ಬಾಲಿವುಡ್‌ನಲ್ಲಿ ತಮಗೆ ಕಳೆದ ಎಂಟು ವರ್ಷಗಳಿಂದ ಸರಿಯಾದ ಅವಕಾಶಗಳು ಸಿಗುತ್ತಿಲ್ಲ ಎಂದು ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಇತ್ತೀಚೆಗೆ ಬಿಬಿಸಿ ಸಂದರ್ಶನದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು. “ಸೃಜನಶೀಲರಲ್ಲದ ಜನರು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದು, ಕೋಮು ಕಾರಣಗಳಿಂದಾಗಿ ನನಗೆ ಕೆಲಸ ಸಿಗುತ್ತಿಲ್ಲವೇನೋ” ಎಂಬ ಅವರ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು.
ರೆಹಮಾನ್ ಅವರ ಈ ಹೇಳಿಕೆಗೆ ವಿಶ್ವ ಹಿಂದೂ ಪರಿಷತ್ (VHP) ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಸಂಘಟನೆಯ ರಾಷ್ಟ್ರೀಯ ವಕ್ತಾರ ವಿನೋದ್ ಬನ್ಸಾಲ್, “ರೆಹಮಾನ್ ಅವರು ಘರ್ ವಾಪಸಿ (ಮರಳಿ ಹಿಂದೂ ಧರ್ಮಕ್ಕೆ) ಮಾಡಿದರೆ ಅವರಿಗೆ ಮತ್ತೆ ಕೆಲಸ ಸಿಗಬಹುದು,” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ರೆಹಮಾನ್ ಅವರು ಮೂಲತಃ ದಿಲೀಪ್ ಕುಮಾರ್ ಆಗಿದ್ದು, ನಂತರ ಇಸ್ಲಾಂ ಧರ್ಮ ಸ್ವೀಕರಿಸಿದ್ದರು.
ರೆಹಮಾನ್ ಅವರು ಹಮೀದ್ ಅನ್ಸಾರಿ ಅವರಂತಹ ನಿರ್ದಿಷ್ಟ ಬಣದೊಂದಿಗೆ ಗುರುತಿಸಿಕೊಂಡಿದ್ದಾರೆ ಎಂದು ಆರೋಪಿಸಿದ ಬನ್ಸಾಲ್, “ಒಂದು ಕಾಲದಲ್ಲಿ ಇಡೀ ದೇಶವೇ ಆರಾಧಿಸುತ್ತಿದ್ದ ಸಂಗೀತಗಾರ, ಈಗ ತಮಗೆ ಅನ್ನ ನೀಡಿದ ಚಿತ್ರರಂಗದ ಬಗ್ಗೆಯೇ ಕೆಟ್ಟದಾಗಿ ಮಾತನಾಡುತ್ತಿದ್ದಾರೆ,” ಎಂದು ಟೀಕಿಸಿದ್ದಾರೆ.
