ಒಸ್ಲೊ : ದಕ್ಷಿಣ ಆಫ್ರಿಕಾದ ಖ್ಯಾತ ನ್ಯಾಯತಜ್ಞೆ ಹಾಗೂ ವಿಶ್ವಸಂಸ್ಥೆಯ ಮಾಜಿ ಮಾನವ ಹಕ್ಕುಗಳ ಹೈಕಮಿಷನರ್ ನವನೀತಂ ಪಿಳ್ಳೆ ಅವರಿಗೆ 2026ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿ ಲಭಿಸಿದೆ. ಶಾಂತಿ ಮತ್ತು ಅಂತರರಾಷ್ಟ್ರೀಯ ಕಾನೂನನ್ನು ಉತ್ತೇಜಿಸಲು ಅವರು ನಡೆಸಿದ ದೀರ್ಘಕಾಲದ ಪ್ರಯತ್ನಗಳನ್ನು ಗುರುತಿಸಿ ನಾರ್ವೇಜಿಯನ್ ನೊಬೆಲ್ ಸಮಿತಿ ಶುಕ್ರವಾರ ಪ್ರಶಸ್ತಿಯನ್ನು ಘೋಷಿಸಿದೆ.
ಯುದ್ಧಾಪರಾಧಗಳು, ಮಾನವತೆಯ ವಿರುದ್ಧದ ಅಪರಾಧಗಳು ಹಾಗೂ ನರಮೇಧದಂತಹ ಗಂಭೀರ ಪ್ರಕರಣಗಳಲ್ಲಿ ಕಾನೂನಿನ ಆಳ್ವಿಕೆಯನ್ನು ಬಲಪಡಿಸುವುದು ಮತ್ತು ತಪ್ಪಿತಸ್ಥರನ್ನು ಹೊಣೆಗಾರರನ್ನಾಗಿಸುವ ನಿಟ್ಟಿನಲ್ಲಿ ಪಿಳ್ಳೆ ಸಲ್ಲಿಸಿರುವ ಸೇವೆಯನ್ನು ಸಮಿತಿ ಗುರುತಿಸಿದೆ. ಜಾಗತಿಕವಾಗಿ ಸಂಘರ್ಷಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಕಾನೂನು ಮತ್ತು ನ್ಯಾಯಾಂಗ ಸಂಸ್ಥೆಗಳ ಮಹತ್ವವನ್ನು ಈ ಪ್ರಶಸ್ತಿ ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.
ವರ್ಣಭೇದ ನೀತಿಯ ವಿರುದ್ಧದ ಹೋರಾಟದಿಂದ ಜಾಗತಿಕ ನ್ಯಾಯಾಂಗದವರೆಗೆ
1941ರಲ್ಲಿ ದಕ್ಷಿಣ ಆಫ್ರಿಕಾದ ಡರ್ಬನ್ನಲ್ಲಿ ಭಾರತೀಯ ತಮಿಳು ಮೂಲದ ಕುಟುಂಬದಲ್ಲಿ ಜನಿಸಿದ ನವಿ ಪಿಳ್ಳೆ, ವರ್ಣಭೇದ ನೀತಿಯ ವಿರುದ್ಧ ಕಾನೂನು ಹೋರಾಟ ನಡೆಸಿದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರು. ವರ್ಣಭೇದ ನೀತಿಯ ಆಡಳಿತದ ಅವಧಿಯಲ್ಲಿ ಅನ್ಯಾಯ ಮತ್ತು ತಾರತಮ್ಯ ಎದುರಿಸುತ್ತಿದ್ದವರ ಪರವಾಗಿ ವಕೀಲೆಯಾಗಿ ಕಾರ್ಯನಿರ್ವಹಿಸಿದರು.
