ಹಿರಿಯ ರಾಜಕೀಯ ಮುತ್ಸದ್ದಿ, ಮಾಜಿ ಸಚಿವ ಡಿ ಬಿ ಚಂದ್ರೇ ಗೌಡರು ನಿಧನರಾಗಿದ್ದಾರೆ. ಅವರ ರಾಜಕೀಯ ಬದುಕಿನ ಏಳು ಬೀಳುಗಳನ್ನು ನೆನಪಿಸಿಕೊಂಡು ಬರೆದಿದ್ದಾರೆ ಶಶಿಕಾಂತ ಯಡಹಳ್ಳಿ. ಈ ಮೂಲಕ ಗೌಡರಿಗೆ ಪೀಪಲ್ ಮೀಡಿಯಾವು ಗೌರವದ ನುಡಿ ನಮನವನ್ನು ಸಲ್ಲಿಸುತ್ತದೆ.
ಬಹುಷಃ ಈ ನಾಡಿನ ಬಹುತೇಕ ಜನರು ಡಿ.ಬಿ.ಚಂದ್ರೇಗೌಡರನ್ನು ಮರೆತೇ ಬಿಟ್ಟಿದ್ದರು. ಅಧಿಕಾರದಲ್ಲಿದ್ದಾಗ ಮೆರೆಸುವುದು ಇಲ್ಲವಾದಾಗ ಮರೆಯುವುದು ಜನಸಮುದಾಯದ ಗುಣವಿಶೇಷ. ಇದಕ್ಕೆ ಚಂದ್ರೇಗೌಡರೂ ಹೊರತಾಗಿರಲಿಲ್ಲ. ನಿನ್ನೆ ನವೆಂಬರ್ 6 ರ ಮಧ್ಯರಾತ್ರಿ ಚಂದ್ರೇಗೌಡರು ತೀರಿಕೊಂಡ ಸುದ್ದಿ ಇವತ್ತು ಬೆಳಿಗ್ಗೆ ಜಾಲತಾಣಗಳಲ್ಲಿ ಹರಿದಾಡಿದಾಗಲೇ ಅನೇಕರಿಗೆ ಆದಂತೆ ಚಂದ್ರೇಗೌಡರು ಮತ್ತೆ ನೆನಪಾದರು. ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದ ಗೌಡರು ತಮ್ಮ 87 ನೇ ವಯಸ್ಸಲ್ಲಿ ಜಗದ ಜಂಜಡದಿಂದ ಮುಕ್ತರಾದರು.
ಚಿಕ್ಕಮಗಳೂರಿನ ವರ್ಣರಂಜಿತ ರಾಜಕಾರಣಿಯಾಗಿದ್ದ ಚಂದ್ರೇಗೌಡರು ದೇಶಾದ್ಯಂತ ಪ್ರಸಿದ್ದಿಯಾಗಿದ್ದು ಇಂದಿರಾ ಗಾಂಧಿಯವರಿಗಾಗಿ ಅವರು ಪ್ರತಿನಿಧಿಸುತ್ತಿದ್ದ ಚಿಕ್ಕಮಗಳೂರಿನ ಲೋಕಸಭಾ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದರಿಂದಾಗಿ. ಇಂದಿರಮ್ಮನವರಿಗೆ ಇಡೀ ದೇಶದಲ್ಲಿ ಗೆಲ್ಲಬಹುದಾದ ಸೇಫೆಸ್ಟ್ ಕ್ಷೇತ್ರ ಚಿಕ್ಕಮಗಳೂರು ಎಂದು ಮನವರಿಕೆಯಾಗಿದ್ದರಿಂದ 1978 ರಲ್ಲಿ ಈ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು ರಾಜಕೀಯವಾಗಿ ಮರುಹುಟ್ಟು ಪಡೆದರು. ಅವರ ಗೆಲುವಿನ ಹಿಂದೆ ಚಂದ್ರೇಗೌಡರ ಪರಿಶ್ರಮವೂ ಅಪಾರವಾಗಿತ್ತು. ತಮ್ಮ ಕ್ಷೇತ್ರ ತ್ಯಾಗಕ್ಕೆ ಪ್ರತಿಯಾಗಿ ಬೇಕಾದಷ್ಟು ರಾಜಕೀಯ ಲಾಭಗಳನ್ನು ಪಡೆಯುವ, ಅವಕಾಶಗಳು ಚಂದ್ರೇಗೌಡರಿಗೆ ಇದ್ದರೂ ಅವುಗಳನ್ನು ಅವರು ಆಗ ಬಳಸಿ ಕೊಳ್ಳಲಿಲ್ಲ. ಆದರೆ ನಂತರ ನಡೆದ ಪಲ್ಲಟದಲ್ಲಿ ಗೌಡರು ಕಾಂಗ್ರೆಸ್ಸನ್ನೇ ತೊರೆದು ಜನತಾ ಪಕ್ಷಕ್ಕೆ ಪಕ್ಷಾಂತರ ಮಾಡಿ ಮತ್ತೆ ಸುದ್ದಿಯಾದರು. ತ್ಯಾಗದ ಬೆಲೆ ಕಳೆದುಕೊಂಡರು!
