ಬೆಂಗಳೂರು : ರಾಜ್ಯ ಸರ್ಕಾರ ಜಾರಿಗೆ ತರುತ್ತಿರುವ ಬಿಡದಿ ಟೌನ್ ಶಿಪ್ (Bidadi township) ಹೊಸ ಯೋಜನೆ ಕೇವಲ ಒಂದು ಲೂಟಿ ಮಾಡುವ ತಂತ್ರ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy) ತೀವ್ರವಾಗಿ ಟೀಕಿಸಿದ್ದಾರೆ. ಈ ವಿಚಾರದಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯ ಗೊಂದಲ ಬೇಡ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬೃಹತ್ ಪ್ರಮಾಣದ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳುವ ಸರ್ಕಾರದ ಕ್ರಮ ಸಾಮಾನ್ಯ ಜನರಿಗೆ ಮತ್ತು ಕೃಷಿಕರಿಗೆ (Farmers) ಮಾಡುವ ದೊಡ್ಡ ದ್ರೋಹವಾಗಿದೆ ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ನೇತೃತ್ವದ ಇಂದಿನ ಆಡಳಿತ ಕೇವಲ ರಿಯಲ್ ಎಸ್ಟೇಟ್ ಉದ್ಯಮಿಗಳ ಹಾಗೂ ಭೂ ಮಾಫಿಯಾದ ಹಿತಾಸಕ್ತಿ ಕಾಯಲು ಇಂತಹ ಯೋಜನೆಗಳನ್ನು ಹಠಕ್ಕೆ ಬಿದ್ದು ಜಾರಿಗೆ ತರುತ್ತಿದೆ ಎಂದು ಹೆಚ್ .ಡಿ.ಕೆ ದೂರಿದ್ದಾರೆ. ಈ ಹಿಂದೆ ತಾವು ಆಡಳಿತದಲ್ಲಿದ್ದಾಗ ತಂದಿದ್ದ ಪರಿಕಲ್ಪನೆಗೂ, ಈಗಿನ ಸರ್ಕಾರ ರೂಪಿಸಿರುವ ಜನವಿರೋಧಿ ರೂಪರೇಷೆಗಳಿಗೂ ಯಾವುದೇ ಹೋಲಿಕೆಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅನ್ನದಾತರ ಹಿತವನ್ನು ಬಲಿಗೊಟ್ಟು ಕೇವಲ ಶ್ರೀಮಂತರ ಮತ್ತು ಬಂಡವಾಳಶಾಹಿಗಳ ಏಳಿಗೆಗಾಗಿ ಈ ಯೋಜನೆ ಸಿದ್ಧವಾಗಿದೆ. ಸಾರ್ವಜನಿಕರ ವಿರೋಧದ ನಡುವೆಯೂ ಬಲವಂತವಾಗಿ ಜಮೀನು ಕಸಿದುಕೊಳ್ಳುವ ಸರ್ಕಾರದ ನಿರ್ಧಾರದ ವಿರುದ್ಧ ನಿರಂತರವಾಗಿ ಹೋರಾಡುವುದಾಗಿ ಎಚ್ಚರಿಸಿದ್ದಾರೆ.
