ವೈದಿಕಶಾಹಿ ಎಂಬ ಏಕಪ್ರಕಾರವಾದ ವರ್ಗವೊಂದು ಹೇಗೆ ತುಳುನಾಡಿನ ಸಹಜ ಸಂಸ್ಕೃತಿಯನ್ನು ಬದಲಾಯಿಸುವ, ನಾಶಪಡಿಸುವ ಕೆಲಸವನ್ನು ಮಾಡುತ್ತಿದೆ ಎಂಬುದನ್ನು ಚೆಲುವರಾಜ ಕೋಡಿಮಲೆಯವರು ಬರೆದ ತುಳುನಾಡಿನ ಸಾಂಸ್ಕೃತಿಕ ಸ್ಥಿತ್ಯಂತರ-ಭೂತರಾಧನೆ ಲೇಖನವು ಅಧ್ಯಯನಪೂರ್ಣವಾಗಿ ನಿರೂಪಿಸುತ್ತದೆ.
ತುಳುನಾಡಿನ ಭೂತಾರಾಧನೆಗೆ ಸುಮಾರು ಐನೂರು ವರ್ಷಗಳಿಗಿಂತಲೂ ಹೆಚ್ಚಿನ ಇತಿಹಾಸವಿದೆ. ಶೈವ, ವೈಷ್ಣವ, ಗಾಣಪತ್ಯ ಮತ್ತು ಶಾಕ್ತ ಈ ನಾಲ್ಕು ಆರಾಧನೆಯ ಒಟ್ಟು ಸಾರರೂಪ ತುಳುನಾಡಿನ ಭೂತಾರಾಧನೆ. ಆದರೆ ಈ ಮೇಲಿನ ಆರಾಧನೆಯ ಮೇಲೆ ವೈದಿಕ ಸಂಪ್ರದಾಯಕ್ಕೆ ಅನಾದಿಕಾಲದಿಂದಲೂ ಹಿಡಿತವಿತ್ತು. ಆದರೆ ಈ ವೈದಿಕತ್ವದಿಂದ ತಪ್ಪಿಸಿ ಅದರ ಛಾಯೆಯನ್ನು ಪ್ರಕೃತಿ ಸಹಜತೆಗೆ ಬದಲಾಗುವಂತೆ ಮಾಡಿ ಜನ ಸಾಮಾನ್ಯನ ಕಲ್ಪನೆಗೆ ನಿಲುಕುವಂತೆ ಅಥವಾ ಅವನ ನಂಬಿಕೆಗೆ ಎಟಕುವಂತೆ ಬೆಳೆದು ನಿಂತದ್ದು ತುಳುನಾಡಿನ ಭೂತಾರಾಧನೆ. ಭಾಷೆ ಮತ್ತು ಅಕ್ಷರದ ಪ್ರಭಾವದಿಂದ ಬೆಳೆದಿದ್ದ ದೇವರ ಆರಾಧನೆಗೆ ಹತ್ತಿರ ಸುಳಿಯಲು ಸಾಧ್ಯವಾಗದ ಕರಾವಳಿಯ ಮೂಲ ನಿವಾಸಿಗಳು ಹಾಗೂ ಇಲ್ಲಿಯ ಕೆಳ ಸಮುದಾಯದ ಜನರು ತಮ್ಮದೇ ದಾರಿಯನ್ನು ಆಯ್ಕೆ ಮಾಡಿ ಪ್ರಕೃತಿಯ ವಿಸ್ಮಯಗಳಿಗೆ ಉತ್ತರ ರೂಪದಲ್ಲಿ ಕಂಡುಕೊಂಡದ್ದೇ ಇಲ್ಲಿಯ ಭೂತಾರಾಧನೆ.
