ಅಲ್ಲಿ – ನಮೋ ಸಾಮ್ರಾಟನ ಅರಮನೆಯ ಆವರಣದಲ್ಲಿ..
ಮೂರು ಹದ್ದುಗಳು ಸಾಮ್ರಾಟನನ್ನು ಕಾಣಲು ಕಾಯುತ್ತ, ʼಕೊಕ್ಕೇಕೆ ಮೊಂಡಾಗಿದೆ?ʼ ಎಂದು ಪ್ರಶ್ನಿಸಿಯಾನೆಂದು ಕೊಕ್ಕನ್ನು ಮಸೆಯುತ್ತ ಕೂತಿದ್ದವು. ಸಾಮ್ರಾಟ ಸಿಟ್ಟಾಗಿ ಮೂವರು ಎಲ್ಲಿದ್ದರೂ, ಯಾರ ಬೇಟೆಯಾಡುತ್ತಿದ್ದರೂ ಕೂಡಲೇ ಅರಮನೆಗೆ ಬರಬೇಕೆಂದು ಅಶರೀರವಾಣಿ ಸಂದೇಶ ಕಳುಹಿಸಿದ್ದ. ಕೊಕ್ಕಲ್ಲಿದ್ದ ಮಾಂಸವನ್ನು ಬಿಟ್ಟು, ಅರೆಹೊಟ್ಟೆಯಲ್ಲಿ ಬೆಳಕರಿಯುವ ಮುನ್ನವೇ ಬಂದು ಕೂತರೆ…ನೆತ್ತಿಯ ಮೇಲೆ ಸೂರ್ಯ ಉರಿಯುತ್ತಿದ್ದರೂ ಸಾಮ್ರಾಟ ಅಂತಃಪುರದಿಂದ ಆಚೆ ಕಾಣಲಿಲ್ಲ. ಆಕಾಶದಲ್ಲಿ ಸ್ವಚ್ಚಂದವಾಗಿ ಹಾರಾಡುವ ಸ್ವತಂತ್ರವಿದ್ದರೂ ನಾಯಿಯಂತೆ ಬಿಸಲಲ್ಲಿ ಕಾಯುತ್ತ ಕೂರುವ ಪರಿಸ್ಥಿತಿಯನ್ನು ಶಪಿಸುತ್ತ ಹದ್ದುಗಳು ಮಾತಿಗಿಳಿದಿದ್ದವು.
“ಅವನು ನಾನ್ ಬಯೊಲಾಜಿಕಲ್ ಬಾರ್ನ್ ಅಥವಾ ಅಜೈವಿಕ ಸಂಜಾತ….”
“ಹ…ಏನಂದೆ? ಸ್ವಲ್ಪ ಅರ್ಥವಾಗೊ ಹಾಗೆ ಹೇಳಪ್ಪ…ಖಾಕಿ ನಿಕ್ಕರ್ ಸಂಘಕ್ಕೆ ಬಿದ್ದಾಗಿಂದ ನೀನಗ್ಯಾಕೊ ದೇವರ ಭಾಷೆ ಖಾಯಿಲೆ ಅಂಟಿದೆ!”
“ದೇವರ ಭಾಷೆಯನ್ನು ಖಾಯಿಲೆ ಎನ್ನುತ್ತೀಯ?”
“ಇಲ್ಲಪ್ಪ…ಅದು ಸ್ಲಿಪ್ ಆಫ್ ಟಂಗ್…ಖಾಯಿಲೆ ಅಲ್ಲ ಖಯಾಲಿ ಅನ್ನಬೇಕಿತ್ತು. ಸಾರಿ…”
“ಹೌದೌದು…ನಿನ್ನ ಮಾತಿನ ಗೂಢಾರ್ಥ ತಿಳಿಯದಿರುವಷ್ಟು ಮುಠ್ಠಾಳ ನಾನಲ್ಲ. ಇರಲಿ…ನಿನಗೆ ಅಷ್ಟು ಅರ್ಥವಾಗೊಲ್ವೆ? ಮತ್ತೆ ಅದ್ಯಾಗೆ ಈ ಡಿಪಾರ್ಟಮೆಂಟಿಗೆ ಬಂದೆ. ವಾಹ್…ಪರೀಕ್ಷೆ, ಇಂಟರ್ ವ್ಯೂ ಏನು ಇಲ್ದೆ ಸೀದಾ ಲ್ಯಾಟರೆಲ್ ಎಂಟ್ರಿನಾ!”
