ ಚಾಂಪಿಯನ್ ಕ್ಯೂಬದ ಜೋಸ್ ರೌಲ್ ಕೆಪಬ್ಲಾಂಕ ಅವರನ್ನು ಸೋಲಿಸಿದ್ದು ಆವರ ಜೀವಮಾನದ ಪ್ರಸಿದ್ಧ ಜಯ. ಯಾಕೆಂದರೆ, ಕೆಪಬ್ಲಾಂಕ ಈಗಲೂ ಸಾರ್ವಕಾಲಿಕ ಶ್ರೇಷ್ಟ ಆಟಗಾರರಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತಿದ್ದು, 1921 ಮತ್ತು 1927ರ ನಡುವೆ ವಿಶ್ವ ಚಾಂಪಿಯನ್ ಆಗಿದ್ದವರು. ಅವರ ಆ ಆಟವನ್ನು ಈಗಲೂ ಅಧ್ಯಯನ ಮಾಡಲಾಗುತ್ತಿದೆ.

“ಅಂತಹ ಪರಿಸ್ಥಿತಿಯಲ್ಲೂ ಅವರು ಚಾಂಪಿಯನ್ ಆಗುವುದರಲ್ಲಿ ಯಶಸ್ವಿಯಾದರು ಎಂದರೆ, ಅದು ಒಂದು ಅಸಾಧಾರಣಕ್ಕೆ ಕಡಿಮೆಯಿಲ್ಲದ ಅದ್ಭುತ ಚೆಸ್ ಪ್ರತಿಭೆಯನ್ನು ತೋರಿಸುತ್ತದೆ” ಎಂದು ಸ್ವತಃ ಕೆಪಬ್ಲಾಂಕ, ಈ ಸೋಲಿನ ಕೆಲವು ವರ್ಷಗಳ ಬಳಿಕ ಬರೆದಿದ್ದಾರೆ.

ಆ ದಿನಗಳಲ್ಲಿ ಅವರು ಸೋಲಿಸಿದ ಘಟಾನುಘಟಿ ಆಟಗಾರರ ಹೆಸರುಗಳನ್ನು ಬರೆದರಷ್ಟೇ ಇಲ್ಲಿ ಸಾಕಾಗುತ್ತದೆ; ವಿವರಗಳ ಅಗತ್ಯವಿಲ್ಲ. ಮುಂದಿನ ವರ್ಷ ಅವರು ಫ್ರೆಂಚ್-ಪೋಲಿಶ್ ಚೆಸ್ ಮಾಸ್ಟರ್ ಸೇವೀಲಿ ಟಾರ್ಟಕೋವರ್ ಅವರನ್ನು 6.5-5.5 ಆಂಕಗಳಿಂದ ಸೋಲಿಸಿದರು. ಅದೇ ವರ್ಷ ಅವರು ಜೆಕ್ ಚಾಂಪಿಯನ್ ಸಾಲೋ ಫ್ಲೋಹ್ರ್, ಪೋಲಿಶ್ ಚೆಸ್ ಮಾಸ್ಟರ್ ಅಕಿಬ ರೂಬಿನ್‌ಸ್ಟೇನ್ ಅವರನ್ನು ಸೋಲಿಸಿ, ಆಗಿನ ವಿಶ್ವ ಚಾಂಪಿಯನ್ ಅಲೆಗ್ಸಾಂಡರ್ ಅಲೆಖಿನ್ ವಿರುದ್ಧ ಡ್ರಾ ಸಾಧಿಸಿದರು. ಮುಂದಿನ ಎರಡು ವರ್ಷಗಳಲ್ಲಿ ಅಂದರೆ, 1932 ಮತ್ತು 1933ರಲ್ಲಿ ಅವರು ಬ್ರಿಟಿಶ್ ಚೆಸ್ ಚಾಂಪಿಯನ್‌ಶಿಪ್ ಗೆದ್ದರು. ಅವರು ಕ್ಯಾಂಬ್ರಿಜ್ (1932), ಬರ್ನ್ (1932), ಫೋಕ್‌ಸ್ಟೋನ್ ಒಲಿಂಪಿಯಾಡ್ (1933) ಮುಂತಾದ ಪ್ರಖ್ಯಾತ ಟೂರ್ನಿಗಳನ್ನೂ ಗೆದ್ದಿದ್ದಾರೆ.