ಈ ಭೂತಾರಾಧನೆಗೆ ಇಲ್ಲಿಯ ಮೇಲ್ವರ್ಗದ ತೀವ್ರ ವಿರೋಧವಿದ್ದು, ಅದರಲ್ಲಿ ಭಾಗವಹಿಸದೇ ಬಹಳ ದೂರ ಉಳಿದದ್ದಕ್ಕೆ ಭೂತ ಚರಿತ್ರೆ ಹಾಗೂ ಪಾಡ್ದನಗಳಲ್ಲಿ ಅನೇಕ ಉದಾಹರಣೆಗಳು ಸಿಗುತ್ತವೆ. ಘಟ್ಟದ ಮೇಲಿನಿಂದ ಇಳಿದು ಬರುತ್ತಿದ್ದ ದೈವಗಳನ್ನು ವಿರೋಧಿಸುವ, ಅವುಗಳ ಜೊತೆಗೆ ಹೋರಾಡುವ, ಸೋತ ನಂತರ ವಿಧಿ ಇಲ್ಲದೇ ಒಪ್ಪಿ ಆರಾಧಿಸುವ ಅನೇಕ ಉದಾಹರಣೆಗಳು ಭೂತದ ಪಾಡ್ದನದಲ್ಲಿ ಕಂಡುಬರುತ್ತದೆ. ಇಲ್ಲಿಯ ಬಲ್ಲಾಳರು ಅಥವಾ ಜಮೀನ್ದಾರರು ಆರಂಭದಲ್ಲಿ ಯಾವುದೇ ದೈವವನ್ನು ಒಪ್ಪಿಕೊಂಡ ಉದಾಹರಣೆಗಳೇ ಇಲ್ಲ. ಅಧಿಕಾರಶಾಹಿ ಹಾಗೂ ಪುರೋಹಿತಶಾಹಿ ವ್ಯವಸ್ಥೆಯಲ್ಲಿ ಅಧಿಕಾರಶಾಹಿ ವ್ಯವಸ್ಥೆಯಾದರೂ ಕ್ರಮೇಣ ದೈವದ ಪರಿಕಲ್ಪನೆಯನ್ನು ಒಪ್ಪಿಕೊಳ್ಳುತ್ತಾ ಬಂದಿರಬಹುದು, ಆದರೆ ಪುರೋಹಿತಶಾಹಿ ವ್ಯವಸ್ಥೆ ಇತ್ತೀಚಿನವರೆಗೂ ಒಪ್ಪಿಕೊಂಡ ನಿದರ್ಶನಗಳೇ ಇರಲಿಲ್ಲ. ಭೂತ ನುಡಿ ಅಥವಾ ಅಭಯ ಕೊಡುವ ಸಂದರ್ಭದಲ್ಲಿ ಇಂದೂ ಅನೇಕ ಬ್ರಾಹ್ಮಣರು ಎದ್ದು ನಿಲ್ಲದೇ ದೈವಕ್ಕೆ ಅಗೌರವ ಸೂಚಿಸುತ್ತಿರುವುದೇ ಇದಕ್ಕೆ ದೃಕ್ ಸಾಕ್ಷಿ. ಆದ್ದರಿಂದ ತುಳುನಾಡಿನ ಭೂತಾರಾಧನೆ ಎನ್ನುವುದು ತೀರಾ ಕೆಳವರ್ಗದ ಮತ್ತು ಬ್ರಾಹ್ಮಣ್ಯದಿಂದ ಸಂಪೂರ್ಣ ದೂರವಾಗಿದ್ದ ಆರಾಧನಾ ಪದ್ಧತಿ.

ಇಂತಹ ವೈದಿಕ ಪರಂಪರೆ ಕಳೆದ ಕೆಲವು ವರ್ಷಗಳಿಂದ ದೈವಗಳ ಜನಪ್ರಿಯತೆ ಹಾಗೂ ಅದರಿಂದ ಪಡೆಯಬಹುದಾದ ಲಾಭದ ಕಡೆಗೆ ದೃಷ್ಟಿ ಹಾಯಿಸಿರುವುದನ್ನು ಗುರುತಿಸಬಹುದಾಗಿದೆ. ಈ ವರ್ಗಕ್ಕೆ ದೈವಗಳ ಮೇಲೆ ಇಂದೂ ನಿಜವಾದ ಭಕ್ತಿ, ಗೌರವ ಅಥವಾ ನಂಬಿಕೆ ಇಲ್ಲದಿದ್ದರೂ ಅದರಿಂದ ಬರುವ ಆದಾಯ ಮತ್ತು ಜನಪ್ರಿಯತೆಯ ಮೇಲೆ ಕಣ್ಣು ಬಿದ್ದಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಇದರ ಪರಿಣಾಮವಾಗಿ ಅನೇಕ ದೈವಗಳ ಜಾವಡಿಗಳು ಜೀರ್ಣೋದ್ಧಾರ, ಪ್ರತಿಷ್ಠೆ ಮತ್ತು ವೈದಿಕ ರೀತಿಯ ಬ್ರಹ್ಮಕಲಶಕ್ಕೆ ಒಳಗಾಗುತ್ತಿವೆ. ಅನೇಕ ಗುಡಿಗಳ ದೈವಗಳು ವೈದಿಕ ದೇವ ದೇವಿಯರಾಗಿ ಬದಲಾಗುತ್ತಿವೆ. ತುಳುನಾಡಿನ ಅಲ್ಲಲ್ಲಿ ಕಂಡು ಬರುತ್ತಿದ್ದ ಇಲ್ಲಿಯ ಮೂಲನಿವಾಸಿಗಳ ಮಾರಿ ದೇವತೆಗಳು ದುರ್ಗಾಪರಮೇಶ್ವರಿ, ಮಹಿಷಮರ್ಧಿನಿ ಅಥವಾ ಚಾಮುಂಡೇಶ್ವರಿಯಾಗಿ ವೈದಿಕ ಸ್ವರೂಪವನ್ನು ಪಡೆದುಕೊಳ್ಳುತ್ತಿವೆ. ಅಲ್ಲಿ ನಡೆಯುತ್ತಿದ್ದ ಪ್ರಾಣಿ ಬಲಿ ಪ್ರಕ್ರಿಯೆ ಇಂದು ಇಲ್ಲವಾಗಿದೆ. ಅಸುರಕ್ರಿಯೆಯ ಆರಾಧನೆ ಸಂಪೂರ್ಣ ದೇವಕ್ರಿಯೆಯ ಸ್ವರೂಪ ಪಡೆದಿದೆ.
