ಬೆಂಗಳೂರು : ಕರ್ನಾಟಕದ (Karnataka ) ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರವು ಶೀಘ್ರದಲ್ಲೇ ಸಂಜೆಯ ಪೌಷ್ಟಿಕ ಲಘು ಉಪಹಾರ (Evening Snacks) ನೀಡಲು ಮಹತ್ವದ ಸಿದ್ಧತೆ ನಡೆಸಿದೆ. ಶಾಲಾ ಮಕ್ಕಳ ಆರೋಗ್ಯ ಸುಧಾರಣೆ ಮತ್ತು ಅಪೌಷ್ಟಿಕತೆ ತಡೆಯುವ ನಿಟ್ಟಿನಲ್ಲಿ ಈ ಹೊಸ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ.
ಮೊದಲ ಹಂತದಲ್ಲಿ ಈ ಯೋಜನೆಯು ವಿಜಯನಗರ, ಬಳ್ಳಾರಿ, ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳ್ಳಲಿದೆ. 1ನೇ ತರಗತಿಯಿಂದ 10ನೇ ತರಗತಿಯವರೆಗಿನ ಸಾವಿರಾರು ವಿದ್ಯಾರ್ಥಿಗಳು ಈ ಸೌಲಭ್ಯದ ನೇರ ಪ್ರಯೋಜನ ಪಡೆಯಲಿದ್ದು, ಶಾಲಾ ವೇಳೆಯ ನಂತರ ಮಕ್ಕಳಿಗೆ ಎದುರಾಗುವ ಆಯಾಸವನ್ನು ತಪ್ಪಿಸಲು ಇದು ನೆರವಾಗಲಿದೆ.ಗಣಿ ಬಾಧಿತ ಪ್ರದೇಶಗಳಲ್ಲಿ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರ ಒದಗಿಸುವುದು ಸಂಜೆ ಸ್ನ್ಯಾಕ್ಸ್ ನೀಡುವ ಉದ್ದೇಶವಾಗಿದೆ.
ಮಧ್ಯಾಹ್ನದ ಬಿಸಿಯೂಟ ಹಾಗೂ ಬೆಳಗಿನ ರಾಗಿ ಮಾಲ್ಟ್ / ಹಾಲಿನ ಯೋಜನೆಯ ಜೊತೆಗೆ, ಸಂಜೆ ವೇಳೆ ಕಡಲೆಕಾಯಿ ಚಿಕ್ಕಿ, ಸಿರಿಧಾನ್ಯದ ಲಘು ತಿಂಡಿಗಳು ಹಾಗೂ ಹಣ್ಣುಗಳನ್ನು ನೀಡಲು ಪೌಷ್ಟಿಕಾಂಶ ತಜ್ಞರ ಸಲಹೆ ಪಡೆಯಲಾಗಿದೆ. ಈ ಪೌಷ್ಟಿಕ ಆಹಾರವು ವಿದ್ಯಾರ್ಥಿಗಳ ದೈಹಿಕ ಬೆಳವಣಿಗೆಗೆ ಬೆಂಬಲ ನೀಡಲಿದ್ದು, ಸಂಜೆಯ ವಿಶೇಷ ತರಗತಿಗಳಲ್ಲಿ ಮಕ್ಕಳ ಏಕಾಗ್ರತೆ ಹೆಚ್ಚಿಸಲು ಸಹಕಾರಿಯಾಗಲಿದೆ. ಈ ನಾಲ್ಕು ಜಿಲ್ಲೆಗಳಲ್ಲಿ ಯೋಜನೆಯ ಯಶಸ್ಸು ಹಾಗೂ ಕಾರ್ಯಕ್ಷಮತೆಯನ್ನು ಪರಿಶೀಲಿಸಿದ ನಂತರ, ಶಿಕ್ಷಣ ಇಲಾಖೆಯು ಇದನ್ನು ರಾಜ್ಯದಾದ್ಯಂತ ಇರುವ ಎಲ್ಲಾ ಸರ್ಕಾರಿ ಶಾಲೆಗಳಿಗೂ ವಿಸ್ತರಿಸುವ ಯೋಜನೆಯನ್ನು ಹೊಂದಿದೆ. ಸರ್ಕಾರದ ಈ ನಿರ್ಧಾರಕ್ಕೆ ಸಾರ್ವಜನಿಕರು ಹಾಗೂ ಪೋಷಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