“ಸುಮ್ನೆ ಬಡಬಡಿಸಬೇಡ. ನಾವುನೂ ಕಣ್ಣಿಗೆ ಅರಳೆಣ್ಣೆ ಬಿಟ್ಕೊಂಡ್…ಕಷ್ಟ ಪಟ್ಟು ಓದಿನೇ ಇಲ್ಲಿಗೆ ಬಂದಿರೋದು. ಇಷ್ಟ ಇದ್ರೆ ಅರ್ಥ ಮಾಡಿಸು…ಇಲ್ಲಾಂದ್ರೆ ಬಿಡು”
“ಹೋಗ್ಲಿ ಬಿಡು…ಬ್ರೋ…ತಮಾಷೆ ಮಾಡ್ದೆ. ಕೋಪ ಬೇಡ. ಅದು ಆಯಪ್ಪ…ಅಮ್ಮನ ಹೊಟ್ಟೇಲಿ ಹುಟ್ಟಿಲ್ಲ…ಸೀದಾ ಡೈರೆಕ್ಟಾಗಿ ಆಕಾಶದಿಂದ ಭೂಮಿಗೆ ಉದುರಿರೋದು. ಎಲ್ಲಾ ಅವನ ದೇವರ ಮಹಿಮೆ!”
“ಅದೇಗೆ…ಮತ್ತೆ ನೋಟುಬಂಧಿ ಟೈಮಲ್ಲಿ ಬ್ಯಾಂಕಿನ ಸರತಿಯಲ್ಲಿ ತಂದು ನಿಲ್ಲಿಸಿದ ಮುದುಕಮ್ಮ ಯಾರು?”
“ನೋಡು ನಿನ್ನ ಹಾಗೆ ನಾನೂ ಕೂಡ ಎಲ್ಲರನ್ನು ಕೊಶ್ಚೆನ್ ಮಾಡೋನು. ಅಂಥದ್ದರಲ್ಲಿ ನೀನು ನನ್ನೇ ಕೊಶ್ಚೆನ್ ಮಾಡ್ಬೇಡ”
ಎರಡು ಹದ್ದುಗಳ ಸಂಭಾಷಣೆಯಿಂದ ರೋಸೆದ್ದ ಮೂರನೇ ಹದ್ದಿಗೆ ಅವರಿಬ್ಬರನ್ನು ಕೊಕ್ಕಲ್ಲಿ ಕುಕ್ಕುವಷ್ಟು ಕೋಪ ಬಂದಿತ್ತು.
