ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ ಸಂಸತ್ತಿನಲ್ಲಿ ಜಾಗತಿಕ ಅನಿಶ್ಚಿತತೆ ಹಿನ್ನೆಲೆಯಲ್ಲಿ ಆರ್ಥಿಕ ಶಿಸ್ತು ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವ ಅಗತ್ಯವಿದೆ ಎಂದು ಸೂಚಿಸಿದ್ದರೂ, ಅದನ್ನು ಕೆಲವರು ಲಾಕ್‌ಡೌನ್ ಸೂಚನೆ ಎಂದು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎನ್ನಲಾಗಿದೆ. ಇದೇ ಹೇಳಿಕೆ ದೇಶದಾದ್ಯಂತ ಲಾಕ್‌ಡೌನ್ ಕುರಿತ ವದಂತಿಗಳಿಗೆ ಕಾರಣವಾಗಿದೆ.
ಸಧ್ಯ ದೇಶದಲ್ಲಿ ಲಾಕ್‌ಡೌನ್ ಜಾರಿಯಾಗಲಿದೆ ಎಂಬ ವದಂತಿಗಳಿಗೆ ಕೇಂದ್ರ ಸರ್ಕಾರ ತೆರೆ ಎಳೆದಿದ್ದು, ಸದ್ಯಕ್ಕೆ ಯಾವುದೇ ರೀತಿಯ ಲಾಕ್‌ಡೌನ್ ಹೇರುವ ಉದ್ದೇಶ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದೆ.
ಪಶ್ಚಿಮ ಏಷ್ಯಾ ಬಿಕ್ಕಟ್ಟು ಸೇರಿದಂತೆ ರಾಷ್ಟ್ರದ ಭದ್ರತಾ ವಿಷಯಗಳ ಕುರಿತು ಚರ್ಚಿಸಲು ಕರೆದಿದ್ದ ಸರ್ವಪಕ್ಷ ಸಭೆಯಲ್ಲಿ, ಸರ್ಕಾರದ ನಿಲುವು ಸ್ಪಷ್ಟಗೊಂಡಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಶ್ಚಿಮ ಏಷ್ಯಾದ ಯುದ್ಧ ಪರಿಸ್ಥಿತಿ, ಕಚ್ಚಾ ತೈಲದ ಬೆಲೆ ಏರಿಕೆ ಹಾಗೂ ಭಾರತದ ಇಂಧನ ಭದ್ರತೆ ಕುರಿತಂತೆ ಚರ್ಚೆ ನಡೆದಿದೆ.
ಇತ್ತೀಚಿನ ಜಾಗತಿಕ ಬೆಳವಣಿಗೆಗಳು ಹಾಗೂ ಆರ್ಥಿಕ ಏರಿಳಿತಗಳ ಹಿನ್ನೆಲೆ ಮತ್ತೆ ಕಟ್ಟುನಿಟ್ಟಿನ ನಿಯಮಗಳು ಜಾರಿಯಾಗಬಹುದು ಎಂಬ ಆತಂಕ ಸಾರ್ವಜನಿಕರಲ್ಲಿ ಮೂಡಿತ್ತು. ಆದರೆ, ಇಂತಹ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಸಭೆಯಲ್ಲಿ ತಿಳಿಸಲಾಗಿದೆ.
ಇದೇ ವೇಳೆ, ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಸುಳ್ಳು ಸುದ್ದಿಗಳು ಮತ್ತು ಹಳೆಯ ವಿಡಿಯೋಗಳನ್ನು ನಂಬಬಾರದು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸಾರ್ವಜನಿಕರಿಗೆ ಮನವಿ ಮಾಡಿದೆ. ಸರ್ಕಾರದ ಅಧಿಕೃತ ಪ್ರಕಟಣೆಗಳ ಹೊರತಾಗಿ ಬೇರೆ ಯಾವುದೇ ಮಾಹಿತಿಯನ್ನು ನಂಬದಂತೆ ಎಚ್ಚರಿಕೆ ನೀಡಲಾಗಿದೆ.