ಯಾವಾಗ ಚಂದ್ರೇಗೌಡರು 2009 ರಲ್ಲಿ ತಮ್ಮ ಸೈದ್ಧಾಂತಿಕ ನಿಲುವಿನಲ್ಲಿ ರಾಜಿಮಾಡಿಕೊಂಡು ಬಿಜೆಪಿ ಸೇರಿದರೋ ಆಗ ಮತ್ತೊಮ್ಮೆ ಸುದ್ದಿಯಾದರು. ಆಗ ಅವರ ಪಕ್ಷ ನಿಷ್ಟೆ ಹಾಗೂ ರಾಜಕೀಯ ಬದ್ಧತೆಗಳು ಪ್ರಶ್ನೆಗೊಳಗಾದವು. ಆದರೂ ಚಿಕ್ಕಮಗಳೂರಿನ ಜನ ಅವರ ಕೈಬಿಡಲಿಲ್ಲ. ಬಿಜೆಪಿ ಪಕ್ಷದಿಂದ ಲೋಕಸಭೆಗೆ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾದರಾದರೂ ಬಿಜೆಪಿಯಲ್ಲಿ ನಿರ್ಲಕ್ಷ್ಯಕ್ಕೊಳಗಾಗಿ ಎಲ್ಲೂ ಸಲ್ಲದವರಾದರು. ಇದೇ ಅವರ ಬದುಕಿನ ಕೊನೆಯ ಸ್ಪರ್ಧೆಯಾಗಿತ್ತು. ಮುಂದೆ ಅದೇನು ವೈರಾಗ್ಯ ಪ್ರಾಪ್ತವಾಯಿತೋ ಗೊತ್ತಿಲ್ಲ. 2014 ರಲ್ಲಿ ರಾಜಕೀಯ ನಿವೃತ್ತಿ ಪಡೆದು ಹುಟ್ಟೂರಾದ ದಾರದಹಳ್ಳಿಯಲ್ಲಿ ಬಾಕಿ ಬದುಕನ್ನು ವಿಷಾದದಲ್ಲೇ ಕಳೆದರು.