“ಅಯ್ಯೋ! ನನ್ನ ತಲೆ ಕೆಟ್ಟು ಕೆರ ಹಿಡಿದಿದೆ. ಸ್ವಲ್ಪ ನೀವಿಬ್ಬರೂ ಬಾಯಿಗೆ ಬಿರುಡೆ ಹಾಕ್ಕೊಂಡು ಸೈಲೆಂಟ್ ಆಗ್ತೀರಾ. ಬಿಸಿಲಿಗೆ ತಲೆ ಸುಟ್ಟು ಹೋಗ್ತಿದೆ. ನಿಲ್ಲಲ್ಲು ಆಗದೆ ನೆಲ ಕಾದ ಹೆಂಚಾಗಿದೆ. ಒಳ್ಳೇ ಮುಷ್ಟಾನ್ನ ಸಿಕ್ಕಿತ್ತು. ಅದನ್ನು ಬಿಟ್ಟು ಬಂದಾಯಿತು. ಈಗ ಹಸಿವೆಯಿಂದ ಹೊಟ್ಟೆಗೆ ಬೆಂಕಿ ಬಿದ್ದಿದೆ. ಸಾಮ್ರಾಟ ಯಾಕೆ ಕರೆಸಿದ್ದಾನೊ ಗೊತ್ತಾಗ್ತಿಲ್ಲ. ಎಡಗಣ್ಣು ಒಂದೇ ಸಮನೆ ಹೊಡೆದುಕೊಳ್ತಿದೆ. ನೀವುಗಳು ನೋಡಿದ್ರೆ ಬಡ್ಕೊತ್ತಿದ್ದೀರ”
“ಅವ್ನು ಯಾಕೊ ಟೆನ್ಷನಲ್ಲಿದ್ದಾನೆ…”
“ಅದು ಇದ್ದದ್ದೇ…ತನಗೆ ಕಮಾಯಿ ಕಮ್ಮಿ ಅಂತ ಸಿಟ್ಟು…ಎಲ್ಲಾನೂ ಕ್ಯಾಶಲ್ಲೇ ಬೇಕು ಅಂದ್ರೆ ಚಿಲ್ರೇನೆ ಸಿಗೋದು. ನಮ್ಮಂಗೆ ಡೈರೆಕ್ಟಾಗಿ ಬೇನಾಮಿ ಅಕೌಂಟ್ ಗೆ ಟ್ರಾನ್ಸ್ ಫರ್ ಮಾಡಿಸ್ಕೊಂಡ್ರೆ ಜಾಸ್ತಿ ಪೀಕಿಸಬಹುದು. ಹೆದರುಪುಕ್ಕ…ಸೈಡಿಗೆ ಬಾ”
ಮೂರನೇಯ ಹದ್ದಿನಿಂತ ತುಸು ದೂರ ಹೋದ ಮಿಕ್ಕೆರೆಡು ಹದ್ದುಗಳು ಮತ್ತೆ ಮಾತಿಗಿಳಿದವು.
“ನಾನು ಏನು ಹೇಳ್ತಾಯಿದ್ದೆ ಅಂದರೆ…ನಿನ್ನ ಮಾತು ಒಪ್ತೀನಿ. ನಾವು ಮೊದಲಿದ್ದ ಹಾಗೆ ಗಿಳಿಗಳಾಗೇ ಇದ್ದರೆ ಚೆನ್ನಾಗಿತ್ತು. ಹಣ್ಣು, ತರಕಾರಿ ತಿನ್ಕೊಂಡ್ ಆರಾಮಗಿದ್ವಿ. ಎನಿಮಿಗಳಿಗೆ ಬರೀ ಎನ್ಕೈರಿ ಕಾಟ ಕೊಟ್ಟು ಬೆಂಡೆತ್ತುವುದು ಸಾಕಾಗ್ತಿಲ್ಲ ಅನಿಸಿದ್ದೇ ಈ ಸಾಮ್ರಾಟ ತನ್ನ ತಪಃಶ್ಯಕ್ತಿಯಿಂದ…ಹೇಳಿಕೇಳಿ ನಾನ್ ಬಯೊಲಾಜಿಕಲ್ ಬಾರ್ನ್ ಬೇರೆ! ತನ್ನ ದೇವರತ್ರ ಡೈರೆಕ್ಟಾಗಿ ಮಾತಾಡಿ, ಅವರನ್ನು ಒಪ್ಪಿಸಿ ನಮ್ಮನ್ನು ಹದ್ದುಗಳನ್ನಾಗಿ ಮಾಡ್ಬಿಟ್ಟ! ಮೊದಮೊದಲಿಗೆ ಮಾಂಸ ತಿನ್ನೋದು ವಾಕರಿಕೆ ತಂದ್ರು ಹೇಗೊ ಅಡ್ಜಸ್ಟ್ ಮಾಡ್ಕೊಂಡ್ವಿ. ಆದರೆ, ತನ್ನ ವಿರುದ್ದ ಒಂದೇ ಒಂದು ಮಾತು ಆಡಿದವರನ್ನೂ ಕುಟುಕಲು ಹೇಳುತ್ತಿರುವಾಗ…ನಾವಾದ್ರು ಎಷ್ಟು ಜನರನ್ನು ಅಂತ ಕುಟುಕೋದು. ಜನರ ಮಾಂಸ ತಿಂದು ತಿಂದು…ನಾಲಿಗೆ ಮರಗಟ್ಟಿದೆ”
ಅಷ್ಟರಲ್ಲಿ ಶಾರ್ಟ್ ಜಂಪ್ ಮಾಡುತ್ತ ಬಳಿ ಸಾರಿ ಬಂದ ಮೂರನೇ ಹದ್ದು ಆತಂಕದಿಂದ “ಶ್…ಅಲ್ಲಿ ನೋಡಿ” ಎಂದಿತ್ತು.