1967ರಲ್ಲಿ ತಮ್ಮದೇ ಕಾನೂನು ಸಂಸ್ಥೆಯನ್ನು ಆರಂಭಿಸಿದ ಅವರು, ವರ್ಣಭೇದ ವಿರೋಧಿ ಹೋರಾಟಗಾರರು ಸೇರಿದಂತೆ ಹಕ್ಕುಗಳಿಗಾಗಿ ಹೋರಾಡುತ್ತಿದ್ದವರಿಗೆ ಕಾನೂನು ನೆರವು ನೀಡಿದರು. ನೆಲ್ಸನ್ ಮಂಡೇಲಾ ಸೇರಿದಂತೆ ವರ್ಣಭೇದ ನೀತಿಯ ವಿರುದ್ಧ ಧ್ವನಿ ಎತ್ತಿದವರನ್ನು ಸಮರ್ಥಿಸಿದ ಅವರ ಆರಂಭಿಕ ವೃತ್ತಿಜೀವನವೇ ಮುಂದಿನ ಅಂತರರಾಷ್ಟ್ರೀಯ ನ್ಯಾಯಾಂಗ ಸೇವೆಗೆ ಭದ್ರ ಬುನಾದಿಯಾಯಿತು.
1995ರಲ್ಲಿ ದಕ್ಷಿಣ ಆಫ್ರಿಕಾದ ಹೈಕೋರ್ಟ್ನ ನ್ಯಾಯಮೂರ್ತಿಯಾಗಿ ನೇಮಕಗೊಂಡ ಅವರು, ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಐತಿಹಾಸಿಕ ಸಾಧನೆ ಮಾಡಿದರು. ಬಳಿಕ ರುವಾಂಡಾದ ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯಲ್ಲಿ ನ್ಯಾಯಮೂರ್ತಿ ಹಾಗೂ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದರು. ಅಲ್ಲಿ ಲೈಂಗಿಕ ಹಿಂಸೆ ಮತ್ತು ಅತ್ಯಾಚಾರವನ್ನು ನರಮೇಧ ಹಾಗೂ ಮಾನವತೆಯ ವಿರುದ್ಧದ ಅಪರಾಧಗಳಿಗೆ ಸಂಬಂಧಿಸಿದ ವಿಚಾರಣೆಗಳಲ್ಲಿ ಪರಿಗಣಿಸುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಿದರು.
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ಆಗಿದ್ದ ಪಿಳ್ಳೆ
ನವ್ನೀಂ ಪಿಳ್ಳೆ ಅಂತರರಾಷ್ಟ್ರೀಯ ಅಪರಾಧ ನ್ಯಾಯಾಲಯದಲ್ಲಿಯೂ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದಾರೆ. 2008ರಿಂದ 2014ರವರೆಗೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ಆಗಿ ಕಾರ್ಯನಿರ್ವಹಿಸಿದ ಅವರು, ಜಾಗತಿಕ ಮಟ್ಟದಲ್ಲಿ ಮಾನವ ಹಕ್ಕುಗಳ ರಕ್ಷಣೆ ಮತ್ತು ಉಲ್ಲಂಘನೆಗಳ ವಿರುದ್ಧದ ಕ್ರಮಗಳಿಗೆ ಸಂಬಂಧಿಸಿದ ವಿಚಾರಗಳಲ್ಲಿ ಪ್ರಮುಖ ಪಾತ್ರ ವಹಿಸಿದರು.
2021ರಿಂದ 2025ರವರೆಗೆ ಆಕ್ರಮಿತ ಪ್ಯಾಲೆಸ್ತೀನ್ ಪ್ರದೇಶಗಳಿಗೆ ಸಂಬಂಧಿಸಿದ ವಿಶ್ವಸಂಸ್ಥೆಯ ಸ್ವತಂತ್ರ ತನಿಖಾ ಆಯೋಗದ ಅಧ್ಯಕ್ಷೆಯಾಗಿದ್ದರು. ಈ ಆಯೋಗವು ಗಾಜಾದಲ್ಲಿ ಇಸ್ರೇಲ್ ನರಮೇಧ ಎಸಗಿದೆ ಎಂಬ ತೀರ್ಮಾನಕ್ಕೆ ಬಂದಿತ್ತು. ಇಸ್ರೇಲ್ ಈ ವರದಿಯನ್ನು ತಿರಸ್ಕರಿಸಿತ್ತು.
2019ರಲ್ಲಿ ಮ್ಯಾನ್ಮಾರ್ ವಿರುದ್ಧದ ನರಮೇಧ ಆರೋಪಕ್ಕೆ ಸಂಬಂಧಿಸಿದ ಅಂತರರಾಷ್ಟ್ರೀಯ ನ್ಯಾಯಾಲಯದ ಪ್ರಕರಣದಲ್ಲಿ ತಾತ್ಕಾಲಿಕ ನ್ಯಾಯಮೂರ್ತಿಯಾಗಿ ನೇಮಕಗೊಂಡ ಅವರು, ಅಂತರರಾಷ್ಟ್ರೀಯ ನ್ಯಾಯಾಂಗ ಕ್ಷೇತ್ರದಲ್ಲಿ ತಮ್ಮ ಸೇವೆಯನ್ನು ಮುಂದುವರಿಸಿದ್ದಾರೆ.
