ದುಬೈ : ಎಂಟು ವರ್ಷದ ನಂತರ ಮತ್ತೆ ಪುನಾರಂಭವಾಗಿರುವ ಚಾಂಪಿಯನ್ ಟ್ರೋಫಿಯಲ್ಲಿ ಬಲಿಷ್ಟ ಭಾರತ ತಂಡ ಇಂದು ಬಾಂಗ್ಲಾ ವಿರುದ್ಧ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದ್ದು, ಬಾಂಗ್ಲಾ ಹುಲಿಗಳನ್ನು ಕಟ್ಟಿಹಾಕಲು ಭರ್ಜರಿ ತಾಲೀಮು ನಡೆಸಿದ್ದಾರೆ.ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ಫೇವರೆಟ್ ತಂಡಗಳ ಪೈಕಿ ಒಂದಾಗಿದ್ದರು ಕೂಡ ಭಾರತ ತನ್ನದೇ ಆದ ಸಮಸ್ಯೆಗಳನ್ನು ಎದುರಿಸುತ್ತಿದೆ. ಈಗಾಗಲೇ ಬೆನ್ನುನೋವಿನ ಬಳಲುತ್ತಿರುವ ವೇಗಿ ಜಸ್ಪ್ರಿತ್ ಬುಮ್ರಾ ಟೂರ್ನಿಯಿಂದ ಹೊರಬಿದ್ದಿದ್ದು, ತಂಡಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ.
ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ರೋಹಿತ್ ಶತಕ ಬಾರಿಸಿ ತಮ್ಮ ಲಯಕ್ಕೆ ಮರಳಿದ್ದು, ಗಿಲ್ ಎರಡು ಅರ್ಧಶತಕ ಮತ್ತು ಒಂದು ಶತಕ ಹೊಡೆದಿದ್ದರು. ಇನ್ನು ವಿರಾಟ್ ಕೊಹ್ಲಿ ಕಳೆದ ಕೆಲ ಸಮಯದಿಂದ ರನ್ ಬರ ಎದುರಿಸುತ್ತಿದ್ದಾರೆ.ಇನ್ನು ಬಾಂಗ್ಲಾ ತಂಡಗಳು ಕೂಡ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ತಂಡದ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಅವರಿಲ್ಲದೇ ಕಣಕ್ಕಿಳಿಯಬೇಕಿದೆ. ಅನುಭವಿಗಳಾದ ಸೌಮ್ಯ ಸರ್ಕಾರ್, ಮುಷ್ಟಿಕುರ್ ರಹೀಮ್, ವೇಗಿ ಮುಸ್ತಫಿಜುರ್ ರೆಹಮಾನ್ ಅವರ ಮೇಲೆ ತಂಡವು ಹೆಚ್ಚು ಅವಲಂಬಿತವಾಗಿದೆ.
ಭಾರತ – ಬಾಂಗ್ಲಾದೇಶ ಪಂದ್ಯದ ಒಂದು ದಿನ ಮೊದಲು ದುಬೈನಲ್ಲಿ ಸ್ವಲ್ಪ ಮಳೆಯಾಯಿತು. ಆದ್ದರಿಂದ, ದುಬೈನಲ್ಲಿ ಸುರಿಯುತ್ತಿರುವ ಮಳೆಯು ಬಹುನಿರೀಕ್ಷಿತ ಪಂದ್ಯಕ್ಕೆ ಅಡ್ಡಿಯಾಗಬಹುದೆಂಬ ಆತಂಕ ಅಭಿಮಾನಿಗಳಲ್ಲಿ ಮೂಡಿದೆ.