ದೊಡ್ಡ ಪಂಜರ, ಬೋನೊಂದನ್ನು ಹೊತ್ತ ವಾಹನವೊಂದು ಅರಮನೆ ಆವರಣಕ್ಕೆ ಮುಖ್ಯದ್ವಾರದಿಂದ ಬರುತ್ತಿತ್ತು. “ಗಿಳಿಯಾಗಿದ್ದಾಗ ಇರಿಸಿದಂತೆ ನಮ್ಮನ್ನು ಕೈದಿನಲ್ಲಿಡಲು ಸಾಮ್ರಾಟ ಪಂಜರವನ್ನು ಮಾಡಿಸಿದ್ದಾನೆ. ಅದಕ್ಕಾಗಿ ನಮ್ಮನ್ನು ಬರಹೇಳಿದ್ದಾನೆ” ಎಂದು ಹದ್ದುಗಳು ಕಳವಳಗೊಂಡವು. ಆದರೆ – ಉದ್ಯಾನವನದಿಂದ ಓರ್ವ ರಾಜಭಟ ನವಿಲನ್ನು ಹೊತ್ತು ತಂದು ಪಂಜರದಲ್ಲಿ ಇರಿಸಿದ್ದನ್ನು, ಮತ್ತೊಂದಷ್ಟು ರಾಜಭಟರು ಹಗ್ಗದಿಂದ ಬಾಯಿಯನ್ನು ಬೀಗಿಸಿಕೊಂಡಿದ್ದ, ಸಾಮ್ರಾಟರು ಬಾಲ್ಯದಲ್ಲಿ ಹಿಡಿದು ಸಾಕಿದ್ದ ಮೊಸಳೆಯನ್ನು ತಂದು ಬೋನಿನೊಳಗೆ ಬಿಟ್ಟಿದ್ದನ್ನು ಕಂಡು ನಿಟ್ಟುಸಿರು ಬಿಟ್ಟವು.
“ದಿನಾಲೂ ಕಾಳು ಹಾಕುತ್ತ ಫೋಟೊ ಶೂಟ್ ಮಾಡುತ್ತಿದ್ದ ಸಾಮ್ರಾಟನಿಂದ ಬೋರ್ ಹೊಡೆಸಿಕೊಂಡ ನವಿಲು ಕುಟುಕಿರಬೇಕು. ಅದಕ್ಕೆ ಹೊರ ಹಾಕುತ್ತಿದ್ದಾನೆ. ಇನ್ನು ಮೊಸಳೆಯ ಕತೆ – ಕಳೆದ ಹತ್ತು ವರುಷಗಳಲ್ಲಿ ಕೇಳಿ ಕೇಳಿ ಜನರು ಕಿವಿಗಳ ತಮಟೆ ತೂತಾಗಿ ಹೋಗಿದೆ” ಎಂದು ಅಪಹಾಸ್ಯ ಮಾಡಿ ರೆಕ್ಕೆ ಬಡಿದು ಕುಣಿಯುತ್ತಿರುವಾಗ ರಣಭೇರಿ, ಡೊಳ್ಳು, ತಮಟೆ – ಬಾಜಾಭಜಂತ್ರಿಯ ಭೂಮಿ ನಡುಗಿಸುವಂಥ ಸದ್ದು ಕೇಳಿ ಬಂತು. ಕರುವೊಂದನ್ನು ತಬ್ಬಿ ಹಿಡಿದು ರಥದಲ್ಲಿ ಕುಳಿತ ಸಾಮ್ರಾಟನ ಮೆರವಣಿಗೆ ಹೊರಟಿತ್ತು.