ಕಾನೂನಿನ ಮುಂದೆ ಅಧಿಕಾರವೂ ಹೊಣೆಗಾರಿಕೆಗೆ ಒಳಪಡಬೇಕು
ರಾಜ್ಯಗಳು ಮತ್ತು ರಾಷ್ಟ್ರೀಯ ನಾಯಕರು ಸೇರಿದಂತೆ ಅಧಿಕಾರದಲ್ಲಿರುವವರೂ ಅಂತರರಾಷ್ಟ್ರೀಯ ಕಾನೂನಿಗೆ ಬದ್ಧರಾಗಿರಬೇಕು ಎಂಬುದು ನವಿ ಪಿಳ್ಳೆ ಅವರ ವೃತ್ತಿಜೀವನದ ಪ್ರಮುಖ ನಿಲುವಾಗಿದೆ. ಹಿಂಸೆ ಮತ್ತು ಸಂಘರ್ಷಗಳ ಸಂತ್ರಸ್ತರಿಗೆ ನ್ಯಾಯ ದೊರೆಯಬೇಕು ಹಾಗೂ ಗಂಭೀರ ಅಪರಾಧಗಳಿಗೆ ಹೊಣೆಗಾರರಾದವರು ಅಧಿಕಾರದ ಪ್ರಭಾವದಿಂದ ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಬಾರದು ಎಂಬ ತತ್ವವನ್ನು ಅವರು ಪ್ರತಿಪಾದಿಸಿದ್ದಾರೆ.
ಅಂತರರಾಷ್ಟ್ರೀಯ ನ್ಯಾಯಾಂಗ ಸಂಸ್ಥೆಗಳು ರಾಜಕೀಯ ಒತ್ತಡ ಮತ್ತು ಟೀಕೆಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಈ ಪ್ರಶಸ್ತಿ ಘೋಷಣೆಯಾಗಿದೆ. ಬಲಪ್ರಯೋಗದ ಬದಲು ಕಾನೂನು ಮತ್ತು ನ್ಯಾಯದ ಮೂಲಕ ಸಂಘರ್ಷಗಳನ್ನು ಪರಿಹರಿಸುವುದು ಶಾಂತಿಯುತ ಜಗತ್ತಿನ ನಿರ್ಮಾಣಕ್ಕೆ ಅಗತ್ಯವೆಂದು ನೊಬೆಲ್ ಸಮಿತಿ ಒತ್ತಿಹೇಳಿದೆ.
2026ರ ನೊಬೆಲ್ ಶಾಂತಿ ಪ್ರಶಸ್ತಿಯು ನವಿ ಪಿಳ್ಳೆ ಅವರ ವೈಯಕ್ತಿಕ ಸಾಧನೆಗೆ ಸಂದ ಗೌರವ ಮಾತ್ರವಲ್ಲದೆ, ಮಾನವ ಹಕ್ಕುಗಳ ರಕ್ಷಣೆ, ನ್ಯಾಯಾಂಗದ ಸ್ವಾತಂತ್ರ್ಯ ಮತ್ತು ಅಂತರರಾಷ್ಟ್ರೀಯ ಕಾನೂನಿನ ಮಹತ್ವಕ್ಕೆ ನೀಡಿದ ಜಾಗತಿಕ ಮನ್ನಣೆಯಾಗಿದೆ.
ಈ ಪ್ರಶಸ್ತಿಯನ್ನು ಡಿಸೆಂಬರ್ 10ರಂದು ನಾರ್ವೆಯ ಒಸ್ಲೊದಲ್ಲಿ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಯ ಮೊತ್ತ 1.2 ಕೋಟಿ ಸ್ವೀಡಿಷ್ ಕ್ರೋನರ್ ಆಗಿದ್ದು, ಇದು ಸುಮಾರು 12 ಲಕ್ಷ ಅಮೆರಿಕನ್ ಡಾಲರ್ಗೆ ಸಮಾನವಾಗಿದೆ.
