Home ಬೆಂಗಳೂರು ವಿ.ವಿಗಳನ್ನು ಮುಚ್ಚಿ ಇನ್ನಷ್ಟು ಬಾರ್‌ಗಳನ್ನು ಓಪನ್‌ ಮಾಡಿ – ಆರ್ ಅಶೋಕ್ ವ್ಯಂಗ್ಯ

ವಿ.ವಿಗಳನ್ನು ಮುಚ್ಚಿ ಇನ್ನಷ್ಟು ಬಾರ್‌ಗಳನ್ನು ಓಪನ್‌ ಮಾಡಿ – ಆರ್ ಅಶೋಕ್ ವ್ಯಂಗ್ಯ

0

ಬೆಂಗಳೂರು : ವಿಧಾನಸೌಧದಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್‌.ಅಶೋಕ್ 3 ಸಾವಿರ ಬಾರ್‌ಗಳನ್ನು ಮುಚ್ಚುವುದಿಲ್ಲ. ಆದರೆ ವಿವಿಗಳನ್ನು ಮಾತ್ರ ಮುಚ್ಚಲಾಗುತ್ತಿದೆ. ಕರ್ನಾಟಕದಲ್ಲಿ ವಿಶ್ವವಿದ್ಯಾಲಯಗಳನ್ನು ಮುಚ್ಚಿಸುವ ಭಾಗ್ಯವನ್ನು ಕಾಂಗ್ರೆಸ್‌ ನೀಡಿದೆ. ಕಿಸಾನ್‌ ಸಮ್ಮಾನ್‌, ವಿದ್ಯಾನಿಧಿ ಸೇರಿದಂತೆ ಅನೇಕ ಯೋಜನೆಗಳನ್ನು ಮುಚ್ಚಿ ಹಾಕಲಾಗಿದೆ. ಈಗ ಮಾರಿ ಕಣ್ಣು ಹೋರಿ ಮೇಲೆ ಎಂಬಂತೆ, ಸಿಎಂ ಸಿದ್ದರಾಮಯ್ಯನವರ ಕಣ್ಣು ವಿಶ್ವವಿದ್ಯಾಲಯಗಳ ಮೇಲೆ ಬಿದ್ದಿದೆ.

ಯುವಜನರು ಪದವೀಧರರಾಗುವುದನ್ನು ತಪ್ಪಿಸಲು ಈ ರೀತಿ ಮಾಡಲಾಗಿದೆ. ಯಾರೂ ಪದವೀಧರರಾಗದೇ ಇದ್ದಲ್ಲಿ ಯುವನಿಧಿ ಯೋಜನೆಯನ್ನು ನಿಲ್ಲಿಸಬಹುದು ಎಂಬುವುದು ಇವರ ಚಿಂತನೆ ಎಂದು ಆರೋಪಿಸಿದರು. ಬೇರೆ ರಾಜ್ಯ, ದೇಶಗಳ ವಿದ್ಯಾರ್ಥಿಗಳು ನಮ್ಮ ರಾಜ್ಯದ ವಿಶ್ವವಿದ್ಯಾಲಯಗಳಿಗೆ ಬರುತ್ತಿದ್ದಾರೆ. ಮಂಡ್ಯದ ವಿಶ್ವವಿದ್ಯಾಲಯವನ್ನು ಮುಚ್ಚಿ, ಅಮ್ಯೂಸ್‌ಮೆಂಟ್‌ ಪಾರ್ಕ್‌ ಹಾಗೂ ಜಲಕ್ರೀಡೆಗೆ ವ್ಯವಸ್ಥೆ ಮಾಡಲಾಗುತ್ತಿದೆ.