ಚೆಸ್‌ನಲ್ಲಿ ಆರಂಭ, ಮಧ್ಯ ಮತ್ತು ಎಂಡ್ ಗೇಮ್ ಎಂದು ಕರೆಯಲಾಗುವ ಕೊನೆಯ ಹಂತವಿದೆ. ಸುಲ್ತಾನ್ ಕೊನೆಯ ಎರಡರಲ್ಲಿ ನಿಷ್ಣಾತರಾಗಿದ್ದು, ಆರಂಭ ಕೆಟ್ಟದಾಗಿ, ಆಟವು ಎಂತಹಾ ಪರಿಸ್ಥಿತಿಯಲ್ಲಿ ಇದ್ದರೂ, ಎಂಡ್ ಗೇಮ್‌ನಲ್ಲಿ ಯಾವುದೇ ಭಾವನೆ ತೋರ್ಪಡಿಸದೆ, ನಿಯಂತ್ರಣ ಕಳೆದುಕೊಳ್ಳದೆ ಅದರಿಂದ ಹೊರಬರುತ್ತಿದ್ದರು ಎಂದು ಚೆಸ್ ವಿಮರ್ಶಕರು ಬರೆದಿದ್ದಾರೆ. “ಅವರ ಆರಂಭ ತೀರಾ ಕೆಟ್ಟದಾಗಿತ್ತು. ಅವರು ಪಾಶ್ಚಾತ್ಯ ಶೈಲಿಯಲ್ಲಿ ಆಡಿ ಬೆಳೆಯದಿರುವುದು ಅದಕ್ಕೆ ಕಾರಣವಾಗಿರಬಹುದು” ಎಂದು ಮೇಲೆ ಉಲ್ಲೇಖಿಸಿದ ಪುಸ್ತಕದ ಲೇಖಕ ಗ್ರ್ಯಾನ್ ಮಾಸ್ಟರ್ ಡೇನಿಯಲ್ ಕಿಂಗ್ ಬರೆದಿದ್ದಾರೆ. ಆದರೆ, ಆಂತಹ ಪರಿಸ್ಥಿತಿಯಿಂದಲೂ ಹೊರಬಂದು ಗೆಲ್ಲುವುದು ಅಸಾಧಾರಣ ಸಹಜ ಬುದ್ಧಿಶಕ್ತಿಯನ್ನು ತೋರಿಸುತ್ತದೆ.

1933ರ ನಂತರ ಅವರು ಮರಳಿ ಭಾರತಕ್ಕೆ ಬರಬೇಕಾದುದು ದುರಂತ. ಆಗ ಈಗಿನಂತೆ ಕೋಟ್ಯಂತರ ಡಾಲರ್ ಬಹುಮಾನ ಇರಲಿಲ್ಲ. ಭಾರೀ ಮೊತ್ತದ ಶುಲ್ಕವನ್ನು ಆಟಗಾರರೇ ಭರಿಸಬೇಕಾಗಿತ್ತು. ಬ್ರಿಟಿಶ್ ಸಾಮ್ರಾಜ್ಯ ಮತ್ತು ಭಾರತೀಯ ರಾಜ ಪ್ರತಿನಿಧಿಗಳ ನಡುವಿನ ದುಂಡುಮೇಜಿನ ಸಭೆ ಮುಗಿದ ಬಳಿಕ ಸುಲ್ತಾನ್ ಅವರ ಪ್ರಾಯೋಜಕ ಸರ್ ಉಮ್ಮರ್ ಸ್ವದೇಶಕ್ಕೆ ಮರಳಬೇಕಾಯಿತು. ಹಣವಿಲ್ಲದ ಸುಲ್ತಾನ್ ಕೂಡಾ. ಅವರು ತನ್ನ ಪೂರ್ವಜರ ಜಮೀನು ನೋಡಿಕೊಂಡು ಇರಬೇಕಾಯಿತು.

1940ರ ತನಕವೂ ಅವರು ಭಾರತದಲ್ಲಿ ಸಕ್ರಿಯರಾಗಿದ್ದರು. ಮುಂಬಯಿಯಲ್ಲಿ ಬಂದಿಳಿದ ತಕ್ಷಣ ಅವರು 40 ಆಟಗಾರರ ಜೊತೆ ಒಂದೇ ಕಾಲಕ್ಕೆ ಚೆಸ್ ಆಡಿದ್ದರು. 1940ರಲ್ಲಿ ದೇರಾ ಇಸ್ಮಾಯಿಲ್ ಖಾನ್‌ನಲ್ಲಿ 20 ಆಟಗಾರರ ಜೊತೆ ಒಂದೇ ಕಾಲಕ್ಕೆ ಚೆಸ್ ಆಡಿ ಎಲ್ಲವನ್ನೂ ಗೆದ್ದು, ಗವರ್ನರ್ ಟ್ರೋಫಿ ಜಯಿಸಿದ್ದರು. ದೇಶ ವಿಭಜನೆಯ ಬಳಿಕ ಅವರು ಪಾಕಿಸ್ತಾನದ ಪಾಲಾದರು. ಪತ್ನಿ ಐದು ಗಂಡು ಒಂದು ಹೆಣ್ಣುಮಗುವಿನ ಜೊತೆ ಸರ್ಗೋದದಲ್ಲಿಯೇ ವಾಸವಾಗಿದ್ದ ಅವರು, 1966ರಲ್ಲಿ ಕಾಲವಾದರು. ಅವರು ಭಲ್ವಾಲ್‌ನ ಅವರ ಸ್ವಂತ ಜಮೀನಿನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿದ್ದಾರೆ. ವಿದೇಶಗಳಲ್ಲಿ ಭಾರತದ ಹೆಸರನ್ನು ಮೊತ್ತಮೊದಲು ಅರಳಿಸಿದ ಕ್ರೀಡಾಳುಗಳಲ್ಲಿ ಮೀರ್ ಸುಲ್ತಾನ್ ಖಾನ್ ಒಬ್ಬರು ಎಂದು ನಾವವರನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು.

  • – ನಿಖಿಲ್ ಕೋಲ್ಪೆ

You cannot copy content of this page

Exit mobile version