ಬೇಲೂರು : ಹಾಸನ ಜಿಲ್ಲೆಯ ಸಂಸದ ಶ್ರೇಯಸ್ ಎಂ. ಪಟೇಲ್ ಅವರು ಇಂದು ಬೇಲೂರು ತಾಲೂಕಿನಲ್ಲಿ ಕಾಡಾನೆಗಳಿರುವ ಸ್ಥಳಕ್ಕೆ ಭೇಟಿ ನೀಡಿ, ಕಾಡಾನೆ-ಮಾನವ ಸಂಘರ್ಷದ ಸಮಸ್ಯೆಯನ್ನು ಪರಿಶೀಲಿಸಿದರು. ಅರಣ್ಯ ಇಲಾಖೆಯ ಅಧಿಕಾರಿಗಳು, ಆನೆ ಕಾರ್ಯಪಡೆ, ಕ್ಷಿಪ್ರ ಕಾರ್ಯಪಡೆ, ಕಾಡಾನೆ ಹಿಮ್ಮೆಟ್ಟಿಸುವ ಸಿಬ್ಬಂದಿ, ಕಾಫಿ ಬೆಳೆಗಾರರು ಹಾಗೂ ಎನ್‌ಸಿಎಫ್ ತಂಡದೊಂದಿಗೆ ಸಮಾಲೋಚನೆ ನಡೆಸಿದ ಅವರು, ಕಾಡಾನೆಗಳ ಪತ್ತೆ ಮತ್ತು ಸಾರ್ವಜನಿಕರಿಗೆ ಮಾಹಿತಿ ಒದಗಿಸುವ ಕುರಿತು ವಿವರವಾದ ಚರ್ಚೆ ನಡೆಸಿದರು.
ಸ್ಥಳ ಪರಿಶೀಲನೆ : ಸಂಸದ ಶ್ರೇಯಸ್ ಪಟೇಲ್ ಅವರು ಕ್ಷೇತ್ರ ಸಿಬ್ಬಂದಿಗಳು ಮತ್ತು ಕಾಡಾನೆ ಹಿಮ್ಮೆಟ್ಟಿಸುವ ತಂಡದವರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಮಾಹಿತಿ ಪಡೆದರು. ಹಾಸನ ಜಿಲ್ಲೆಯಲ್ಲಿ ಕಾಡಾನೆ ಸಮಸ್ಯೆಯ ನಿರ್ವಹಣೆ ಇತರ ಜಿಲ್ಲೆಗಳಿಗಿಂತ ಭಿನ್ನವಾಗಿರುವ ಕುರಿತು ಚರ್ಚಿಸಿದ ಅವರು, ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಲಹೆಗಳನ್ನು ನೀಡಿದರು. ಇತ್ತೀಚೆಗೆ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಮಂತ್ರಿಗಳು ಉದ್ಘಾಟಿಸಿದ ಥರ್ಮಲ್ ಡ್ರೋನ್‌ನ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿದ ಸಂಸದರು, ಕ್ಷೇತ್ರ ಸಿಬ್ಬಂದಿಗಳ ಕಾರ್ಯವೈಖರಿಯನ್ನು ಪ್ರಶಂಸಿಸಿದರು.