ಸಾಗರ/ಶಿವಮೊಗ್ಗ: ಶರಾವತಿ ಸಂತ್ರಸ್ತರ ಜೀವನ ಅತಂತ್ರವಾಗಿದ್ದು, ಈ ಕೂಡಲೇ ರಾಜ್ಯ ಸರ್ಕಾರ ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿ, ಕಾಂಗ್ರೆಸ್ ಯುವ ಮುಖಂಡ ಹಾಗೂ ಮಾಜಿ ಶಾಸಕ ಮಧು ಬಂಗಾರಪ್ಪ, ಗೋಪಾಲಕೃಷ್ಣ ಬೇಳೂರು, ಮತ್ತು ರಾಜನಂದಿನಿ ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ ಇಂದು ಪಾದಯಾತ್ರೆ ನಡೆಯುತ್ತಿದೆ. ಶಿವಮೊಗ್ಗ ತಾಲ್ಲೂಕಿನ ಆಯನೂರಿನಿಂದ ಪಾದಯಾತ್ರೆ ಪ್ರಾರಂಭಗೊಂಡಿದ್ದು, ಸಂಜೆ 4ಗಂಟೆಗೆ ಶಿವಮೊಗ್ಗದ NES ಮೈದಾನದಲ್ಲಿ ಸಮಾವೇಶ ನಡೆಯಲಿದೆ. ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಪಕ್ಷದ ನಾಯಕರಾದ ಬಿ.ಕೆ. ಹರಿಪ್ರಸಾದ್, ಧ್ರುವನಾರಯಣ್ ಸೇರಿ ಹಲವರು ಭಾಗಿಯಾಗುವ ನಿರೀಕ್ಷೆಯಿದೆ.
1960ರ ದಶಕದಿಂದ ಶರಾವತಿ ಸಂತ್ರಸ್ಥರು ಸಮಸ್ಯೆ ಅನುಭವಿಸುತ್ತಿದ್ದು, ಸಾಗರ ತಾಕ್ಕೂಕಿನ ಲಿಂಗನಮಕ್ಕಿ ಡ್ಯಾಂ ನಿರ್ಮಾಣದ ವೇಳೆ, ಒಂದು ಲಕ್ಷಕ್ಕೂ ಅಧಿಕ ಎಕರೆ ಭೂಮಿ ಅರಣ್ಯ ಮುಳುಗಡೆಯಾಗಿದ್ದು, ಅಲ್ಲಿನ ಜನರು ಮನೆ-ಜಮೀನು ಕಳೆದುಕೊಂಡಿದ್ದರು. ಹೀಗಾಗಿ ಜಲಾಶಯ ನಿರ್ಮಾಣಕ್ಕೆ ಸರ್ಕಾರ ಹತ್ತು ಸಾವಿರ ಕುಟುಂಬಗಳನ್ನು ಒಕ್ಕಲೆಬ್ಬಿಸಿತ್ತು. ಆದರೆ ಸಂತ್ರಸ್ಥರಿಗೆ ಈವರೆಗೂ ಸೂಕ್ತ ಪರಿಹಾರ ನೀಡಿಲ್ಲ.
1959 ರಿಂದ 1969ರವರೆಗೆ ಶಿವಮೊಗ್ಗ ತಾಲ್ಲೂಕು, ಭದ್ರಾವತಿ ತಾಲ್ಲೂಕುಗಳ ಕೆಲವೆಡೆ 9,934 ಎಕರೆ ಬಿಡುಗಡೆ ಜಮೀನನ್ನು ಅಂದಿನ ಸರ್ಕಾರ ಒದಗಿಸಿದ್ದರೂ ಅರಣ್ಯ ಭೂಮಿಯನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸಿರಲಿಲ್ಲ. ಹೀಗಾಗಿ ಇನ್ನೂ ಕೂಡ ಸಂತ್ರಸ್ತರಿಗೆ ಭೂಮಿ ಸಿಕ್ಕಿಲ್ಲ. ಇದರ ಜೊತೆ ರಾಜ್ಯ ಸರ್ಕಾರ ಶರಾವತಿ ಸಂತ್ರಸ್ತರಿಗೆ ನೀಡಿದ್ದ ಹಕ್ಕುಪತ್ರವನ್ನು ವಜಾ ಮಾಡಿದೆ.
ಕೆಲವು ದಿನಗಳ ಹಿಂದೆ ಸಾಗರದ ಶಾಸಕರಾದ ಹರತಾಳು ಹಾಲಪ್ಪ ಈ ಸಂಬಂಧ ಸಂತ್ರಸ್ತರ ಸಭೆಯನ್ನು ಕರೆದು ಚರ್ಚಿಸಿದ್ದರು. ಆದರೆ ಸಂತ್ರಸ್ತರಿಗೆ ನೆರವು ನೀಡುವಲ್ಲಿ ಈಗಿನ ಬಿಜೆಪಿಯೂ ಸೇರಿದಂತೆ ಇದುವರೆಗಿನ ಎಲ್ಲಾ ಸರ್ಕಾರಗಳು ವಿಫಲವಾಗಿವೆ ಎಂಬುದು ಸಂತ್ರಸ್ತರ ಆರೋಪವಾಗಿದೆ. ಈ ಹಿಂದೆ ಕಾಂಗ್ರೆಸ್ ಪಕ್ಷದ ಮುಖಂಡರೂ ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪನವರು ಸಹ ಸಂತ್ರಸ್ತರ ಪರ ದನಿ ಎತ್ತಿದ್ದರು. ಈಗ ರಾಜ್ಯ ಕಾಂಗ್ರೆಸ್ ಪಾದಯಾತ್ರೆ ಹಮ್ಮಿಕೊಳ್ಳುತ್ತಿದ್ದಂತೆ ರಾಜಕೀಯ ಪಕ್ಷಗಳ ಚುನಾವಣಾ ಲೆಕ್ಕಾಚಾರಗಳ ಕುರಿತೂ ಚರ್ಚೆ ನಡೆಯುತ್ತಿದೆ.
ಶರಾವತಿ ಮುಳುಗಡೆ ಸಂತ್ರಸ್ತರ ಶಾಶ್ವತ ಪರಿಹಾರಕ್ಕಾಗಿ ಮಾಜಿ ಶಾಸಕ ಮಧು ಬಂಗಾರಪ್ಪನವರು, ಶಿವಮೊಗ್ಗ. ಸಾಗರ, ತೀರ್ಥಹಳ್ಳಿ, ಶಿಕಾರಿಪುರ, ಶಿರಾಳಕೊಪ್ಪ, ಸೊರಬ, ಕುಂಸಿ ಸೇರಿದಂತೆ ಹಲವು ಸ್ಥಳಗಳಲ್ಲಿ ಅಲ್ಲಿನ ಗ್ರಾಮಸ್ಥರು ಮತ್ತು ಕಾಂಗ್ರೆಸ್ ಕಾರ್ಯಕರ್ತರ ಜೊತೆ ಸೇರಿ ಪೂರ್ವಭಾವಿ ಸಭೆಯನ್ನು ನಡೆಸಿ ಹೋರಾಟದ ರೂಪರೇಷೆಗಳ ಬಗ್ಗೆ ಚರ್ಚಿಸಿದ್ದರು.