Home ಜನ-ಗಣ-ಮನ ಮುಸ್ಲಿಂ ಧರ್ಮಗುರುಗಳ ವಿರೋಧದ ನಡುವೆಯೇ ವಕ್ಫ್ ಕಾನೂನು ತಿದ್ದುಪಡಿಗೆ ಮುಂದಾದ ಕೇಂದ್ರ

ಮುಸ್ಲಿಂ ಧರ್ಮಗುರುಗಳ ವಿರೋಧದ ನಡುವೆಯೇ ವಕ್ಫ್ ಕಾನೂನು ತಿದ್ದುಪಡಿಗೆ ಮುಂದಾದ ಕೇಂದ್ರ

0

ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ವಕ್ಫ್ ಮಂಡಳಿಯ ಅಧಿಕಾರವನ್ನು ನಿರ್ಬಂಧಿಸಲು ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಸಜ್ಜಾಗಿದೆ ಎಂದು ವರದಿಯಾಗಿದೆ. ಶುಕ್ರವಾರ ಕೇಂದ್ರ ಸಚಿವ ಸಂಪುಟವು ಈ ಕಾಯ್ದೆಗೆ ಒಟ್ಟು 40 ತಿದ್ದುಪಡಿಗಳನ್ನು ಅಂಗೀಕರಿಸಿದೆ ಎಂದು ತಿಳಿದುಬಂದಿದೆ.

ಮಹಿಳಾ ಪ್ರತಿನಿಧೀಕರಣದ ಉದ್ದೇಶದಿಂದ ಈ ಬದಲಾವಣೆ ತರಲಾಗಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟೀಕರಣ ಕೊಟ್ಟಿದೆ. ಮುಸ್ಲಿಂ ಮಹಿಳೆಯರು ಮತ್ತು ಮಕ್ಕಳು ಹೆಚ್ಚು ಬಳಲುತ್ತಿದ್ದಾರೆ. ಮಹಿಳೆ ವಿಚ್ಛೇದನ ಪಡೆದರೆ, ಆಕೆ ಮತ್ತು ಆಕೆಯ ಮಕ್ಕಳು ಯಾವುದೇ ಹಕ್ಕುಗಳನ್ನು ಪಡೆಯುವುದಿಲ್ಲ. ಲಿಂಗ ನ್ಯಾಯಕ್ಕೆ ಸರ್ಕಾರ ಬದ್ಧವಾಗಿದೆ. ಪ್ರತಿ ರಾಜ್ಯ ಮಂಡಳಿಯಲ್ಲಿ ಇಬ್ಬರು ಮಹಿಳೆಯರು ಮತ್ತು ಕೇಂದ್ರೀಯ ಮಂಡಳಿಯಲ್ಲಿ ಇಬ್ಬರು ಮಹಿಳೆಯರು ಇರುತ್ತಾರೆ. ಹಾಗೂ, ಈ ತಿದ್ದುಪಡಿಗಳು ಪಾರದರ್ಶಕತೆಯನ್ನು ತರುವ ಗುರಿಯನ್ನು ಹೊಂದಿವೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

ಪ್ರಸ್ತುತ ಕಾಯ್ದೆ ಪ್ರಕಾರ, ವಕ್ಫ್ ಆಸ್ತಿಯನ್ನು ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸಲು ಸಾಧ್ಯವಿಲ್ಲ. ಸೌದಿ ಅರೇಬಿಯಾ ಅಥವಾ ಒಮಾನ್‌ನಂತಹ ಮುಸ್ಲಿಂ ರಾಷ್ಟ್ರಗಳು ಸಹ ಅಂತಹ ಕಾನೂನು ಹೊಂದಿಲ್ಲ ಎಂದು ಮೂಲಗಳು ಪ್ರತಿಪಾದಿಸುತ್ತವೆ.

ವಕ್ಫ್ ಮಂಡಳಿಗಳ ‘ಅನಿಯಂತ್ರಿತ’ ಅಧಿಕಾರವನ್ನು ನಿಗ್ರಹಿಸುವ ಉದ್ದೇಶಿತ ಮಸೂದೆಗೆ ಮುಸ್ಲಿಂ ಧರ್ಮಗುರುಗಳು ಮತ್ತು ಅಸಾದುದ್ದೀನ್ ಓವೈಸಿಯಂತಹ ಕೆಲವರು ರಾಜಕೀಯ ನಾಯಕರು ಟೀಕೆ ಮಾಡಿದ್ದಾರೆ. ಬಿಜೆಪಿಯು ಮೊದಲಿನಿಂದಲೂ ವಕ್ಫ್ ಬೋರ್ಡ್‌ ಮತ್ತು ವಕ್ಫ್ ಆಸ್ತಿಗಳನ್ನು ವಿರೋಧಿಸುತ್ತಿದೆ ಮತ್ತು ತನ್ನ ಹಿಂದುತ್ವ ಅಜೆಂಡಾದ ಭಾಗವಾಗಿ ಅವುಗಳನ್ನು ತೊಡೆದುಹಾಕಲು ಪ್ರಯತ್ನಿಸುತ್ತಿದೆ ಎಂದು ಓವೈಸಿ ಹೇಳಿದ್ದಾರೆ.

You cannot copy content of this page

Exit mobile version