ಏರ್ ಕಂಡೀಷನ್ಡ್ ದನದ ಕೊಟ್ಟಿಗೆಯಲ್ಲಿ ಅರಮನೆಯ ಗೋವು ಪುಣ್ಯಕೋಟಿ ಕರುವನ್ನು ಹೆತ್ತಿತ್ತು. ತನ್ನ ಹುಟ್ಟುದಿನದ ಸಂದರ್ಭದಲ್ಲಿ ಕರು ಹುಟ್ಟಿದ್ದು ಶುಭ ಸಂಕೇತವೆಂದ ಅರಮನೆಯ ಸನಾತನ ಬಂಡಲ್ ಬ್ರಹ್ಮಾಂಡ ಜ್ಯೋತಿಷಿ “ಅದಕ್ಕೆ ದಿವ್ಯಜ್ಯೋತಿ ಎಂದು ನಾಮಕರಣ ಮಾಡಿ ಪೂಜೆ ಮಾಡು. ನೀನು ಮಾಡಿದ ಎಲ್ಲಾ ಅಂಧಕಾನೂನುಗಳ ಪಾಪಗಳು ವಾಷಿಂಗ್ ಪೌಡರ್ ನಿರ್ಮದಿಂದ ತೊಳೆದಂತೆ ಕ್ಲೀನ್ ಆಗುತ್ತದೆ” ಎಂದು ಆಶೀರ್ವದಿಸಿದ್ದ. ಅಂತೆ ಸಾಮ್ರಾಟ ಪೀಕಾಕ್, ಕ್ರೊಕಡೈಲನ್ನು ಕಿಕ್ ಔಟ್ ಮಾಡಿ ಕರುವಿನ ಪಾದ ಪೂಜೆ ಮಾಡಿದ. ಸಿಂಹಾಸನದಲ್ಲಿ ತೊಡೆಯ ಮೇಲೆ ಕೂರಿಸಿಕೊಂಡು ಫೋಟೊ ಶೂಟಿಂಗ್ ನಡೆಸಿದ. ಕರುವನ್ನು ಮುದ್ದಾಡುವ ಹತ್ತಾರು ಕ್ಯಾಮೆರಗಳಲ್ಲಿ ಕ್ಲಿಕ್ಕಿಸಿದ ಕ್ಲೋಸ್ ಶಾಟ್, ಮಿಡ್ ಶಾಟ್, ಶೊಲ್ಡರ್ ಶಾಟ್ ಫೋಟೊಗಳನ್ನು ಮಾಯಾಜಾಲದಲ್ಲಿ ಪ್ರಜೆಗಳಿಗೆ ಹಂಚಿ “ಕೊನೆಗೂ ಬಂತು ಅಚ್ಚೇದಿನ್” ಎಂದು ಘೋಷಿಸಿದ.