ಕರ್ನಾಟಕ ವಿಧಾನ ಸಭೆಯ ಸ್ಪೀಕರ್ ಆಗಿ, ಮೂರು ಅವಧಿಗಳಿಗೆ ಶಾಸಕರಾಗಿ, ಒಂದು ಸಲ ಎಂಎಲ್ಸಿ ಆಗಿ, ಮೂರು ಅವಧಿಗಳಿಗೆ ಸಂಸದರಾಗಿ ಹಾಗೂ ಒಂದು ಸಲ ರಾಜ್ಯಸಭೆ ಸಂಸದರೂ ಆಗಿ ರಾಜಕೀಯದಲ್ಲಿ ಅಪಾರ ಅನುಭವವನ್ನು ಚಂದ್ರೇಗೌಡರು ಹೊಂದಿದ್ದರು. 1996 ರಿಂದ 2004 ರ ವರೆಗೆ ಕರ್ನಾಟಕ ಸರಕಾರದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರೂ ಆಗಿದ್ದರು. ಯಾವುದೇ ಒಂದು ಪಕ್ಷಕ್ಕೆ ನಿಷ್ಟರಾಗಿರದೇ ತಮ್ಮ ರಾಜಕೀಯ ಬದುಕಿನಲ್ಲಿ ಪ್ರಜಾ ಸೋಷಿಯಲಿಸ್ಟ್ ಪಾರ್ಟಿ, ಕರ್ನಾಟಕ ಕ್ರಾಂತಿ ರಂಗ, ಜನತಾಪಕ್ಷ, ಜನತಾದಳ, ಕಾಂಗ್ರೆಸ್, ಬಿಜೆಪಿ ಹೀಗೆ ಪ್ರಮುಖ ಪಕ್ಷಗಳಿಗೆ ಪಕ್ಷಾಂತರ ಮಾಡಿ ಅಧಿಕಾರದ ಹಾದಿಯನ್ನು ಸುಗಮ ಗೊಳಿಸಿಕೊಂಡರು.
ತ್ಯಾಗಮಯಿ, ಉತ್ತಮ ಆಡಳಿತಗಾರ, ಚತುರ ರಾಜಕಾರಣಿ ಎಂದೆಲ್ಲಾ ಹೆಸರಾಗಿದ್ದ ಚಂದ್ರೇಗೌಡರು ತಮ್ಮ ಅವಕಾಶವಾದಿ ರಾಜಕಾರಣದಿಂದಾಗಿ ಹೆಸರು ಕೆಡಿಸಿಕೊಂಡರು ಹಾಗೂ ಬ್ರಾಹ್ಮಣರೇತರನ್ನು ಬಳಸಿ ಬಿಸಾಡುವ ಬಿಜೆಪಿ ಸೇರಿ ಮೂಲೆಗುಂಪಾಗಿ ರಾಜಕೀಯ ಆಸಕ್ತಿಯನ್ನೇ ಕಳೆದುಕೊಂಡರು. ತಕ್ಷಣದ ಲಾಭಕ್ಕಾಗಿ ಬಿಜೆಪಿ ಎನ್ನುವ ಅಕ್ಟೋಪಸ್ ಸೆಳೆತಕ್ಕೆ ಒಳಗಾಗಿ ಎಲ್ಲಿಯೂ ಸಲ್ಲದವರಾದವರ ಪಟ್ಟಿಯಲ್ಲಿ ಚಂದ್ರೇಗೌಡರ ಹೆಸರೂ ದಾಖಲಾಗಿದೆ.
ಮಲೆನಾಡಿನ ಅಭಿವೃದ್ಧಿಗೆ ಬೇಕಾದಷ್ಟು ಕೊಡುಗೆ ನೀಡುವ ಅವಕಾಶಗಳನ್ನು ತಮ್ಮ ಅಧಿಕಾರದ ಅವಧಿಯಲ್ಲಿ ಚಂದ್ರೇಗೌಡರು ಬಳಸಿಕೊಳ್ಳ ಬಹುದಾಗಿತ್ತು. ಆದರೆ ಹಾಗೆ ಮಾಡಲಿಲ್ಲವೆಂಬ ಆರೋಪಕ್ಕೆ ಒಳಗಾದರು. ಕೋಮು ಕೆಂಡದಲ್ಲಿ ಬಾಬಾಬುಡನ್ ಗಿರಿ ವಿವಾದ ಪ್ರಜ್ವಲಿಸುತ್ತಿದ್ದಾಗಲಾದರೂ ಅದನ್ನು ತಣ್ಣಗಾಗಿಸಿ ಸೌಹಾರ್ದತೆ ಕಾಪಾಡುವ ಪ್ರಯತ್ನವನ್ನಾದರೂ ಚಂದ್ರೇಗೌಡರು ಮಾಡಬಹುದಾಗಿತ್ತು, ಅದೂ ಅವರಿಗೆ ಬೇಕಾಗಿರಲಿಲ್ಲ. ಮಲೆನಾಡಿನ ಜನತೆ ಅರಣ್ಯ ಕಾಯಿದೆಗಳ ಇಕ್ಕಳದಲ್ಲಿ ಸಿಲುಕಿ ನಲುಗುತ್ತಿರುವಾಗಲಾದರೂ ನೊಂದವರ ಸಹಾಯಕ್ಕೆ ಮುಂದಾಗಬಹುದಾಗಿತ್ತು, ಅದನ್ನೂ ಮಾಡಲಿಲ್ಲ. ಹೋಗಲಿ ಸಂಸದನಾಗಿ ಪಾರ್ಲಿಮೆಂಟನಲ್ಲಿ ಜನರ ಸಮಸ್ಯೆಗಳ ಕುರಿತು ಗಟ್ಟಿ ದ್ವನಿ ಎತ್ತಬಹುದಾಗಿತ್ತು. ಅದು ಆಗದೆ ಮೌನವೇ ಅವರ ಉತ್ತರವಾಗಿತ್ತು.
