Home ದೇಶ ಕೊನೆಗೂ ಮನಸು ಮಾಡಿದ ಕೇಂದ್ರ: 2025ಕ್ಕೆ ಜನಗಣತಿ ಆರಂಭ, 2028ಕ್ಕೆ ಕ್ಷೇತ್ರ ಮರುವಿಂಗಡಣೆ

ಕೊನೆಗೂ ಮನಸು ಮಾಡಿದ ಕೇಂದ್ರ: 2025ಕ್ಕೆ ಜನಗಣತಿ ಆರಂಭ, 2028ಕ್ಕೆ ಕ್ಷೇತ್ರ ಮರುವಿಂಗಡಣೆ

0

ಹೊಸದಿಲ್ಲಿ, ಅಕ್ಟೋಬರ್ 28: ದೇಶದಲ್ಲಿ ಜನಗಣತಿ ನಡೆಸಲು ಕೊನೆಗೂ ಕ್ರಮಕೈಗೊಳ್ಳಲಾಗುತ್ತಿದೆ.

ಮುಂದಿನ ವರ್ಷದ ಆರಂಭದಲ್ಲಿ ಗಣತಿ ಸಂಗ್ರಹ ಆರಂಭವಾಗಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಜನಗಣತಿಯ ಜೊತೆಗೆ, ರಾಷ್ಟ್ರೀಯ ಜನಸಂಖ್ಯಾ ನೋಂದಣಿ (NPR) ಪಟ್ಟಿಯನ್ನು ಸಹ ನವೀಕರಿಸಲಾಗುತ್ತದೆ ಮತ್ತು ಈ ಡೇಟಾವನ್ನು 2026ರಲ್ಲಿ ಪ್ರಕಟಿಸಲಾಗುತ್ತದೆ. ಆದರೆ, ಈ ಬಗ್ಗೆ ಅಧಿಕೃತ ಘೋಷಣೆ ಇನ್ನಷ್ಟೇ ಹೊರಬೀಳಬೇಕಿದೆ. ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯೋಗದ ಕಚೇರಿಯು ಜನಗಣತಿ ಸಂಗ್ರಹದ ಭಾಗವಾಗಿ ದೇಶದ ಜನರನ್ನು ಕೇಳಲು 31 ಪ್ರಶ್ನೆಗಳನ್ನು ಸಿದ್ಧಪಡಿಸಿದೆ ಎಂದು ವರದಿಯಾಗಿದೆ. ಮೊದಲೇ ಕೇಳಿದಂತೆ, ಕುಟುಂಬದ ಮುಖ್ಯಸ್ಥರು ಅಥವಾ ಸದಸ್ಯರು ಎಸ್‌ಸಿ ಅಥವಾ ಎಸ್‌ಟಿ ವರ್ಗಕ್ಕೆ ಸೇರಿದ್ದಾರೆಯೇ? ಎಂಬ ಪ್ರಶ್ನೆಯೂ ಇರಲಿದೆ. ಆದರೆ, ದೇಶದ ಎಲ್ಲ ಜಾತಿಗಳ ಜನಸಂಖ್ಯೆಯನ್ನು ಲೆಕ್ಕ ಹಾಕಲು ಜನಗಣತಿ ಜತೆಗೆ ಜಾತಿ ಗಣತಿ ನಡೆಸುವ ಬಗ್ಗೆ ಕೇಂದ್ರ ಸರ್ಕಾರ ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಲಾಗಿದೆ.

