Thursday, May 2, 2024

ಸತ್ಯ | ನ್ಯಾಯ |ಧರ್ಮ

ಬಿಜೆಪಿಯೊಳಗಿನ ಕಿಚ್ಚು ಧಗ ಧಗ| ಯಡಿಯೂರಪ್ಪ ಕಟ್ಟಿದ ಹುತ್ತದಲ್ಲಿ ಬಂದು ಸೇರಿಕೊಂಡರು, ಮೋದಿಯ ಮರ್ಯಾದೆ ತೆಗೆದರು: ರೇಣುಕಾಚಾರ್ಯ

ದಾವಣಗೆರೆ: ಯಡ್ಯೂರಪ್ಪ ನೇತ್ರತ್ವದಲ್ಲಿ ನಾವೆಲ್ಲ ಕಟ್ಟಿ ಬೆಳೆಸಿದ ಪಕ್ಷವನ್ನು ತಮ್ಮ ವಶಕ್ಕೆ ತೆಗೆದುಕೊಂಡು ಈಗ ನಮ್ಮನ್ನೇ ಹೊರಹಾಕಲು ನೋಡುತ್ತಿದ್ದಾರೆಂದು ಹೊನ್ನಾಳಿಯ ರೇಣುಕಾಚಾರ್ಯ ಸಂತೋಷ್‌ ಗ್ಯಾಂಗಿನ ವಿರುದ್ಧ ಪರೋಕ್ಷ ಕಿಡಿಕಾರಿದ್ದಾರೆ.

ಇದರೊಂದಿಗೆ ಬಿಜೆಪಿಯೊಳಗೆ ಎಲ್ಲವೂ ಸರಿಯಿಲ್ಲವೆನ್ನುವುದು ಮತ್ತೆ ಸಾಬೀತಾಗಿದೆ. ಬಿಜೆಪಿಯೊಳಗಿನ ಬ್ರಾಹ್ಮಣ ವರ್ಸಸ್‌ ಲಿಂಗಾಯಿತ ಜಗಳವು ಅಲ್ಲಿನ ಇತರ ನಾಯಕರ ಉಸಿರುಗಟ್ಟಿಸುತ್ತಿದ್ದು ಅವರಲ್ಲಿ ಸಾಕಷ್ಟು ಜನರು ಕಾಂಗ್ರೆಸ್‌ ಬಾಗಿಲು ತಟ್ಟುತ್ತಿದ್ದಾರೆ.

ಸೋಮಶೇಖರ್‌, ಸುಧಾಕರ್‌, ಬೈರತಿ ಮೊದಲಾದ ನಾಯಕರನ್ನು ಪಕ್ಷದಲ್ಲಿ ಕೇಳುವವರೇ ಇಲ್ಲದಂತಾಗಿದೆ ಎನ್ನಲಾಗುತ್ತಿದೆ. ಅಶೋಕ್‌ ಮುಂತಾದವರ ಕತೆಯೂ ಇದೇ ಎನ್ನಲಾಗುತ್ತಿದೆ. ಪ್ರತಿಪಕ್ಷದ ನಾಯಕನ ಆಯ್ಕೆಯ ಕಗ್ಗಂಟನ್ನು ಬಿಡಿಸಲಾಗದೆ ಬಿಜೆಪಿಯವರಿಂದ ಚಾಣಾಕ್ಯ ಎಂದು ಕರೆಯಲ್ಪಡುವ ಅಮಿತ್‌ ಶಾ ಕೂಡಾ ಪರದಾಡುತ್ತಿದ್ದಾರೆ.