ಕೋಮು ಸೌಹಾರ್ದತೆಯಿಂದ ಇದ್ದ ಚಿಕ್ಕಮಗಳೂರಲ್ಲಿ ಕೋಮುವಾದ ಬೆಳೆಯಲು ಕಾರಣವಾದವರಲ್ಲಿ ಚಂದ್ರೇಗೌಡರೂ ಪ್ರಮುಖರು ಎಂಬ ಆಪಾದನೆ ಅವರ ಮೇಲಿದೆ. ಈ ಗೌಡರು ನ್ಯಾಯಾಲಯದ ಆದೇಶವನ್ನೇ ಉಲ್ಲಂಘಿಸಿ ಬಾಬಾಬುಡನ್ ಗಿರಿಯಲ್ಲಿ ಕೋಮುವಾದಿ ಹಿಂದುತ್ವವಾದಿಗಳ ಜೊತೆ ಸೇರಿ ಹೋಮಕುಂಡದ ಮುಂದೆ ಪೂಜೆಗೆ ಕುಳಿತು ಸಂಘಪರಿವಾರದ ಸಮರ್ಥಕರಾದರು. ಕೋಮುದ್ವೇಷಕ್ಕೆ ಪ್ರೇರೇಪಣೆ ಕೊಟ್ಟರು. ಚಿಕ್ಕಮಗಳೂರಲ್ಲಿದ್ದ ಜಾತ್ಯತೀತ ರಾಜಕಾರಣವನ್ನು ನಿರ್ನಾಮಗೊಳಿಸಿ ಸೆಕ್ಯೂಲರ್ ರಾಜಕಾರಣಿಗಳನ್ನು ಹಿಮ್ಮೆಟ್ಟಿಸಿದರು. ಚಂದ್ರೇಗೌಡರ ಮತೀಯ ರಾಜಕಾರಣದ ಗರಡಿಯಲ್ಲಿ ಬೆಳೆದ ಸಿ.ಟಿ.ರವಿಯಂತಹ ಕೋಮುವಾದಿ ನಾಯಕರು ಇಡೀ ಚಿಕ್ಕಮಗಳೂರನ್ನೇ ಕೇಸರೀಕರಣ ಗೊಳಿಸಿದರು. ಚಂದ್ರೇಗೌಡರ ನಾಯಕತ್ವವನ್ನು ಬಳಸಿಕೊಂಡ ಬಿಜೆಪಿ ಈ ಭಾಗದಲ್ಲಿ ಬೆಳೆಯಿತು. ಗೌಡರ ಅಗತ್ಯ ಮುಗಿದಾದ ಮೇಲೆ ಬಳಸಿ ಬೀಸಾಡಿತು.
