ಬೆಂಗಳೂರು : ಸರ್ಕಾರಿ ಉದ್ಯೋಗ (Govt Job) ಪಡೆಯಲು ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಬರೆಯುವುದು ಸಾಮಾನ್ಯ. ಆದರೆ ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶುವೈದ್ಯಾಧಿಕಾರಿ ನೇಮಕಾತಿಯಲ್ಲಿ ಹುದ್ದೆಯನ್ನೇ ಹಣಕ್ಕೆ ‘ಮಾರಾಟ’ ಮಾಡುವ ಪ್ರಯತ್ನ ನಡೆದಿರುವ ಆರೋಪ ಇದೀಗ ತನಿಖೆಯಲ್ಲಿ ಬಹಿರಂಗವಾಗಿದೆ. ಸಿಐಡಿ (CID) ತನಿಖೆ ಮುಂದುವರಿದಂತೆ, ಈ ಅಕ್ರಮದ ಹಿಂದೆ ದೊಡ್ಡ ಜಾಲವಿರುವ ಶಂಕೆ ಮತ್ತಷ್ಟು ಬಲವಾಗಿದೆ. ಪಶುವೈದ್ಯಾಧಿಕಾರಿ ಹುದ್ದೆಗೆ ಅಧಿಸೂಚನೆ ಹೊರಬಿದ್ದ ನಂತರ ಹಣದ ವ್ಯವಹಾರದ ಮಾತುಕತೆ ಆರಂಭವಾಗಿತ್ತು ಎನ್ನಲಾಗಿದೆ. ಆರಂಭದಲ್ಲಿ ಒಂದು ಹುದ್ದೆಗೆ ಬರೋಬ್ಬರಿ ₹1.10 ಕೋಟಿ ಕೇಳಲಾಗಿತ್ತು. ಆದರೆ ನಿರೀಕ್ಷಿಸಿದಷ್ಟು ಅಭ್ಯರ್ಥಿಗಳು ಸಿಗದ ಹಿನ್ನೆಲೆಯಲ್ಲಿ ದರವನ್ನು ಹಂತ ಹಂತವಾಗಿ ಇಳಿಸಲಾಗಿತ್ತು ಎಂದು ತನಿಖಾ ಮೂಲಗಳು ತಿಳಿಸಿವೆ. ಮೊದಲಿಗೆ ₹90 ಲಕ್ಷ, ಬಳಿಕ ₹80 ಲಕ್ಷಕ್ಕೆ ದರ ಇಳಿದಿದ್ದು, ಕೊನೆಗೆ ₹40 ಲಕ್ಷಕ್ಕೆ ಹುದ್ದೆ ಕೊಡಿಸುವ ಮಾತುಕತೆ ನಡೆದಿತ್ತು ಎನ್ನಲಾಗಿದೆ. ಅಂದರೆ ಸರ್ಕಾರಿ ಹುದ್ದೆಗೆ ‘ಸೀಸನ್ ಆಫರ್’ ರೀತಿಯಲ್ಲಿ ದರ ನಿಗದಿ ಮಾಡಿ ಅಭ್ಯರ್ಥಿಗಳನ್ನು ಸೆಳೆಯುವ ಪ್ರಯತ್ನ ನಡೆದಿರುವ ಆರೋಪ ಪ್ರಕರಣಕ್ಕೆ ಹೊಸ ಆಯಾಮ ನೀಡಿದೆ.
