ಬೆಂಗಳೂರು: ನಿನ್ನೆ ಸುರಿದ ಭಾರಿಮಳೆಯಿಂದಾಗಿ, ರಸ್ತೆಯಲ್ಲಿ ನೀರು ನಿಂತಿದ್ದು ಬೆಂಗಳೂರಿನಿಂದ ರಾಮನಗರಕ್ಕೆ ತಲುಪುವ ಮಾರ್ಗದಲ್ಲಿ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿದೆ.
ಶುಕ್ರವಾರ ರಾತ್ರಿ ಬೆಂಗಳೂರು ಸೇರಿದಂತೆ ರಾಮನಗರ ಜಿಲ್ಲೆಯ ಹಲವು ಕಡೆ ಭಾರಿ ಮಳೆಯಾಗಿದ್ದು, ಕೆಂಗೇರಿ ಮತ್ತು ಬಿಡದಿ ಬಳಿ ಇರುವ ಹಳ್ಳಗಳು ತುಂಬಿಹರಿದಿವೆ. ಈ ಕಾರಣ ರಸ್ತೆ ತುಂಬೆಲ್ಲಾ ನೀರು ನಿಂತಿದ್ದು, ಬೆಂಗಳೂರಿನಿಂದ ರಾಮನಗರಕ್ಕೆ ತಲುಪುವ ಮಾರ್ಗದಲ್ಲಿ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದೆ. ಸುಮಾರು ಎರಡ ರಿಂದ ಮೂರು ಗಂಟೆಗಳ ಕಾಲ ಸಂಚಾರ ಸ್ಥಗಿತಗೊಂಡಿದ್ದು, ಈ ಮಾರ್ಗವಾಗಿ ಚಲಿಸುವ ಪ್ರಯಾಣಿಕರು ಟ್ರಾಫಿಕ್ ನಲ್ಲಿ ಸಿಲುಕಿ ಪರದಾಡುವಂತಾಗಿದೆ.
ಸ್ವಲ್ಪ ಸಮಯದ ನಂತರ ರಸ್ತೆಯಲ್ಲಿನ ನೀರಿನ ಮಟ್ಟ ಕಡಿಮೆಯಾದಂತೆ ಬಸ್, ಲಾರಿ, ಕಾರುಗಳು ಸಂಚಾರ ಮುಂದುವರೆಸಿವೆ. ಆದರೆ ಬೈಕ್ ಸವಾರರಿಗೆ ಪ್ರಯಾಣಕ್ಕೆ ತೊಂದರೆಯಾದ್ದರಿಂದ, ಕಾಮಗಾರಿ ಪ್ರಗತಿಯಲ್ಲಿರುವ ರಸ್ತೆಯಲ್ಲಿ ನಿಧಾನವಾಗಿ ಚಲಿಸುವಂತೆ ಬೆಂಗಳೂರು ಸಂಚಾರ ಪೊಲೀಸ್ ಇಲಾಖೆ ಅನುವು ಮಾಡಿಕೊಟ್ಟಿದೆ.
ವರದಿ: ನಾಗಾರ್ಜುನ ಎಂ.ವಿ