ಶೃಂಗೇರಿ ಮಠಕ್ಕೆ ಸಂಬಂಧಿಸಿದ ದೆಹಲಿಯ ಶಾರದಾ ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್ಮೆಂಟ್ ನಿರ್ದೇಶಕ ಚೈತನ್ಯಾನಂದ ಸರಸ್ವತಿ ಸ್ವಾಮಿ ವಿದ್ಯಾರ್ಥಿನಿಯರಿಗೆ ನೀಡಿರುವ ಕಿರುಕುಳ ಪ್ರಕರಣದಲ್ಲಿ ಬಗೆದಷ್ಟೂ ಅಕ್ರಮ ಅನಾಚಾರ ಬೆಳಕಿಗೆ ಬರುತ್ತಿದೆ. ಚೈತನ್ಯಾನಂದ ಸರಸ್ವತಿ ಸ್ವಾಮಿ ಯಾನೆ ಪಾರ್ಥಸಾರಥಿ ವಿರುದ್ಧ ದಾಖಲಾಗಿರುವ ಎಫ್ಐಆರ್ ನಲ್ಲಿ ಆಘಾತಕಾರಿ ಅಂಶಗಳು ಹೊರಬಿದ್ದಿವೆ.
ಎಫ್ ಐಆರ್ ಪ್ರಕಾರ, ಭದ್ರತೆಯ ನೆಪದಲ್ಲಿ ಬಾಲಕಿಯರ ಹಾಸ್ಟೆಲ್‌ನ ಖಾಸಗಿ ಕೋಣೆಯ ಒಳಗೂ ರಹಸ್ಯ ಕಣ್ಗಾವಲು ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ. ತನಿಖೆಯ ನಂತರ ಹೆಚ್ಚಿನ ಸಿಸಿಟಿವಿ ದೃಶ್ಯಾವಳಿಗಳನ್ನು ಉದ್ದೇಶಪೂರ್ವಕವಾಗಿ ಅಳಿಸಿಹಾಕಲಾಗಿದೆ ಎಂದು ತಿಳಿದು ಬಂದಿದೆ.
ವಿದ್ಯಾರ್ಥಿಗಳ ಪೋಷಕರನ್ನು ಸಹ ಮಧ್ಯಪ್ರವೇಶಿಸದಂತೆ ತಡೆಯಲಾಯಿತು. ಸ್ವಾಮಿ ಚೈತನ್ಯಾನಂದ ಸರಸ್ವತಿ ಮತ್ತು ಅವರ ಸಹಚರರು ವಿದ್ಯಾರ್ಥಿನಿಯರನ್ನು ಲೈಂಗಿಕ ಮತ್ತು ಮಾನಸಿಕ ಕಿರುಕುಳಕ್ಕೆ ಒಳಪಡಿಸಿದ್ದರು. ವಾಟ್ಸಾಪ್ ಮತ್ತು ಎಸ್‌ಎಂಎಸ್ ಮೂಲಕ ಅಶ್ಲೀಲ ಮತ್ತು ಆಕ್ಷೇಪಾರ್ಹ ಸಂದೇಶಗಳನ್ನು ಕಳುಹಿಸಲಾಗಿತ್ತು. ಅವರು ಈ ಕ್ರಮಗಳನ್ನು ವಿರೋಧಿಸಿದರೆ, ವಿದ್ಯಾರ್ಥಿಗಳ ಪದವಿಗಳನ್ನು ತಡೆಹಿಡಿಯುವ ಮತ್ತು ದಾಖಲೆಗಳನ್ನು ತಡೆಹಿಡಿಯುವ ಬೆದರಿಕೆ ಹಾಕಲಾಗಿತ್ತು.
ಈ ಎಲ್ಲಾ ಬೆಳವಣಿಗೆಗಳ ನಂತರ ಶೃಂಗೇರಿ ಮಠದ ಆಡಳಿತ ತಕ್ಷಣ ಸ್ವಾಮೀಜಿಯನ್ನು ವಜಾ ಮಾಡಿದೆ. ಕೇಸ್ ದಾಖಲಾಗುತ್ತಿದ್ದಂತೆಯೇ ಚೈತನ್ಯಾನಂದ ಸರಸ್ವತಿ ಸ್ವಾಮೀಜಿ ಪರಾರಿ ಆಗಿದ್ದಾರೆ. ಪೊಲೀಸರು ತಲಾಶ್ ನಡೆಸಿದ್ದಾರೆ. ಇನ್ನು ಶಾರದಾ ಇನ್‌ಸ್ಟಿಟ್ಯೂಟ್‌ನ ನೆಲಮಾಳಿಗೆಯಲ್ಲಿ ವೋಲ್ವೋ ಕಾರು ಪತ್ತೆಯಾಗಿದ್ದು ನಕಲಿ ನಂಬರ್ ಪ್ಲೇಟ್ ಹೊಂದಿದೆ. ಈ ಬಗ್ಗೆ ಪ್ರತ್ಯೇಕ ದೂರು ದಾಖಲಾಗಿದೆ. ಆರೋಪಿ ವಿದೇಶಕ್ಕೆ ಪಲಾಯನ ಮಾಡುವುದನ್ನು ತಡೆಯಲು ಲುಕ್ ಔಟ್ ನೋಟಿಸ್ ಹೊರಡಿಸಲಾಗಿದೆ.