2014 ರ ಲೋಕಸಭಾ ಚುನಾವಣೆಯಲ್ಲಿ ಚಂದ್ರೇಗೌಡರಿಗೆ ಟಿಕೆಟ್ ಕೊಡದೇ ಅಪಮಾನಿಸಲಾಯ್ತು. ಬಿಜೆಪಿಯ ಕುತಂತ್ರದಿಂದ ನಿರಾಸೆ ಹೊಂದಿಯೋ, ಚಿಕ್ಕಮಗಳೂರಲ್ಲಿ ಕೋಮುವ್ಯಾಧಿ ಹರಡಿದ ಅಪರಾಧಿ ಮನೋಭಾವದಿಂದಲೋ, ಹಿಂದುತ್ವವಾದಿಗಳ ಅತಿರೇಕಗಳಿಂದ ಬೇಸರಗೊಂಡೋ ಚಂದ್ರೇಗೌಡರು ರಾಜಕಾರಣಕ್ಕೆ ವಿದಾಯ ಹೇಳಿದರು. ಮತ್ತೆಂದೂ ಸಕ್ರಿಯ ರಾಜಕಾರಣಕ್ಕೆ ಮರಳದೇ ಮಾಡಿದ ಪಾಪಗಳಿಗೆ ಪಶ್ಚಾತ್ತಾಪ ಎಂಬಂತೆ ನಿವೃತ್ತ ಜೀವನವನ್ನು ಕಳೆದರು. ಕೊನೆಗೂ ಪಾರ್ಕಿನ್ಸನ್ ಎನ್ನುವ ಮರೆವಿನ ಕಾಯಿಲೆಗೆ ತುತ್ತಾಗಿ ಕೊನೆಯುಸಿರೆಳೆದರು.
ಅವಕಾಶವಾದಿ, ಅಧಿಕಾರದಾಹಿ ಎನ್ನುವ ಅನೇಕ ಆರೋಪಗಳ ನಡುವೆಯೂ ಇದ್ದುದರಲ್ಲಿ ಚಂದ್ರೇಗೌಡರು ಮುತ್ಸದ್ದಿ ರಾಜಕಾರಣಿಯಾಗಿದ್ದರು. ಎಲ್ಲಾ ಪಕ್ಷಗಳ ನಾಯಕರೊಂದಿಗೆ ಸ್ನೇಹ ಸಂಬಂಧ ಉಳಿಸಿ ಬೆಳೆಸಿಕೊಂಡಿದ್ದರು. ಜನರ ನಿರೀಕ್ಷೆಗೆ ತಕ್ಕಂತೆ ಒಳಿತನ್ನು ಮಾಡದೇ ಹೋದರೂ ಕೆಡುಕನ್ನು ಮಾಡಲಿಲ್ಲವೆಂಬುದೇ ಅವರು ಮುತ್ಸದ್ದಿ ರಾಜಕಾರಣಿ ಎನ್ನಿಸಿಕೊಳ್ಳಲು ಸಕಾರಣವಾಗಿತ್ತು. ಆದರೆ ಬಿಜೆಪಿ ಸೇರಿ ದುರಂತ ನಾಯಕರಾದ ಚಂದ್ರೇಗೌಡರು ಸಕ್ರಿಯ ರಾಜಕಾರಣಕ್ಕೆ ವಿದಾಯ ಹೇಳಿದ್ದರು. ಈಗ ಈ ಲೋಕದಿಂದಲೇ ನಿರ್ಗಮಿಸಿದರು.
ಬಿಜೆಪಿಯ ಸಖ್ಯಕ್ಕೆ ಹಾತೊರೆಯುವ ರಾಜಕಾರಣಿಗಳಿಗೆ ಚಂದ್ರೇಗೌಡರ ರಾಜಕೀಯದ ಅಂತ್ಯ ಪಾಠವಾಗಲಿ. ಏನೇ ಆದರೂ ಕರ್ನಾಟಕದ ರಾಜಕಾರಣದ ಚರಿತ್ರೆಯಲ್ಲಿ ಚಂದ್ರೇಗೌಡರ ಹೆಸರು ಚಿರಸ್ಥಾಯಿ ಆಗಲಿ.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು
ಇದನ್ನೂ ಓದಿ-ಚಂದ್ರೇಗೌಡ ನಿಧನ ತುಂಬಲಾರದ ನಷ್ಟವೇ ಸರಿ : ಬೆಳಗೂರು ಸಮೀಯುಲ್ಲಾ