ಕರ್ನಾಟಕ ಬಿಜೆಪಿಯು ದೇಶ ಮಟ್ಟದಲ್ಲಿಆ ಪಕ್ಷದ ಇಮೇಜನ್ನು ಕೆಡಿಸುತ್ತಿದ್ದು ಇದು ಅಲ್ಲಿನ ಹಿರಿಯ ನಾಯಕರ ನೆಮ್ಮದಿ ಕೆಡಿಸುತ್ತಿದೆ ಎನ್ನಲಾಗುತ್ತಿದೆ. ಈ ಕಾರಣಕ್ಕಾಗಿಯೇ ಮೊನ್ನೆ ರಸ್ತೆ ಬದಿಯಲ್ಲಿ ನಿಂತು ತಮ್ಮ ನಾಯಕನಿಗೆ ಕೈ ಬೀಸುವ ಪರಿಸ್ಥಿತಿ ಬಂದಿದೆ ಎಂದು ಪಕ್ಷದವರೊಬ್ಬರು ಹೇಳಿದ್ದಾರೆ

ಇನ್ನು ಸಂತೋಷ ಕೂಟದ ವಿರುದ್ಧ ಜೋರಾಗಿಯೇ ತೊಡೆ ತಟ್ಟಿರುವ ಅಭಿಮಾನಿಗಳಿಂದ ಹೊನ್ನಾಳಿ ಹೋರಿ ಎಂದು ಕರೆಸಿಕೊಳ್ಳುವ ರೇಣುಕಾಚಾರ್ಯ “ನಮ್ಮ ಮುಖಂಡರು ಸೌಜನ್ಯಕ್ಕಾದರೂ ಕರೆ ಮಾಡಿ ಮಾತನಾಡುತ್ತಿಲ್ಲ. ನಮ್ಮನ್ನು ಬಿಜೆಪಿಯಿಂದ ಹೊರಗೆ ಕಳುಹಿಸಲು ನೋಡುತ್ತಿದ್ದಾರೆ. ಈ ಗಟ್ಟಿ ಧ್ವನಿ ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ” ಎಂದು ಗುಡುಗಿದ್ದಾರೆ.

“ದಾವಣಗೆರೆ ಜಿಲ್ಲೆ ಹೊನ್ನಾಳಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಕಟ್ಟಿದ್ದ ಹುತ್ತದಲ್ಲಿ ಕೆಲವರು ಬಂದು ಸೇರಿಕೊಂಡಿದ್ದಾರೆ. ಈಗ ಬಿಜೆಪಿ ಕಚೇರಿಯಲ್ಲಿ ಕುಳಿತಿರುವವರು ಯಾರೂ ಪಕ್ಷ ಕಟ್ಟಿದವರಲ್ಲ. ಇದನ್ನೆಲ್ಲ ನೆನೆದು ಯಡಿಯೂರಪ್ಪ ನನ್ನ ಮುಂದೆ ಕಣ್ಣೀರು ಹಾಕಿದ್ದರು” ಎಂದು ಅಲವತ್ತುಕೊಂಡರು.

“ದೆಹಲಿಯಲ್ಲಿ ಕೂತಿರುವ ಕರ್ನಾಟಕದವರು ಕಂಟ್ರೋಲ್ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಆದವರು ಅವರ ಮಾತು ಕೇಳಬೇಕಿತ್ತು. ಅಷ್ಟು ನಿಯಂತ್ರಿಸುತ್ತಿದ್ದರು. ನಮ್ಮ ಜಿಲ್ಲೆಯ ನಾಯಕರು ಕೂಡ ನನ್ನನ್ನು ತುಳಿಯಲು ಪ್ರಯತ್ನಿಸಿದರು. ನಮ್ಮ ಕೈಯಿಂದ ಅಧಿಕಾರ ಹೋಗುತ್ತದೆ ಎಂದು ಸಚಿವ ಸ್ಥಾನ ಕೊಡಿಸಲಿಲ್ಲ” ಎಂದು ಸಂಸದ ಜಿ.ಎಂ. ಸಿದ್ದೇಶ್ವರ ವಿರುದ್ಧ ರೇಣುಕಾಚಾರ್ಯ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

