ಮೈಸೂರು: ರಾಷ್ಟ್ರೀಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ ಐಕ್ಯತಾ ಯಾತ್ರೆ ರಾಜ್ಯ ಪ್ರವೇಶಿಸಲು ಕೆಲವೇ ದಿನಗಳು ಉಳಿದಿರುವ ಹಿನ್ನಲೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಯಲ್ಲಿ ಯಾತ್ರೆಯ ಸಿದ್ದತೆ ಬಗ್ಗೆ ಪರಿಶೀಲನೆ ನಡೆಸಿದರು.
ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯು ಸೆಪ್ಟೆಂಬರ್ 30ರಂದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಮೂಲಕ ರಾಜ್ಯ ಪ್ರವೇಶಿಸಲಿದ್ದು, ಈ ಹಿನ್ನೆಲೆಯಲ್ಲಿ ಪಾದಯಾತ್ರೆ ಸಾಗುವ ಮಾರ್ಗದಲ್ಲಿ ಕೈಗೊಂಡಿರುವ ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಿ, ಒಂದಷ್ಟು ಸಲಹೆ ಸೂಚನೆಗಳನ್ನು ನೀಡಿದರು. ಈ ಕುರಿತು ಕಾಂಗ್ರೆಸ್ ಮುಖಂಡರ ಜೊತೆ ಸಭೆ ನಡೆಸಿ, ಸಂಘಟಿತ ಪ್ರಯತ್ನದ ಮೂಲಕ ಯಾತ್ರೆಯ ಅಭೂತಪೂರ್ವ ಯಶಸ್ಸಿಗೆ ಶ್ರಮಿಸುವಂತೆ ಸಿದ್ದರಾಮಯ್ಯ ಕರೆ ನೀಡಿದರು.
ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಧ್ರುವ ನಾರಾಯಣ, ಮಾಜಿ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಪುಟ್ಟರಂಗ ಶೆಟ್ಟಿ, ಸಂಸದರಾದ ಡಿ.ಕೆ. ಸುರೇಶ್, ಶಾಸಕರಾದ ಡಾ ಯತೀಂದ್ರ ಸಿದ್ದರಾಮಯ್ಯ, ಪಕ್ಷದ ಮೈಸೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಡಾ. ವಿಜಯಕುಮಾರ್ ಮತ್ತಿತರರು ಹಾಜರಿದ್ದರು.