ಫೋಟೊ ಶೂಟಿಂಗ್ ನಡೆಯುತ್ತಿದ್ದಾಗ ಸಂದೇಶ ಹೊತ್ತು ಬಂದ ಸುದ್ದಿದೂತ ತುರ್ತಾಗಿ ಅದನ್ನು ಸಾಮ್ರಾಟನಿಗೆ ತಲುಪಿಸಲು ತವಕಿಸುತ್ತಿದ್ದ. ಕ್ಯಾಮೆರಕ್ಕೆ ಅಡ್ಡ ಬಂದರೆ ಕಪಾಳಮೋಕ್ಷ ನಮೋ ಗ್ಯಾರಂಟಿ ಎಂದು ಅರಿತಿದ್ದರಿಂದ ಫೋಟೊ ಸೆಶನ್ ಮುಗಿಯುವುದನ್ನೇ ಕಾಯುತ್ತಿದ್ದ. ಡೈರೆಕ್ಟರ್ “ಫೆಂಟಾಸ್ಟಿಕ್ ಶೂಟಿಂಗ್…ಪ್ಯಾಕ್ ಅಪ್” ಎಂದು ಸ್ಪೀಕರಲ್ಲಿ ಕೂಗುತ್ತಿದಂತೆ, ಸಿಂಹಾಸನದತ್ತ ಧಾವಿಸಿ ಮಿಂಚಂಚೆಯ ಸಂದೇಶವನ್ನು ಸಾಮ್ರಾಟನ ಕೈಗಿತ್ತ. “ತಡಮಾಡದೆ ಮಹಾಸ್ವಾಮಿಗಳು ಸಂದೇಶವನ್ನು ಪರಾಂಬರಿಸಬೇಕೆಂದು ಅ.ಕುತಂತ್ರಿ ಮಂತ್ರಿಗಳು ಹೇಳಿದ್ದಾರೆ” ಎಂದವನು ಹಿನ್ನೆಡೆಯುತ್ತ ಅಲ್ಲಿಂದ ಕಾಲ್ತೆಗೆದ.
ಸಂದೇಶವನ್ನು ನೋಡಿದ್ದೆ ರಸಭಂಗವಾಗಿ ಸಾಮ್ರಾಟನ ಕಣ್ಣುಗಳು ಕೆಂಡದುಂಡೆಯಾದವು. “ಯಾರಲ್ಲಿ? ಐಟಿ, ಇಡಿ, ಸಿಬಿಐಗಳಿಗೆ ಬರಲು ಹೇಳಿದ್ದೆ. ಎಲ್ಲಿ ಹಾಳಾಗಿ ಹೋಗಿದ್ದಾರೆ? ಕೂಡಲೇ ಬರಹೇಳಿ” ಎಂದು ಆರ್ಭಟಿಸಿದ.
“ಮಹಾಸ್ವಾಮಿಗಳು ಕ್ಷಮಿಸಬೇಕು. ಅವರುಗಳು ಮುಂಜಾನೆಯಿಂದಲೇ ತಮ್ಮ ದರ್ಶನಕ್ಕಾಗಿ ಕಾಯುತ್ತಿದ್ದಾರೆ. ಹೊಟ್ಟೆ ಹಸಿಯುತ್ತಿದೆ ಎಂದು ಗೋಳಾಡುವುದನ್ನು ನೋಡಲಾಗದೆ ಮೊಸಳೆಗಾಗಿ ತಂದಿದ್ದ ತಂಗಳು ಮಾಂಸವನ್ನು ಕೊಟ್ಟಿದ್ದೇವೆ. ಅದು ಅಲ್ಲದೆ…ತಾವು ಪುಣ್ಯಕೋಟಿ ಕರುವಿನ ನಾಮಕರಣದಲ್ಲಿ ಬಿಜಿಯಾಗಿದ್ದೀರಿ. ಹಾಗಾಗಿ ತಮ್ಮಲ್ಲಿ ನಿವೇದಿಸಿಕೊಳ್ಳಲು ಆಸ್ಪದವಾಗಲಿಲ್ಲ” ಎಂದು ಕಾವಲುಗಾರ ತಲೆತಗ್ಗಿಸಿ ನಿಂತ. “ನಾಲಾಯಕ್ ಗಳಿಗೆ ಮಾಂಸದೂಟ ಬೇರೆ ಕೇಡು… ಹಾಳಾದವನೆ ಬೇಗ ಹೊರಡು …ಆ ಹಾಳು ಮೂಸಡಿಗಳನ್ನು ಬರಹೇಳು” ಎಂದು ಕೂಗಾಡಿದ.