ಹೆಚ್ಚು ಕನ್ನಡಿಗರು ಇರುವ ಮಂಡ್ಯದಲ್ಲೇ ಶಿಕ್ಷಣಕ್ಕೆ ಕೊಡಲಿ ಪೆಟ್ಟು ಹಾಕಲಾಗಿದೆ. ಉಪನ್ಯಾಸಕರ ನೇಮಕವಿಲ್ಲ, ಅತಿಥಿ ಉಪನ್ಯಾಸರಿಗೆ ವೇತನ ಇಲ್ಲ, ಹೊಸ ಶಿಕ್ಷಣ ನೀತಿ ಜಾರಿಯಾಗಿಲ್ಲ, ಶಾಲಾ ಕೊಠಡಿಗಳ ದುರಸ್ಥಿಗೆ ಹಣವಿಲ್ಲ, ಪಠ್ಯಪುಸ್ತಕ-ಸಮವಸ್ತ್ರ ನೀಡಲು ಕಾಸಿಲ್ಲ. ಹೊಸ ಕಾಲೇಜುಗಳನ್ನು ಎಲ್ಲೂ ಆರಂಭಿಸಿಲ್ಲ. 4 ಲಕ್ಷ ಕೋಟಿ ರೂ. ಗಾತ್ರದ ಬಜೆಟ್‌ ಮಂಡಿಸುವಾಗ, ಅದರಲ್ಲಿ 342 ಕೋಟಿ ರೂ. ಕೊಟ್ಟರೆ ಸಾಕು. ಇಷ್ಟು ಹಣ ಕೊಡಲಾಗದೇ ಇದ್ದಲ್ಲಿ, ಮತ್ತೇಕೆ ಬಜೆಟ್‌ ಮಂಡಿಸಬೇಕು ಎಂದು ಪ್ರಶ್ನಿಸಿದರು.

ಮಾಜಿ ಸಚಿವ, ಶಾಸಕ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮಾತನಾಡಿ, 8 ವಿಶ್ವವಿದ್ಯಾಲಯಗಳನ್ನು ಮುಚ್ಚುವ ಸರ್ಕಾರ ನಿರ್ಧಾರದಿಂದ ಪ್ರಗತಿಗೆ ಹಿನ್ನಡೆಯಾಗಲಿದೆ. ಕಾಂಗ್ರೆಸ್‌ನಿಂದ ಎಲ್ಲ ಕ್ಷೇತ್ರಗಳಲ್ಲಿ ಹಿನ್ನಡೆಯಾಗಿದೆ. ಈ ತೀರ್ಮಾನದಿಂದ ಯುವಜನರ ಶೈಕ್ಷಣಿಕ ಪ್ರಗತಿಗೆ ತೊಂದರೆಯಾಗಲಿದೆ. ಸಿದ್ದರಾಮಯ್ಯನವರು ಬಜೆಟ್‌ ಮಂಡಿಸುವಾಗ ಡಾ.ಬಿ.ಆರ್‌.ಅಂಬೇಡ್ಕರ್‌ರ ಸಂವಿಧಾನದ ಆಶಯ, ವಚನಕಾರರ ಮಾತುಗಳನ್ನು ಹೇಳಿದ್ದರು. ಆದರೆ ಈಗ ವಿವಿಗಳನ್ನು ಮುಚ್ಚಲಾಗುತ್ತಿದೆ ಎಂದು ದೂರಿದರು.

ಸಿಎಂ ಸಿದ್ದರಾಮಯ್ಯನವರು ರಾಜ್ಯಕ್ಕೆ ವಿಶ್ವವಿದ್ಯಾಲಯಗಳನ್ನು ಮುಚ್ಚುವ ಭಾಗ್ಯ ನೀಡಿದ್ದಾರೆ. ಇದರಿಂದಾಗಿ ನಮ್ಮ ರಾಜ್ಯದ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ಪಕ್ಕದ ರಾಜ್ಯಕ್ಕೆ ವಲಸೆ ಹೋಗಬೇಕಾಗುತ್ತದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಅವರು ಆಕ್ರೋಶ ಹೊರಹಾಕಿದರು.

You cannot copy content of this page

Exit mobile version