ಪಾಟ್ನಾ, ಏಪ್ರಿಲ್ 14: ಬಿಹಾರ ರಾಜಕೀಯದಲ್ಲಿ ಇಂದು ಮಹತ್ತರ ಬೆಳವಣಿಗೆ ನಡೆದಿದ್ದು, ರಾಜ್ಯದ ಮುಂದಿನ ಮುಖ್ಯಮಂತ್ರಿಯಾರು ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಸುಮಾರು ಎರಡು ದಶಕಗಳ ಕಾಲ ಮುಖ್ಯಮಂತ್ರಿ ಹುದ್ದೆ ನಿರ್ವಹಿಸಿದ್ದ ನಿತೀಶ್ ಕುಮಾರ್ ಅವರು ಇಂದು ತಮ್ಮ ಕೊನೆಯ ಸಚಿವ ಸಂಪುಟ ಸಭೆಯ ನಂತರ ರಾಜೀನಾಮೆ ನೀಡಿದ್ದಾರೆ.
ಇದರೊಂದಿಗೆ ತೆರವಾದ ಮುಖ್ಯಮಂತ್ರಿ ಸ್ಥಾನಕ್ಕೆ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಅವರನ್ನು ಆಯ್ಕೆ ಮಾಡಲಾಗಿದೆ. ಪಾಟ್ನಾದ ಬಿಹಾರ ವಿಧಾನಸಭೆಯ ಕೇಂದ್ರ ಸಭಾಂಗಣದಲ್ಲಿ ನಡೆದ ಎನ್‌ಡಿಎ (NDA) ಮೈತ್ರಿಕೂಟದ ಮಹತ್ವದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಮುಖ್ಯಮಂತ್ರಿಯಾಗಿ ಆಯ್ಕೆಯಾದ ಸಾಮ್ರಾಟ್ ಚೌಧರಿ ಅವರು ನಾಳೆ (ಏಪ್ರಿಲ್ 15) ಪ್ರಮಾಣವಚನ ಸ್ವೀಕರಿಸಲಿದ್ದು, ಬಿಹಾರದ ಹೊಸ ಆಡಳಿತಕ್ಕೆ ಚಾಲನೆ ನೀಡಲಿದ್ದಾರೆ.
ಈ ಸಭೆಗೆ ಮೊದಲು ಮಧ್ಯಾಹ್ನ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆದಿದ್ದು, ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ವೀಕ್ಷಕರಾಗಿ ಭಾಗವಹಿಸಿದ್ದರು.
ಇನ್ನೊಂದೆಡೆ, ನಿರ್ಗಮಿತ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜ್ಯ ರಾಜಕಾರಣದಿಂದ ದೂರ ಸರಿದು ರಾಷ್ಟ್ರ ರಾಜಕಾರಣದತ್ತ ಗಮನ ಹರಿಸಿದ್ದಾರೆ. ಮಾರ್ಚ್ 30ರಂದು ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ ಅವರು, ಏಪ್ರಿಲ್ 11ರಂದು ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಇದೀಗ ಅವರು ದೆಹಲಿಯಲ್ಲಿ ಸಕ್ರಿಯ ರಾಜಕೀಯ ಪಾತ್ರವಹಿಸುವ ಸಾಧ್ಯತೆ ಇದೆ.
ವಿಧಾನಸಭೆಯಲ್ಲಿ ಅತಿದೊಡ್ಡ ಪಕ್ಷವಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರದ ನೇತೃತ್ವ ವಹಿಸಿಕೊಳ್ಳುವುದು ನಿರೀಕ್ಷಿತವಾಗಿತ್ತು. ಮುಖ್ಯಮಂತ್ರಿ ಹುದ್ದೆಗೆ ಹಲವರ ಹೆಸರುಗಳು ಕೇಳಿಬಂದಿದ್ದವು. ಉಪಮುಖ್ಯಮಂತ್ರಿಯಾಗಿದ್ದ ಸಾಮ್ರಾಟ್ ಚೌಧರಿ ಮುಂಚೂಣಿಯಲ್ಲಿ ಇದ್ದರು. ಜೊತೆಗೆ ನಿತ್ಯಾನಂದ ರೈ, ವಿಜಯ್ ಕುಮಾರ್ ಸಿನ್ಹಾ, ನಿತೀಶ್ ಮಿಶ್ರಾ ಮತ್ತು ದಿಲೀಪ್ ಜೈಸ್ವಾಲ್ ಅವರ ಹೆಸರುಗಳು ಕೂಡ ಚರ್ಚೆಯಲ್ಲಿದ್ದವು.
ಆದರೆ ಅಂತಿಮವಾಗಿ ಸಾಮ್ರಾಟ್ ಚೌಧರಿ ಅವರೇ ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆಯಾಗಿದ್ದು, ಬಿಹಾರದಲ್ಲಿ ಹೊಸ ರಾಜಕೀಯ ಅಧ್ಯಾಯ ಆರಂಭವಾಗಿದೆ.
