ಬೆಂಗಳೂರು: ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಆರ್ಥಿಕ ಹೊರೆಯನ್ನು ಎದುರಿಸುತ್ತಿರುವ ಕರ್ನಾಟಕ ಸರ್ಕಾರಕ್ಕೆ ಕೊಂಚ ರಿಲೀಫ್ ಸಿಕ್ಕಿದೆ. ಸರ್ಕಾರದ ‘ಗ್ಯಾರಂಟಿ ಗೀವ್ ಅಪ್’ ಕರೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 3 ಲಕ್ಷಕ್ಕೂ ಹೆಚ್ಚು ಮಂದಿ ಗೃಹಜ್ಯೋತಿ ಯೋಜನೆಯ ಉಚಿತ ವಿದ್ಯುತ್ ಸೌಲಭ್ಯವನ್ನು ಸ್ವಯಂಪ್ರೇರಿತರಾಗಿ ತ್ಯಜಿಸಿದ್ದಾರೆ.
ಗೃಹಜ್ಯೋತಿ ಯೋಜನೆಯ ಮರುಪರಿಶೀಲನೆ ವೇಳೆ ಯೋಜನೆಯ ಪ್ರಯೋಜನ ತಮಗೆ ಅಗತ್ಯವಿಲ್ಲ ಎಂದು ಹಲವು ಫಲಾನುಭವಿಗಳು ಸ್ವಯಂಪ್ರೇರಿತರಾಗಿ ಮುಂದೆ ಬಂದು ಸೌಲಭ್ಯದಿಂದ ಹೊರಗುಳಿಯುತ್ತಿದ್ದಾರೆ. ಗೀವ್ ಅಪ್ ಅಭಿಯಾನಕ್ಕೆ ಉತ್ತಮ ಸ್ಪಂದನೆ ದೊರೆತ ಹಿನ್ನೆಲೆಯಲ್ಲಿ ಮನೆ-ಮನೆ ಪರಿಶೀಲನಾ ಕಾರ್ಯವನ್ನು ಸೆಪ್ಟೆಂಬರ್ ಅಂತ್ಯದವರೆಗೆ ವಿಸ್ತರಿಸಲಾಗಿದೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ತಿಳಿಸಿದ್ದಾರೆ.
ಸರ್ಕಾರಕ್ಕೆ ಎಷ್ಟು ಉಳಿತಾಯ?
150 ಯೂನಿಟ್ ವಿದ್ಯುತ್ ಬಳಕೆಯ ಲೆಕ್ಕಾಚಾರದಲ್ಲಿ ಪ್ರತಿ ಫಲಾನುಭವಿಯಿಂದ ತಿಂಗಳಿಗೆ ಸರಾಸರಿ 1,500 ರೂ.ನಷ್ಟು ಉಳಿತಾಯವಾಗುವ ನಿರೀಕ್ಷೆಯಿದೆ. ಒಟ್ಟಾರೆ ಇದರಿಂದ ಸರ್ಕಾರಕ್ಕೆ ತಿಂಗಳಿಗೆ ಸುಮಾರು 42 ಕೋಟಿ ರೂ. ಉಳಿತಾಯವಾಗಲಿದ್ದು, ವಾರ್ಷಿಕವಾಗಿ ಸುಮಾರು 500 ಕೋಟಿ ರೂ. ಆರ್ಥಿಕ ಹೊರೆ ತಗ್ಗುವ ಸಾಧ್ಯತೆಯಿದೆ.
ಗೃಹಲಕ್ಷ್ಮಿಗೂ ರೀ-ಸರ್ವೆ
ಗೃಹಜ್ಯೋತಿ ಯೋಜನೆಯ ಮರುಪರಿಶೀಲನೆಯ ಬೆನ್ನಲ್ಲೇ ಇದೀಗ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೂ ರೀ-ಸರ್ವೆ ನಡೆಸಲು ಸರ್ಕಾರ ಮುಂದಾಗಿದೆ. ನಾಳೆಯಿಂದ ಈ ಪ್ರಕ್ರಿಯೆಗೆ ಅಧಿಕೃತ ಚಾಲನೆ ನೀಡಲಾಗುವುದು.
ಆಧುನಿಕ ತಂತ್ರಜ್ಞಾನ ಬಳಸಿ ಅನರ್ಹ ಫಲಾನುಭವಿಗಳನ್ನು ಗುರುತಿಸಿ, ಅವರನ್ನು ಯೋಜನೆಯ ಫಲಾನುಭವಿಗಳ ಪಟ್ಟಿಯಿಂದ ಕೈಬಿಡಲು ಕ್ರಮ ಕೈಗೊಳ್ಳಲಾಗುತ್ತದೆ. ಇದೇ ವೇಳೆ ಆರ್ಥಿಕವಾಗಿ ಸಬಲರಾಗಿರುವ ಮಹಿಳೆಯರಿಗೆ ತಮಗೆ ದೊರೆಯುವ ಮಾಸಿಕ 2,000 ರೂ. ಗೃಹಲಕ್ಷ್ಮಿ ಸಹಾಯಧನವನ್ನು ಸ್ವಯಂಪ್ರೇರಿತವಾಗಿ ತ್ಯಜಿಸುವ ಅವಕಾಶ ಕಲ್ಪಿಸಲಾಗುತ್ತದೆ.
ಗೃಹಜ್ಯೋತಿಯ ಮಾದರಿಯಲ್ಲೇ ಗೃಹಲಕ್ಷ್ಮಿ ಯೋಜನೆಯಲ್ಲೂ ಅನರ್ಹ ಫಲಾನುಭವಿಗಳನ್ನು ಹೊರಗಿಡುವುದರ ಜೊತೆಗೆ, ಸ್ಥಿತಿವಂತರು ಸ್ವಯಂಪ್ರೇರಿತರಾಗಿ ಯೋಜನೆಯಿಂದ ಹೊರಗುಳಿಯುವ ಸಾಧ್ಯತೆ ಇದೆ. ಇದರಿಂದ ರಾಜ್ಯ ಸರ್ಕಾರಕ್ಕೆ ದೊಡ್ಡ ಪ್ರಮಾಣದಲ್ಲಿ ಹಣ ಉಳಿತಾಯವಾಗುವ ನಿರೀಕ್ಷೆಯಿದೆ.
