ಮುಂಬೈ : ಟೆಸ್ಟ್ ಕ್ರಿಕೆಟ್ ದಿಗ್ಗಜರಲ್ಲಿ ಒಬ್ಬರಾದ ಚೇತೇಶ್ವರ ಪೂಜಾರ (Chetshwar pujara) ಇದೀಗ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳುತ್ತಿದ್ದಾರೆ. ಭಾನುವಾರ ಅವರು ತಮ್ಮ ನಿವೃತ್ತಿಯನ್ನು ಘೋಷಿಸಿದ್ದಾರೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಕಿರಿಯ ಆಟಗಾರರನ್ನು ಟೆಸ್ಟ್ ಕ್ರಿಕೆಟ್‌ಗೆ ಆಯ್ಕೆ ಮಾಡುತ್ತಿರುವ ಹಿನ್ನೆಲೆ ದೀರ್ಘಕಾಲದಿಂದ ಟೆಸ್ಟ್‌ನಲ್ಲಿ ಕಾಣಿಸಿಕೊಳ್ಳದ ಪೂಜಾರ ಅವರು ಭಾವನಾತ್ಮಕ ಪೋಸ್ಟ್ ಮೂಲಕ ತಮ್ಮ ನಿವೃತ್ತಿಯನ್ನು ಘೋಷಿಸಿಕೊಂಡಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ಬರೆದಿರುವ ಅವರು, ಭಾರತೀಯ ಜೆರ್ಸಿ ಧರಿಸುವುದು, ರಾಷ್ಟ್ರಗೀತೆ ಹಾಡುವುದು ಮತ್ತು ನಾನು ಪ್ರತಿ ಬಾರಿ ಮೈದಾನಕ್ಕೆ ಕಾಲಿಟ್ಟಾಗಲೂ ನನ್ನ ಕೈಲಾದಷ್ಟು ಪ್ರಯತ್ನಿಸುವುದು ಇವೆಲ್ಲವುದರ ನಿಜವಾದ ಅರ್ಥವನ್ನು ಪದಗಳಲ್ಲಿ ಹೇಳುವುದು ಅಸಾಧ್ಯ. ಆದರೆ ಅಪಾರ ಕೃತಜ್ಞತೆಯಿಂದ ನಾನು ಎಲ್ಲಾ ರೀತಿಯ ಭಾರತೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ. ಎಲ್ಲರ ಪ್ರೀತಿ ಮತ್ತು ಬೆಂಬಲಕ್ಕೆ ನಾನು ಧನ್ಯವಾದ ಹೇಳುತ್ತೇನೆ ಎಂದು ಬರೆದಿದ್ದಾರೆ. ನನ್ನ ಕ್ರಿಕೆಟ್ ವೃತ್ತಿಜೀವನದುದ್ದಕ್ಕೂ ಅವಕಾಶ ಮತ್ತು ಬೆಂಬಲ ನೀಡಿದ್ದಕ್ಕಾಗಿ ಬಿಸಿಸಿಐ ಮತ್ತು ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್‌ಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ವರ್ಷಗಳಲ್ಲಿ ನಾನು ಪ್ರತಿನಿಧಿಸಲು ಸಾಧ್ಯವಾದ ಎಲ್ಲಾ ತಂಡಗಳು, ಫ್ರಾಂಚೈಸಿಗಳು ಮತ್ತು ಕೌಂಟಿಗಳಿಗೂ ಧನ್ಯವಾದಗಳು. ನನ್ನ ಮಾರ್ಗದರ್ಶಕರು, ತರಬೇತುದಾರರು ಮತ್ತು ಆಧ್ಯಾತ್ಮಿಕ ಗುರುಗಳ ಅಮೂಲ್ಯ ಮಾರ್ಗದರ್ಶನವಿಲ್ಲದೆ ನಾನು ಇಷ್ಟು ದೂರ ತಲುಪಲು ಸಾಧ್ಯವಾಗುತ್ತಿರಲಿಲ್ಲ. ಅವರಿಗೆ ನಾನು ಯಾವಾಗಲೂ ಋಣಿಯಾಗಿರುತ್ತೇನೆ.
ನನ್ನ ಎಲ್ಲಾ ತಂಡದ ಸದಸ್ಯರು, ಸಹಾಯಕ ಸಿಬ್ಬಂದಿ, ನೆಟ್ ಬೌಲರ್‌ಗಳು, ವಿಶ್ಲೇಷಕರು, ಲಾಜಿಸ್ಟಿಕ್ಸ್ ತಂಡ, ಅಂಪೈರ್‌ಗಳು, ಮೈದಾನದ ಸಿಬ್ಬಂದಿ, ಸ್ಕೋರರ್‌ಗಳು, ಮಾಧ್ಯಮ ಸಿಬ್ಬಂದಿ ಮತ್ತು ನಾವು ಪ್ರೀತಿಸುವ ಈ ಆಟವನ್ನು ಸ್ಪರ್ಧಿಸಲು ಮತ್ತು ಆಡಲು ಅನುವು ಮಾಡಿಕೊಡಲು ತೆರೆಮರೆಯಲ್ಲಿ ಅವಿಶ್ರಾಂತವಾಗಿ ಶ್ರಮಿಸುವ ಎಲ್ಲರಿಗೂ ಧನ್ಯವಾದಗಳು ಎಂದು ಅವರು ತಿಳಿಸಿದ್ದಾರೆ.ರಾಜ್‌ಕೋಟ್‌ನಲ್ಲಿ ಜನಿಸಿದ 37 ವರ್ಷದ ಪೂಜಾರ 2010 ರಲ್ಲಿ ಟೀಂ ಇಂಡಿಯಾಕ್ಕೆ ಪದಾರ್ಪಣೆ ಮಾಡಿದರು. ಪೂಜಾರ ಟೀಂ ಇಂಡಿಯಾದಲ್ಲಿ ಅತಿಹೆಚ್ಚು ರನ್ ಗಳಿಸಿದ 8ನೇ ಟೆಸ್ಟ್ ಬ್ಯಾಟರ್ ಎನಿಸಿಕೊಂಡಿದ್ದರು. ಇದುವರೆಗೆ 103 ಟೆಸ್ಟ್, 5 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅವರು ಟೀಂ ಇಂಡಿಯಾ ಪರ 103 ಟೆಸ್ಟ್ ಪಂದ್ಯಗಳಲ್ಲಿ 43.60 ಸರಾಸರಿಯಲ್ಲಿ 7,195 ರನ್ ಗಳಿಸಿದ್ದಾರೆ. ಇದರಲ್ಲಿ 19 ಶತಕಗಳು ಮತ್ತು 35 ಅರ್ಧಶತಕಗಳು ಸೇರಿವೆ. ತವರಿನಲ್ಲಿ ನಡೆದ ಒಟ್ಟು ಟೆಸ್ಟ್‌ನಲ್ಲಿ 3,839 ರನ್ ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ವಿಶ್ವಾಸಾರ್ಹ ಬ್ಯಾಟರ್ ಆಗಿದ್ದ ಪೂಜಾರ, ಸ್ವದೇಶಿ ಮತ್ತು ವಿದೇಶಗಳಲ್ಲಿ ನಡೆದ ಟೆಸ್ಟ್ ಪಂದ್ಯಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.