ಪರೀಕ್ಷೆಗೂ ಮುನ್ನವೇ ಹಣದ ಮಾತುಕತೆ
ಜನವರಿ 9ರಂದು ಪರೀಕ್ಷೆ ನಡೆಯುವ ಮೊದಲೇ ಹುದ್ದೆಗಾಗಿ ಅಭ್ಯರ್ಥಿಗಳನ್ನು ಸಂಪರ್ಕಿಸುವ ಕೆಲಸ ನಡೆದಿತ್ತು ಎನ್ನಲಾಗಿದೆ. 2025ರ ಡಿಸೆಂಬರ್ 20ರಂದು ಮೊಹಮ್ಮದ್ ಸುಹೇಲ್ ಬಂಡೇಕೋಳ್ ಎಂಬ ಅಭ್ಯರ್ಥಿಯೊಂದಿಗೆ ₹40 ಲಕ್ಷಕ್ಕೆ ವ್ಯವಹಾರ ಕುದುರಿಸಲಾಗಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಈ ವ್ಯವಹಾರದಲ್ಲಿ ₹20 ಲಕ್ಷವನ್ನು ಮುಂಗಡವಾಗಿ ಪಡೆಯಲಾಗಿತ್ತು ಎಂಬ ಆರೋಪವಿದೆ. ಅಭ್ಯರ್ಥಿಗಳನ್ನು ಹುಡುಕುವ ಪ್ರಯತ್ನ ಪರೀಕ್ಷೆಯ ದಿನಾಂಕ ಸಮೀಪಿಸುವವರೆಗೂ ನಡೆದಿದ್ದು, ಒಟ್ಟು 21 ಅಭ್ಯರ್ಥಿಗಳೊಂದಿಗೆ ವ್ಯವಹಾರ ಕುದುರಿಸಲು ಪ್ರಯತ್ನಿಸಲಾಗಿತ್ತು ಎನ್ನಲಾಗಿದೆ.
ಪ್ರಶ್ನೆಪತ್ರಿಕೆ ಮಾರಾಟದ ಆರೋಪ
ಪ್ರಕರಣದ ತನಿಖೆಯಲ್ಲಿ ಪಶುವೈದ್ಯಾಧಿಕಾರಿ ಹುದ್ದೆಯ ಡೀಲ್ ಮಾತ್ರವಲ್ಲದೆ ಪ್ರಶ್ನೆಪತ್ರಿಕೆ ಮಾರಾಟದ ಆರೋಪವೂ ಮುನ್ನೆಲೆಗೆ ಬಂದಿದೆ. ಮಧ್ಯವರ್ತಿ ಬಸವರಾಜ್ ಕನ್ನಾಳಿ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ತನಿಖಾ ಮೂಲಗಳು ಆರೋಪಿಸಿವೆ. ಕನ್ನಾಳಿ ತನ್ನ ರಾಜಕೀಯ ಸಂಪರ್ಕಗಳ ಬಗ್ಗೆ ಹೇಳಿಕೊಂಡು, ಮುಂದಿನ ದಿನಗಳಲ್ಲಿ ಶಾಸಕನಾಗುವ ವಿಶ್ವಾಸ ವ್ಯಕ್ತಪಡಿಸಿದ್ದ ಎನ್ನಲಾಗಿದೆ. ಪ್ರಶ್ನೆಪತ್ರಿಕೆಯನ್ನು ಬಳಸಿಕೊಂಡು ದೊಡ್ಡ ಮೊತ್ತದ ಹಣ ಗಳಿಸಬಹುದು ಎಂದು ಹೇಳಿ ಐಎಎಸ್ ಅಧಿಕಾರಿ ಗ್ಯಾನೇಂದ್ರ ಅವರ ವಿಶ್ವಾಸ ಗಳಿಸಿದ್ದ ಎನ್ನುವ ಆರೋಪವೂ ಇದೆ. ಕನ್ನಾಳಿ ಮತ್ತು ಗ್ಯಾನೇಂದ್ರ ನಡುವೆ ಹಿಂದಿನಿಂದಲೂ ಆತ್ಮೀಯ ಪರಿಚಯವಿತ್ತು ಎನ್ನಲಾಗಿದ್ದು, ಭಾಲ್ಕಿಯಲ್ಲಿ ಎಸಿ ಹಾಗೂ ಸಿಇಒ ಆಗಿ ಕಾರ್ಯನಿರ್ವಹಿಸಿದ್ದ ಸಮಯದಿಂದಲೇ ಇಬ್ಬರ ನಡುವೆ ನಿಕಟ ಸಂಪರ್ಕವಿತ್ತು ಎಂದು ತನಿಖಾ ಮೂಲಗಳು ಹೇಳಿವೆ.
