ಹಾಸನ: ಕರ್ನಾಟಕ ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಸಲು ಉದ್ದೇಶಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಜಾತಿಗಣತಿಯಲ್ಲಿ ಬೌದ್ಧ ಎಂದು ಬರೆಸುವಂತೆ ಹಿರಿಯ ಸಂಸದ ಮುಖಂಡ ಹೆಚ್.ಕೆ.ಸಂದೇಶ್ ಮನವಿ ಮಾಡಿದರು. ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಇದೇ ತಿಂಗಳ 22ರಿಂದ ಅ.7 ರ ವರೆಗೆ ಜಾತಿಗಣತಿ ಸಮೀಕ್ಷೆ ನಡೆಸಲು ಉದ್ದೇಶಿಸಿದೆ. ಪರಿಶಿಷ್ಟ ಜಾತಿಯಲ್ಲೇ ಮುಂದುವರಿಯಲು ಇಚ್ಚಿಸುವವರು ಕರ್ನಾಟಕ ಜಾತಿಗಣತಿ ಧರ್ಮದ ಕಲಂ 8 ರ ಕ್ರಮಸಂಖ್ಯೆ 6 ರಲ್ಲಿರುವ ಬೌದ್ಧ ಅನ್ನುವ ಅವಕಾಶವನ್ನು ಆಯ್ಕೆ ಮಾಡಿಕೊಳ್ಳಬೇಕು.ಕಲಂ 9 ರಲ್ಲಿರುವ ಪರಿಶಿಷ್ಟ ಜಾತಿ ಅವಕಾಶ ಆಯ್ಕೆ ಮಾಡಿ, ನಂತರದ ಕಲಂ10 ರಲ್ಲಿರುವ ಉಪಜಾತಿ ಕಲಂನಲ್ಲಿ ತಮ್ಮ ಮೂಲಜಾತಿ(ಪರಿಶಿಷ್ಟ ಜಾತಿಯ 101 ಕಲಂನಲ್ಲಿ ಬರುವ ಮೂಲಜಾತಿ/ತಾವು ಪಡೆದಿರುವ ಜಾತಿ ಪ್ರಮಾಣ ಪತ್ರದಲ್ಲಿ ದಾಖಲಾಗಿರುವ ಜಾತಿ)ಯನ್ನು ನಮೂದು ಮಾಡಬೇಕು ಎಂದು ಸಲಹೆ ನೀಡಿದರುಈ ಮೂಲಕ ಸಂವಿಧಾನದತ್ತ ಮೀಸಲಾತಿ ಹಕ್ಕಿನೊಡನೆ ತಮ್ಮ ಮೂಲ ಧರ್ಮವಾದ ಬೌದ್ಧ ಧಮ್ಮಕ್ಕೆ ಮರಳುವ ಮೂಲಕ ಬೋಧಿಸತ್ತ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಮ್ಮ ಮೇಲೆ ಇಟ್ಟಿರುವ ನಂಬಿಕೆ ಉಳಿಸಿಕೊಳ್ಳುವುದರ ಜೊತೆಗೆ ಅವರಿಗೆ ಗೌರವ ಸಲ್ಲಿಸುವಂತೆ ಮನವಿ ಮಾಡಿದರು.ಪರಿಪೂರ್ಣ ಬೌದ್ಧರೆಂದು ಘೋಷಣೆ ಮಾಡಿಕೊಳ್ಳುವವರು ಜಾತಿಗಣತಿ ಫಾರಂನ ಧರ್ಮದ ಕಲಂ 8 ರ ಕ್ರಮ ಸಂಖ್ಯೆ6 ರಲ್ಲಿರುವ ಬೌದ್ಧ ಅನ್ನುವ ಅವಕಾಶ ಆಯ್ಕೆ ಮಾಡಿಕೊಂಡು ಕಲಂ 9 ರಲ್ಲಿ ಇರುವ ಜಾತಿ ಕಲಂ ಸಹ ಬೌದ್ಧ ಎನ್ನುವ ಅವಕಾಶವನ್ನು ಆಯ್ಕೆ ಮಾಡಿಕೊಂಡು ಕಲಂ 10 ರಲ್ಲಿರುವ ಜಾತಿ ಕಲಂನಲ್ಲಿ ಯಾವುದೇ ನಮೂದು ಮಾಡದೆ ಹಾಗೆಯೇ ಬಿಡಬೇಕು ಎಂದರು.ಬೌದ್ಧ ಧರ್ಮ ಆಯ್ಕೆ ಮಾಡಿಕೊಂಡರೆ ಸಂವಿಧಾನದತ್ತವಾದ ಧಾರ್ಮಿಕ ಸ್ವಾತಂತ್ರ್ಯ ಸಂಪೂರ್ಣ ಪಡೆದುಕೊಂಡು, ಶಿಕ್ಷಣ, ಉದ್ಯೋಗ ಮತ್ತು ರಾಜಕೀಯ ಮೀಸಲಾತಿ ಹಕ್ಕನ್ನು ಈಗಿರುವಂತೆಯೇ ಉಳಿಸಿಕೊಳ್ಳುತ್ತೇವೆ. ನಮ್ಮ ಮುಂದಿನ ಪೀಳಿಗೆಯು ಜಾತಿ ಮತ್ತು ಅಸ್ಪೃಶ್ಯತೆಯ ಕರಾಳತೆಯಿಂದ ಮುಕ್ತವಾಗಿ ಗೌರವಯುತ ಬದುಕನ್ನು ಕಟ್ಟಿಕೊಳ್ಳಲು ನಾವು ಕಾರಣರಾಗುತ್ತೇವೆ ಎಂದರು. ಸುದ್ದಿಗೋಷ್ಟಿಯಲ್ಲಿ ದಲಿತ ಮುಖಂಡರಾದ ಎಂ.ಸೋಮಶೇಖರ್, ಅಂಬುಗ ಮಲ್ಲೇಶ್, ರಾಜಶೇಖರ್, ಜಗದೀಶ್ ಚೌಡಳ್ಳಿ ಇತರರಿದ್ದರು.
