ಭಾವಪುಂಜ – 1 : ಸೃಷ್ಟಿಯ ಸೊಬಗು

“..ಇಂತಹ ಪರಿಸರದಲ್ಲಿ ಬೆಳೆದ ಮಗು ಊರಿನ ಮಗನಾಗಿ ಒಂದಿಷ್ಟು ನಿಸ್ವಾರ್ಥ ಗುಣ ಗಳು ತಾನೇ ತಾನಾಗಿ ಒಳಗೊಂಡಿರುತ್ತಾನೆ. ಆ ಮೂಲಕ ಸಮಾಜದ ಸ್ವಾಸ್ಥ್ಯ ನಿರ್ಮಾಣವಾಗುತ್ತಾ ಹೋಗುತ್ತದೆ. ಇದೇ ಅಲ್ಲವೇ ಬೇಕಿರುವುದು ಜಗತ್ತಿಗೆ..” ಲೇಖಕರಾದ ಅಶ್ವಿನಿ ಎಸ್.ಟಿ ಅವರ ಬರಹದಲ್ಲಿ

ಹಳ್ಳಿಯ ಸಾಧಾರಣ ಮನೆಯಲ್ಲಿ ಕೂಸೊಂದು ಜನ್ಮ ತಾಳಿ ಮೊದಲನೇ ಬಾರಿಗೆ ಮಧು ಮಧುರವಾಗಿ ಎನ್ನುವಂತೆ ಅಳುವ ಧ್ವನಿಯು ಕೇಳಿದಾಗ ಇಂತಿಪ್ಪ ನಿರ್ದಿಷ್ಟ ಮನೆಯಲ್ಲಿ ಮಗು ಜನಿಸಿದೆ ಎಂದು ಎಲ್ಲರಿಗೂ ಗೊತ್ತಾಗುತ್ತಿತ್ತು. ಬೆಳಗಾದ ಕೂಡಲೇ ಸೂಲಗಿತ್ತಿ ರಂಗವ್ವ ಸ್ನಾನ ಮಾಡಿ ಹೊಸ ಬಾಣಂತಿ ಯ ಮನೆಯವರು ಕೊಟ್ಟ ಮಡಿ ಸೀರೆ ಉಟ್ಟು ಅವರ ಮನೆಗೆ ವಾಪಸ್ಸು ಹೋಗುವಾಗ ದಾರಿಯಲ್ಲಿ ಸಿಕ್ಕ ಎಲ್ಲರೂ ಬಾಣಂತಿ,ಕೂಸಿನ ಯೋಗಕ್ಷೇಮ ತಿಳಿದುಕೊಳ್ಳುತ್ತಿದ್ದರು.

ಅಲ್ಲಿಂದ ಮುಂದಿನ ಹತ್ತು ದಿನಗಳ ಕಾಲ ಸೂಲಗಿತ್ತಿ ಬೆಳಗು ಮುಂಜಾನೆ ಎದ್ದು ಬಾಣಂತಿ ಮನೆಗೆ ಬಂದು ನೀರೆರೆದು ತನಗೆ ತಿಳಿದ ಮನೆಮದ್ದುಗಳ ಹೇಳಿ ತನ್ನ ಮನೆಯಲ್ಲಿ ಲಭ್ಯವಿದ್ದ ಗಿಡಮೂಲಿಕೆಗಳ ತಂದು ಬಾಣಂತಿಗೆ ಆರೈಕೆ ಮಾಡುತ್ತಿದ್ದಳು. ಮಗು ಗಂಡಾಗಿದ್ದರೆ ಯಾವ ಊರಿನ ರಾಜನೋ ದೊರೆ ಇದ್ದ ಹಾಗೆ ಇದಾನೆ ಎಂದೂ ಹೆಣ್ಣಾಗಿದ್ದರೆ ರಾಜಕುಮಾರಿ ಎಂದು ಹೇಳಿ ಬಾಣಂತಿಯ ಮನಸ್ಸು ಸಂತೋಷಗೊಳಿಸಿ ಹೋಗುತ್ತಿದ್ದಳು.

ಈ ಎಲ್ಲಾ ಸೇವೆಗಳಿಗೆ ಆಕೆ charge ಮಾಡುತ್ತಿದ್ದ ಫೀ ತುಂಬಾ ಕಡಿಮೆ.ಬಡವರಾದರೆ ಏನನ್ನೂ ಬಯಸದೇ ಸಿರಿವಂತರಾದರೆ ಅವರಿಗೇ ತಿಳಿದಷ್ಟು ಕಾಳು ಕಡ್ಡಿ ಇಷ್ಟೇ. ದುರಾಸೆಗಳಿಲ್ಲದ ಹಳ್ಳಿಯ ಸಂತೃಪ್ತ ಜೀವನ.corporate hospitals ಗಳ ಇಂದಿನ ಬಿಲ್ ಗಳನ್ನು ಭರಿಸಲಾಗದೆ ಮಕ್ಕಳೇ ಬೇಡವೆನ್ನುವಷ್ಟರ ಮಟ್ಟಿಗೆ ಮಾಡಿದ್ದಾರೆ.