29 ಅಭ್ಯರ್ಥಿಗಳಿಂದ ಲಕ್ಷಾಂತರ ರೂ.?
ಪ್ರಶ್ನೆಪತ್ರಿಕೆ ಪಡೆದ ಬಳಿಕ ಅದನ್ನು ವಿವಿಧ ಅಭ್ಯರ್ಥಿಗಳಿಗೆ ತಲುಪಿಸಲಾಗಿತ್ತು ಎನ್ನಲಾಗಿದೆ. ಸುಮಾರು 29 ಅಭ್ಯರ್ಥಿಗಳಿಂದ ₹40 ಲಕ್ಷ, ₹50 ಲಕ್ಷ ಮತ್ತು ₹80 ಲಕ್ಷದವರೆಗೆ ಮುಂಗಡ ಹಣ ಸಂಗ್ರಹಿಸಲಾಗಿತ್ತು ಎಂಬ ಮಾಹಿತಿ ತನಿಖೆಯಲ್ಲಿ ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ. ಆದರೆ ವಿಚಾರಣೆ ವೇಳೆ ತಮ್ಮ ಕೈಗೆ ಯಾವುದೇ ಹಣ ಬಂದಿಲ್ಲ ಎಂದು ಗ್ಯಾನೇಂದ್ರ ಹೇಳಿರುವುದಾಗಿ ತಿಳಿದುಬಂದಿದೆ. ಹೀಗಾಗಿ ಹಣ ಯಾರ ಬಳಿ ಸೇರಿತು, ಮಧ್ಯವರ್ತಿಗಳ ಪಾತ್ರವೇನು ಮತ್ತು ಈ ಹಣಕಾಸು ವ್ಯವಹಾರದ ಅಂತಿಮ ಫಲಾನುಭವಿಗಳು ಯಾರು ಎಂಬುದನ್ನು ಸಿಐಡಿ ಪರಿಶೀಲಿಸುತ್ತಿದೆ.
ದೊಡ್ಡ ಜಾಲದ ಸುಳಿವು?
ಒಂದು ಹುದ್ದೆಗೆ ₹1.10 ಕೋಟಿಯಿಂದ ಆರಂಭವಾದ ಬೇಡಿಕೆ ₹40 ಲಕ್ಷದವರೆಗೆ ಇಳಿದಿರುವುದು ಹಾಗೂ ಹಲವು ಅಭ್ಯರ್ಥಿಗಳೊಂದಿಗೆ ವ್ಯವಹಾರ ನಡೆಸಿರುವ ಆರೋಪಗಳು ಪ್ರಕರಣದ ವ್ಯಾಪ್ತಿಯನ್ನು ವಿಸ್ತರಿಸಿವೆ. ಹುದ್ದೆ ಕೊಡಿಸುವ ಹೆಸರಿನಲ್ಲಿ ಹಣ ಪಡೆದವರು ಯಾರು, ಪ್ರಶ್ನೆಪತ್ರಿಕೆ ಯಾರಿಂದ ಯಾರಿಗೆ ತಲುಪಿತು, ಹಣದ ವಹಿವಾಟಿನಲ್ಲಿ ಇನ್ನೂ ಎಷ್ಟು ಮಂದಿ ಮಧ್ಯವರ್ತಿಗಳಿದ್ದಾರೆ ಎಂಬುದರ ಕುರಿತು ಸಿಐಡಿ ತನಿಖೆ ಮುಂದುವರಿಸಿದೆ. ಸರ್ಕಾರಿ ನೇಮಕಾತಿಯನ್ನೇ ಹಣದ ವ್ಯವಹಾರವನ್ನಾಗಿ ಮಾಡಿರುವ ಈ ಆರೋಪದ ಹಿಂದೆ ಇನ್ನಷ್ಟು ಹೆಸರುಗಳು ಹೊರಬರುವ ಸಾಧ್ಯತೆಯಿದೆ.
