ಕಲಬುರಗಿ: ಹೈದರಬಾದ್- ಕರ್ನಾಟಕದ ವಿಮೋಚನಾ ದಿನದ ಅಮೃತಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಲ್ಯಾಣ ಕರ್ನಾಟಕದ ಮುಂದಿನ ಸಮಗ್ರ ಅಭಿವೃದ್ಧಿ ಕುರಿತು ಮಾತನಾಡಿದರು.
ಈ ಕುರಿತು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕದ ಪ್ರದೇಶ ಎಂದರೆ ನನಗೆ ಅಚ್ಚುಮೆಚ್ಚು. ಇದು ನನ್ನ ಹೃದಯಕ್ಕೆ ಹತ್ತಿರವಾದ ಪ್ರದೇಶವಾಗಿದೆ. ನವ ಕಲ್ಯಾಣ ಕರ್ನಾಟಕದಿಂದ ನವ ಕರ್ನಾಟಕ ನಿರ್ಮಾಣ, ನವ ಕರ್ನಾಟಕದಿಂದ ನವಭಾರತ ನಿರ್ಮಾಣ. ಇದು ನಮ್ಮ ಸರ್ಕಾರದ ಸಂಕಲ್ಪವಾಗಿದೆ. ಅಭಿವೃದ್ಧಿ ಎನ್ನುವುದು ನಿರಂತರ ಪ್ರಕ್ರಿಯೆ. ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಹಿಂದಿನ ಬಜೆಟ್ ನಲ್ಲಿ 3000ಕೋಟಿ ರೂ ನೀಡಿದ್ದೇವು. ಮುಂದಿನ ಬಜೆಟ್ ನಲ್ಲಿ ಕಲ್ಯಾಣ ಕರ್ನಾಟಕಕ್ಕೆಂದು 5000ಕೋಟಿ ಮೀಸಲಿರಿಸಲಿದ್ದೇವೆ ಎಂದು ಬೊಮ್ಮಾಯಿ ಅವರು ಹೇಳಿದರು.
ಕಲಬುರಗಿ ಜವಳಿ ಪಾರ್ಕ್ ಸ್ಥಾಪಿಸಿ ಸ್ಥಳೀಯ 25 ಸಾವಿರ ಜನರಿಗೆ ಉದ್ಯೋಗ ದೊರಕಿಸುವ ಮಹತ್ತರ ಯೋಜನೆಗೆ ನಾನೇ ಶೀಘ್ರದಲ್ಲಿಯೇ ಅಡಿಗಲ್ಲು ಹಾಕಲಿದ್ದೇನೆ ಹಾಗೂ ಜಯದೇವ ಆಸ್ಪತ್ರೆಯನ್ನು ಪ್ರಧಾನಿ ನರೇಂದ್ರ ಮೋದಿಯವರ ಅಮೃತ ಹಸ್ತದಿಂದ ಉದ್ಘಾಟಿಸುತ್ತೇವೆ ಎಂದು ಬೊಮ್ಮಾಯಿ ಅವರು ತಿಳಿಸಿದರು.
ವಿಶ್ವಗುರು ಬಸವಣ್ಣನವರ ಅನುಭವ ಮಂಟಪ ಜಗತ್ತಿನ ಮೊದಲ ಸಂಸತ್ತು. ನಿಕಟಪೂರ್ವ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಅನುಭವ ಮಂಟಪಕ್ಕೆ ಗುದ್ದಲಿ ಪೂಜೆಯನ್ನು ನೇರವೇರಿಸಿದ್ದರು. ನಾವು ಶೀಘ್ರದಲ್ಲಿಯೇ ಅನುಭವ ಮಂಟಪವನ್ನು ಪೂರ್ಣಗೊಳಿಸಿ, ಲೋಕಾರ್ಪಣೆಗೊಳಿಸಲಿದ್ದೇವೆ. ಇದು ನಮ್ಮ ಸಂಕಲ್ಪವಾಗಿದೆ ಎಂದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಾಲೆ ಕೊಠಡಿಗಳ ನಿರ್ಮಾಣದ ಕುರಿತು ಮಾತನಾಡಿದ ಅವರು, ಪ್ರಸಕ್ತ ವರ್ಷದಲ್ಲಿ 2100 ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡಲಾಗುವುದು ಹಾಗೂ 2500 ಅಂಗನವಾಡಿ ಕೇಂದ್ರಗಳನ್ನು ತೆರೆಯಲು ಕ್ರಮ ವಹಿಸಲಾಗುವುದು ಎಂದು ಮಾಹಿತಿ ನೀಡಿದರು.
ಮುಂದುವರೆದು ಮಾತನಾಡಿದ ಅವರು, ಹಲವಾರು ಸರ್ಕಾರಗಳು, ಹಲವಾರು ಮುಖ್ಯಮಂತ್ರಿಗಳು, ಹಲವಾರು ನಾಯಕರು ಈ ಪ್ರದೇಶದ ಜನರ ಆಶೀರ್ವಾದದಿಂದ ಆಡಳಿತ ಮಾಡಿದ್ದಾರೆ. ಸದಾ ಜನರ ಮಧ್ಯವಿದ್ದು, ಜನರ ಸಮಸ್ಯೆಗಳನ್ನು ಆಲಿಸಿ, ತ್ವರಿತಗತಿಯಲ್ಲಿ ಸಮಸ್ಯೆಗೆ ಪರಿಹಾರ ಕಲ್ಪಿಸುವುದು ಜನಪರ ಸರ್ಕಾರದ ಮುಖ್ಯ ಲಕ್ಷಣವಾಗಿದೆ. ಸಾಧು, ಸಂತ, ಶರಣರ ನಾಡಾಗಿರುವ ಕಲ್ಯಾಣ ಕರ್ನಾಟಕದಲ್ಲಿ ಜನಿಸಿರುವ ನಾವೆಲ್ಲರೂ ಪುಣ್ಯವಂತರು. ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಯ ಪರ್ವಕ್ಕೆ ಇಂದು ನಾವೆಲ್ಲರೂ ಸೇರಿ ಚಾಲನೆ ನೀಡಿದ್ದೇವೆ ಮತ್ತು ಕಲ್ಯಾಣ ಕರ್ನಾಟಕ ಸಹ ಮುಂದಿನ ದಿನಗಳಲ್ಲಿ ಇತರ ಭಾಗದಂತೆ ಅಭಿವೃದ್ಧಿಶೀಲ ಪ್ರದೇಶವಾಗಲಿದೆ ಎಂದು ಬಸವರಾಜ ಬೊಮ್ಮಾಯಿ ಅವರು ಹೇಳಿದರು.