ಮಗು ಏಳೆಂಟು ತಿಂಗಳು ಆಗುವಷ್ಟರಲ್ಲಿ ಅಕ್ಕಪಕ್ಕದ ಮನೆಯವರು ಕರೆದುಕೊಂಡು ಹೋಗಿ ಒಂದಿಷ್ಟು ಮೆದುಕು ಅನ್ನವನ್ನಾದರೂ ತಿನಿಸಿ ಕಳುಹಿಸುವರು. ಅಲ್ಲದೇ ತಲೆಗೆ ಹರಳೆಣ್ಣೆ ಮೆತ್ತಿ ದೃಷ್ಟಿ ದಾರ ಕಟ್ಟಿ ಕಳಿಸುವ ಸಂಪ್ರದಾಯ ಇದೆ.ಇದರ ಹಿಂದಿನ ಕಾಳಜಿ , ಆರೈಕೆ,ಹಾರೈಕೆ ಅದೊಂದು ಭಾವಬಂಧ.ಒಂದು ಮನೆಯ ಮಗು ಮನೆಗಷ್ಟೇ ಸೀಮಿತವಲ್ಲ ಸಮಾಜಕ್ಕೂ ಸೇರಿದ್ದು. ಆ ಸಮಾಜವೂ ಕೂಡ ತನ್ಮೂಲಕ ಸಾಮಾಜಿಕ ಜವಾಬ್ದಾರಿ ಯನ್ನು ನಿರ್ವಹಿಸುವುದು.

ಸಂಜೆಯ ವೇಳೆ ಊರಿನ ಮಕ್ಕಳೆಲ್ಲ ಒಂದೆಡೆ ಸೇರಿ ಆಟ ಆಡುತ್ತಿದ್ದರೆ ಅದೇ ತಾನೇ ಹೊಲ ತೋಟಗಳಿಂದ ಹಿಂದಿರುಗುತ್ತಿದ್ದ ರೈತಾಪಿ ಜನ ತಮ್ಮ ಜಮೀನಿನಲ್ಲಿ ಬಿಟ್ಟ ಹಣ್ಣು ಹಂಪಲುಗಳನ್ನು ತಂದು ಎಲ್ಲಾ ಮಕ್ಕಳಿಗೂ ಹಂಚಿ ತಮ್ಮ ಮನೆಗಳಿಗೆ ಹೋಗುತ್ತಿದ್ದರು. ಇದಲ್ಲವೇ ಸಹೃದಯತೆ.

ಯಾರ ಮಕ್ಕಳಾದರೇನು ನಮ್ಮೂರಿನ ಮಕ್ಕಳು ತಿನ್ನಲಿ ಎನ್ನುವ ಸದಾಶಯ ಈಗಿನ ಎಷ್ಟು ಮಂದಿ ಓದಿದವರಿಗೆ ಇದ್ದೀತು? ಮನುಷ್ಯ ಮನುಷ್ಯನನ್ನು ಪೊರೆಯುವುದಕ್ಕೆ ಯಾವ ಡಿಗ್ರಿಗಳ ಅಗತ್ಯವಿದೆ. ಮಣ್ಣಿನ ಸಂಪರ್ಕವಿರುವ ಜನರ ಹೃದಯ ವೈಶಾಲ್ಯತೆ ಮಣ್ಣಿನ ಹಾಗೇಯೇ ಎಲ್ಲವನ್ನೂ ಎಲ್ಲದನ್ನೂ ಒಳಗೆ ಮಾಡಿಕೊಳ್ಳುವ ಗುಣ. ಒಂದು ಕೂಸು ಬೆಳೆದು ದೊಡ್ಡವನಾಗುವ ಹಿಂದೆ ಅದೆಷ್ಟು ಅದೃಶ್ಯ ಜನರ ಕೈವಾಡವಿರುತ್ತದೆ.

ಇಂತಹ ಪರಿಸರದಲ್ಲಿ ಬೆಳೆದ ಮಗು ಊರಿನ ಮಗನಾಗಿ ಒಂದಿಷ್ಟು ನಿಸ್ವಾರ್ಥ ಗುಣ ಗಳು ತಾನೇ ತಾನಾಗಿ ಒಳಗೊಂಡಿರುತ್ತಾನೆ. ಆ ಮೂಲಕ ಸಮಾಜದ ಸ್ವಾಸ್ಥ್ಯ ನಿರ್ಮಾಣವಾಗುತ್ತಾ ಹೋಗುತ್ತದೆ. ಇದೇ ಅಲ್ಲವೇ ಬೇಕಿರುವುದು ಜಗತ್ತಿಗೆ.

Related Articles

ಇತ್ತೀಚಿನ ಸುದ್ದಿಗಳು