ನಳಿನ್‌ ಕುಮಾರ್‌ ಕಟೀಲ್‌ ಮೇಲೂ ಗರಂ ಆದ ಅವರು “

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರ ಅವಧಿ ಮುಗಿದು ಎರಡು ವರ್ಷಗಳಾಗಿದ್ದರೂ ಯಾವ ಪುರುಷಾರ್ಥಕ್ಕೆ ಅವರನ್ನೇ ಮುಂದುವರೆಸುತ್ತಿದ್ದೀರಿ ಎಂದು ಕಿಡಿಕಾರಿದ್ದಾರೆ. ಯಡಿಯೂರಪ್ಪನವರಿಗೆ ಸಂಸದೀಯ ಮಂಡಳಿ ಸ್ಥಾನ ನೀಡಿರುವುದು ನಾಮಕಾವಸ್ತೆಗೆ ಮಾತ್ರ. ರಾಜ್ಯ ಬಿಜೆಪಿ ಕಚೇರಿಯಲ್ಲಿ ಕೂರುವವರು ಕಂಟ್ರೋಲ್ ಮಾಡುತ್ತಿದ್ದಾರೆ” ಎಂದು ಕನಲಿದರು.

ವಿಧಾನಸಭಾ ಚುನಾವಣೆಯ ಸೋಲಿನ ಕುರಿತು ಮಾತನಾಡುತ್ತಾ “ವಿಧಾನಸಭೆ ಚುನಾವಣೆಗೆ ಪ್ರಧಾನಿ ಮೋದಿ ಕರೆತಂದು ಪ್ರಚಾರ ಮಾಡಿಸಿದರು. ಮೋದಿ ಅವರನ್ನು ಕರೆತಂದು ರಾಜ್ಯದ ಮೂಲೆ ಮೂಲೆ ಸುತ್ತಿಸಿ ಮರ್ಯಾದೆ ತೆಗೆದರು. ಮೋದಿ, ಅಮಿತ್ ಶಾ, ಜೆ.ಪಿ. ನಡ್ಡಾ ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ, ಕೆಲವರು ಪಕ್ಷವನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಲು ಪ್ರಯತ್ನ ನಡೆಸಿದ್ದಾರೆ. ರಿಮೋಟ್ ಕಂಟ್ರೋಲ್ ರಾಜಕೀಯ ಮಾಡುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದ್ದಾರೆ.

ಬಿ. ಎಲ್. ಸಂತೋಷ್ ವಿರುದ್ಧ ರೇಣುಕಾಚಾರ್ಯ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದು, ಯಡಿಯೂರಪ್ಪ ಕಟ್ಟಿ ಬೆಳೆಸಿದ ಪಕ್ಷವನ್ನು ಈಗ ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿದ್ದಾರೆ. ನಮ್ಮ ಮುಖಂಡರು ಸೌಜನ್ಯಕ್ಕಾದರೂ ಕರೆ ಮಾಡಿ ಮಾತನಾಡುತ್ತಿಲ್ಲ. ನಮ್ಮನ್ನು ಬಿಜೆಪಿಯಿಂದ ಹೊರಗೆ ಕಳುಹಿಸಲು ನೋಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಬಿಜೆಪಿಯ ಮನೆಯ ಬಾಗಿಲುಗಳು ದಿನದಿಂದ ದಿನಕ್ಕೆ ವಿವಿಧ ದಿಕ್ಕುಗಳಿಂದ ತೆರೆದುಕೊಳ್ಳುತ್ತಿದ್ದು, ರಾಷ್ಟ್ರೀಯ ನಾಯಕರು ಸರ್ಕಾರ ಹೋದ ನಂತರ ಫಂಡ್‌ ಬರುವುದಿಲ್ಲ ಎನ್ನುವ ಕಾರಣಕ್ಕೋ ಏನೋ ಈ ಕುರಿತು ತಲೆ ಕೆಡಿಸಿಕೊಳ್ಳುತ್ತಲೇ ಎನ್ನುವುದು ಕಾರ್ಯಕರ್ತರ ಅಳಲು.

Related Articles

ಇತ್ತೀಚಿನ ಸುದ್ದಿಗಳು