ಕುಂಟಾಡುತ್ತ ಬಂದ ಮೂರು ಹದ್ದುಗಳನ್ನು, ಶೋಲೆಯ ಗಬ್ಬರ್ ಸಿಂಗ್ ನಂತೆ ದುರುಗುಟ್ಟಿ ನೋಡಿದ ಸಾಮ್ರಾಟ “ಸಿಬಿಐ ನೀನು ಸ್ವಲ್ಪ ಹೊರಗಿರು. ಮೊದಲು ಇವರನ್ನು ವಿಚಾರಿಸಿಕೊಳ್ಳುತ್ತೇನೆ” ಎಂದು ಐಟಿ, ಇಡಿಗಳತ್ತ ದಿಟ್ಟಿಸಿದ. ಆ ಎರಡು ಹದ್ದುಗಳು ಏನು ಕಾದಿದೆಯೊ ಎಂದು ನಡುಗುತ್ತ ನಿಂತಿದ್ದವು.
“ನಿಮ್ಮನ್ನು ಗಿಳಿಯಿಂದ ಗಿಡುಗ ಮಾಡಲು ಎಷ್ಟು ಕಷ್ಟ ಪಟ್ಟಿದ್ದೇನೆ. ವರ್ಷಗಟ್ಟಲೆ ತಪಸ್ಸಿನಿಂದ ಸಿದ್ದಿಸಿಕೊಂಡ ಶಕ್ತಿಯ ಅರ್ಧಭಾಗ ಸೋರಿ ಹೋಯಿತು. ಅದರ ಜ್ಞಾನವಿದೆಯೇ? ನೀವುಗಳು ಕುಕ್ಕಿ ಗುಡ್ಡೆ ಹಾಕಿದ್ದಾದರೂ ಏನು? ತಾನೇ ಎಲ್ಲವನ್ನೂ ಬಲ್ಲೆನೆಂದು ಮೆರೆಯುತ್ತಿದ್ದ ಆ ಮೂರ್ಖನನ್ನು ಸಾಮಂತ ಮಾಡಿದ್ದೇ ತಪ್ಪಾಗಿ ಹೋಯಿತು. ಕ್ರೇಜಿಯಾಗಿ ಆಡುತ್ತಿದ್ದಾನೆ ಆ ಕ್ರೇಜಿ ಮ್ಯಾನ್! ಏ…ಐಟಿ… ನಿನ್ನನ್ನೇ ಮೊದಲು ಚೂ ಬಿಟ್ಟಿದ್ದಲ್ಲವೆ? ಏನು ನೀನು ಮಹಾ ಕುಕ್ಕಿದ್ದು!” ಎಂದು ಸಾಮ್ರಾಟ ಕೆಕ್ಕರಿಸಿದ.
“ಮಹಾಸ್ವಾಮಿಗಳೇ…ತಾವು ಹೇಳಿದಂತೆ ಹೆಂಡದ ವ್ಯವಹಾರದಲ್ಲಿ ಸಿಕ್ಕಾಪಟ್ಟೆ ಲಂಚವನ್ನು ಕಕ್ಕಿಕೊಳ್ಳುವಷ್ಟು ತಿಂದಿದ್ದಾನೆಂದು ಇರೋ ಬರೋ ಕಲಮ್ಮಗಳನ್ನು ಹಾಕಿ ಚೆನ್ನಾಗಿ ಕುಕ್ಕಿದ್ದೆ. ಆದರೆ…”
“ಆದರೇನು? ಮೂಟೆಗಟ್ಟಲೆ ದಾಖಲೆಗಳಲ್ಲಿ ತಡುಕಿದರೂ ಒಂದು ಸಾಲಲ್ಲೂ ಕ್ರೇಜಿಯ ಕೈವಾಡ ಕಾಣಲಿಲ್ಲ ಅಂತ ಖಾಜಿ ನ್ಯಾಯ ಬಂತಲ್ಲ!” ಎಂದು ಇಡಿಯತ್ತ ಬಂದು ತಲೆಗೆ ಮೊಟುಕಿದ.