ಭೂತದ ಬಾಯಿಯಲ್ಲಿ ಸಂಸ್ಕೃತ ಪದಗಳು, ವೈದಿಕ ಆಚರಣೆಯ ವಿಧಿವಿಧಾನಗಳು ಇಂದು ಹೆಚ್ಚುಹೆಚ್ಚು ಕಂಡುಬರುತ್ತಿವೆ. ಅನೇಕ ದೈವಗಳಿಗೆ ಕೊಡುತ್ತಿದ್ದ ಮಾಂಸಾಹಾರಿ ಬಾರಣೆ ಅಥವಾ ಅಗೆಲ್ ಗಳು ಸಸ್ಯಾಹಾರವಾಗುತ್ತಿದೆ. ಅನೇಕ ದೈವಗಳ ಪಾತ್ರಿ ಅಥವಾ ಇತರ ಚಾಕರಿಯವರು ಇಲ್ಲಿಯ ಕೆಳವರ್ಗದವರಾಗುವ ಬದಲು ಪುರೋಹಿತರ ಮೂಲಕ ನಡೆಯುವ ಹಂತಕ್ಕೆ ಬರುತ್ತಿದೆ. ಪುರೋಹಿತರು ಬಳಸುವ ಭಾಷೆ, ಆಹಾರ, ಅಲಂಕಾರ, ಸೌಲಭ್ಯ ಹಾಗೂ ವಿಧಿವಿಧಾನಗಳು ಭೂತಾರಾಧನೆಯಲ್ಲೂ ಬರುತ್ತಿದೆ. ಇದಕ್ಕೆ ಮುಖ್ಯ ಕಾರಣ ಇಲ್ಲಿಯ ದೇವಸ್ಥಾನಗಳನ್ನು ನಿಯಂತ್ರಿಸುತ್ತಿದ್ದ ವೈದಿಕ ವರ್ಗ ದೈವ ಗುಡಿಗಳಿಗೂ ಕಾಲಿರಿಸಿದ್ದಾಗಿದೆ. ಮತ್ತೆ ಅಷ್ಟಮಂಗಲವೆಂಬ ಮೆದುಳು ತೊಳೆಯುವ ಕಾರ್ಯ ಭೂತಾರಾಧನೆಯಲ್ಲಿ ವೈದಿಕರ ಆಹಾರ, ಆಚರಣೆ, ತಾರತಮ್ಯ, ಮಡಿಮೈಲಿಗೆಯನ್ನು ಎತ್ತಿ ಹಿಡಿಯಲು ಸಫಲವಾಗುತ್ತಿದೆ. ಅಷ್ಟಮಂಗಲವೆನ್ನುವುದು ಸಾಕ್ಷಾತ್ ದೇವರ ನುಡಿ ಎಂಬಂತಾಗಿದೆ. ಇದರ ಮುಂದೆ ಲಿಖಿತ ದಾಖಲೆ, ಮೌಖಿಕ ಚರಿತ್ರೆ ಹಾಗೂ ಪ್ರಕೃತಿ ಸಹಜ ನಂಬಿಕೆಗೆ ಬೆಲೆ ಇಲ್ಲವಾಗಿದೆ. ಇದು ತುಳುನಾಡಿನಲ್ಲಿ ವರ್ಗ ಸಂಘರ್ಷ, ಪ್ರಕೃತಿ ವಿಕೋಪ ಸಾಮಾಜಿಕ ಮತ್ತು ಆರ್ಥಿಕ ಪಲ್ಲಟಗಳಿಗೂ ಕಾರಣವಾಗುತ್ತಿದೆ. ಆದ್ದರಿಂದ ಪ್ರಕೃತಿ ಸಹಜ ಭೂತಾರಾಧನೆಯ ಜಾಗೃತಿ ಮತ್ತೆ ಬೆಳೆಯದೇ ಇದ್ದರೆ ತುಳುನಾಡಿನ ಆರಾಧನಾ ಪರಿಕಲ್ಪನೆ ದುರಂತದ ದಾರಿಯತ್ತ ಸಾಗುವುದರಲ್ಲಿ ಸಂಶಯವಿಲ್ಲ.
ಚೆಲುವ ರಾಜ ಕೋಡಿಮಲೆ
ಲೇಖಕರು
ಇದನ್ನೂ ಓದಿ-https://peepalmedia.com/praveen-s-shetty-article-about-bhoot-kola/ http://ಭೂತಾರಾಧನೆಯ ಮೂಲ ಎಲ್ಲಿದೆ?