ಜನಗಣತಿ ಪೂರ್ಣಗೊಂಡ ನಂತರ ಲೋಕಸಭೆ ಕ್ಷೇತ್ರಗಳ ಮರುವಿಂಗಡಣೆ ನಡೆಯಲಿದ್ದು, 2028ರ ವೇಳೆಗೆ ಪ್ರಕ್ರಿಯೆ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಆದರೆ, ಹೊಸ ಜನಗಣತಿ ಆಧಾರದ ಮೇಲೆ ರಾಜ್ಯಗಳ ಲೋಕಸಭಾ ಸ್ಥಾನಗಳ ಸಂಖ್ಯೆ ನಿರ್ಧಾರವಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ದೇಶದ ಹಿತದೃಷ್ಟಿಯಿಂದ ಹೀಗೆ ಮಾಡಿದರೆ ಜನಸಂಖ್ಯಾ ನಿಯಂತ್ರಣ ವಿಧಾನಗಳನ್ನು ಸಮರ್ಥವಾಗಿ ಅನುಸರಿಸುತ್ತಿರುವ ದಕ್ಷಿಣದ ರಾಜ್ಯಗಳಿಗೆ ಘೋರ ಅನ್ಯಾಯವಾಗಲಿದ್ದು, ಇಲ್ಲಿ ಸೀಟುಗಳು ಕಡಿಮೆಯಾಗಲಿವೆ ಎಂದು ಇಲ್ಲಿನ ಮುಖಂಡರು ಈಗಾಗಲೇ ದೂರುತ್ತಿದ್ದಾರೆ. ಉತ್ತರದ ರಾಜ್ಯಗಳಲ್ಲಿ ಜನಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. 2026ರಲ್ಲೇ ಕ್ಷೇತ್ರಗಳ ಮರುವಿಂಗಡಣೆ ನಡೆಯಬೇಕಿದ್ದರೂ, 2029ರ ಲೋಕಸಭೆ ಚುನಾವಣೆಗೂ ಮುನ್ನ ಪುನರ್ ವಿಂಗಡಣೆ ಮಾಡಲು ಕೇಂದ್ರ ನಿರ್ಧರಿಸಿರುವುದು ಗಮನಾರ್ಹ.

ಜಾತಿ ಗಣತಿ ಕುರಿತು ಸ್ಪಷ್ಟನೆ ನೀಡಿ: ಕಾಂಗ್ರೆಸ್

ಜನಗಣತಿ ಭಾಗವಾಗಿ ಎಲ್ಲ ಜಾತಿ ಗಣತಿ ನಡೆಯುತ್ತದೆಯೇ ಎಂಬುದನ್ನು ಸ್ಪಷ್ಟಪಡಿಸಲು ಸರ್ವಪಕ್ಷಗಳ ಸಮಾವೇಶ ನಡೆಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ. ‘ಎರಡು ಪ್ರಮುಖ ವಿಚಾರಗಳಲ್ಲಿ ಸ್ಪಷ್ಟತೆ ಇಲ್ಲ. ನೀವು ಎಸ್‌ಸಿ ಮತ್ತು ಎಸ್‌ಟಿ ಜನಸಂಖ್ಯೆಯ ಜೊತೆಗೆ ಎಲ್ಲಾ ಜಾತಿಗಳ ಸಂಖ್ಯೆಯನ್ನು ಸಹ ಎಣಿಸುತ್ತೀರಾ? ಜನಗಣತಿ ಆಧಾರದ ಮೇಲೆ ರಾಜ್ಯಗಳ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ನಿರ್ಧರಿಸಲಾಗುತ್ತದೆಯೇ?’ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.

ಬದಲಾಗುತ್ತಿರುವ ಜನಗಣತಿ ಚಕ್ರ

ದೇಶದಲ್ಲಿ ಮೊದಲ ಜನಗಣತಿಯನ್ನು 1872 ರಲ್ಲಿ ನಡೆಸಲಾಯಿತು. ಸ್ವಾತಂತ್ರ್ಯದ ನಂತರ 1951ರಿಂದ, ಪ್ರತಿ ಹತ್ತು ವರ್ಷಗಳಿಗೊಮ್ಮೆ ಜನಗಣತಿ ನಡೆಸಲಾಯಿತು. ಅಂತಿಮವಾಗಿ 2011ರಲ್ಲಿ ನಡೆಯಿತು. 2021ರಲ್ಲಿ ಜನಗಣತಿ ನಡೆಯಬೇಕಿದ್ದರೂ ಕೋವಿಡ್‌ನಿಂದಾಗಿ ಮುಂದೂಡಲಾಗಿತ್ತು. ಅಂತಿಮವಾಗಿ ಮುಂದಿನ ವರ್ಷ ಪ್ರಕ್ರಿಯೆ ಆರಂಭವಾಗಲಿದೆ. ಆದರೆ, ಇನ್ನು ಮುಂದೆ ಜನಗಣತಿ ಚಕ್ರವೂ ಬದಲಾಗಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಮುಂದಿನ ಗಣತಿಯನ್ನು 2035ರಲ್ಲಿ, ನಂತರ 2045 ರಲ್ಲಿ ನಡೆಸಲಾಗುವುದು ಮತ್ತು ಭವಿಷ್ಯದಲ್ಲಿ ಪ್ರತಿ ಹತ್ತು ವರ್ಷಗಳಿಗೊಮ್ಮೆ ಇದನ್ನು ಮಾಡಲಾಗುತ್ತದೆ.

You cannot copy content of this page

Exit mobile version