“ಏ…ವೇಸ್ಟ್ ಬಾಡಿ ಇಡಿ…ನೀನೇನೊ ಬಾರೀ ಕಮಾಲ್ ಮಾಡಿದೆ ಎಂದು ಕೊಂಡಿದ್ದೆ. ಕ್ರೇಜಿ ಸಾಯೋವರೆಗೂ ಕಂಬಿ ಎಣಿಸುತ್ತಲೇ ಇರಬೇಕು ಹಾಗೆ ಕುಕ್ಕಿದ್ದೇನೆಂದು ಎಂದು ಜಂಭ ಕೊಚ್ಚಿ ಕೊಂಡಿದ್ದೆ, ಅಲ್ಲವೇ? ಮೂರೇ…ಮೂರು ತಿಂಗಳು ಕಳೆದಿಲ್ಲ. ಏನಾಯಿತು…ಇಲ್ಲಿ ನೋಡು” ಎಂದು ಮಿಂಚಂಚೆಯ ಸಂದೇಶವನ್ನು ಮುಖಕ್ಕೆ ಹಿಡಿದ.
“ಸಾಮ್ರಾಟನಿಗೆ ತಲೆ ಕೆಟ್ಟಿದೆ ಎಂದು ಕಾಣಿಸುತ್ತೆ. ತನಗೆ ವಿರೋಧಿಗಳೆಂದು ತೋರಿದವರನ್ನು ಸಾಕಿದ ಹದ್ದುಗಳನ್ನು ಬಿಟ್ಟು ಕುಕ್ಕಿಸುತ್ತಿದ್ದಾನೆ. ಕ್ರೇಜಿ ತೇಗುವಂತೆ ದುಡ್ಡು ತಿನ್ನುವುದಿರಲಿ ದಮ್ಮಡಿ ತಿಂದಿದ್ದಕ್ಕೆ ರಾಶಿ ದಾಖಲೆಗಳಲ್ಲಿ ಒಂದೇ ಒಂದು ಸಾಕ್ಷ್ಯವಿಲ್ಲ. ಸಾಮ್ರಾಟನ ಜೊತೆಗೆ ಅ.ಪ.ಕುತಂತ್ರಿ ಸೇರಿ ಮಾಡುವ ಸಂಚಿನಿಂದ ವೃಥಾ ನ್ಯಾಯಾಲಯದ ಸಮಯ ಹಾಳಾಗುತ್ತಿದೆ” ಎಂದು ಜಾಡಿಸಿ ಖಾಜಿ ಕೊಟ್ಟ ತೀರ್ಪಿನ ಸಂದೇಶವನ್ನು ಓದಿ ಇಡಿಯ ಚೂಪಾದ ಕೊಕ್ಕು ಮೊಂಡಾಯಿತು. ಸಾಮ್ರಾಟನ ಹೊಳೆಯುವ ಮೇಕಪ್ಪಿನ ಮುಖಾರವಿಂದ ಕಪ್ಪಿಟ್ಟಿತು.
ಸಾಮ್ರಾಟ ನಮೋ ಸಾಕಿದ ಮುಗ್ಧತೆಯ ಸಂಕೇತದಂತಿರುವ ಪುಟ್ಟಕರು ಮತ್ತು ಜನರನ್ನು ಕಿತ್ತು ತಿನ್ನುವ ರಕ್ಕಸ ಹದ್ದುಗಳು ವಿರೋಧಾಭಾಸವಾಗಿ ಇತಿಹಾಸದಲ್ಲಿ ದಾಖಲಾದವು.
–ಚಂದ್ರಪ್ರಭ ಕಠಾರಿ
cpkatari@yahoo.com