ಲಂಕಾ ದಹನದ ಕರಾಳ ಇತಿಹಾಸ
ಜೂನ್ 1, 1981ರಲ್ಲಿ, ಶ್ರೀಲಂಕಾದ ತಮಿಳು ಪ್ರಾಬಲ್ಯದ ಜಾಫ್ನಾದಲ್ಲಿ ಜಿಲ್ಲಾ ಅಭಿವೃದ್ಧಿ ಪ್ರಾಧಿಕಾರದ ಚುನಾವಣೆಯಿತ್ತು. ಸಿಂಹಳ ಪೊಲೀಸರು ಮಫ್ತಿಯಲ್ಲಿ ಜಾಫ್ನಾದ ಪಬ್ಲಿಕ್ ಲೈಬ್ರರಿಯನ್ನು ಸುಟ್ಟುಹಾಕಿದರು. ಅಂದು ನಡೆದ ಹಿಂಸಾಚಾರದಲ್ಲಿ ತಮಿಳರ ಜೀವಗಳೂ ಬಲಿಯಾದವು. 1930ರಲ್ಲಿ ಸ್ಥಾಪಿಸಲಾದ ಆ ಲೈಬ್ರರಿಯಲ್ಲಿ ಲಕ್ಷಕ್ಕಿಂತ ಹೆಚ್ಚು ತಮಿಳು ಪುಸ್ತಕಗಳಿದ್ದವು. ಅಪರೂಪದ ಓಲೆಗರಿ ಹಸ್ತಪ್ರತಿಗಳಿದ್ದವು. ಜೀವನಾಶವಷ್ಟೇ ಅಲ್ಲ, ಗ್ರಂಥಾಲಯ ಸುಡುವಿಕೆ ತಮ್ಮ ಬೌದ್ಧಿಕ ಅಸ್ಮಿತೆಯ ನಾಶ ಎಂದೇ ಶ್ರೀಲಂಕಾದ ತಮಿಳರ ಮನದಲ್ಲಿ ದಾಖಲಾಗಿ ಜನಾಂಗೀಯ ಕಲಹ ಇನ್ನಷ್ಟು ಉಲ್ಬಣಗೊಳ್ಳಲು ಕಾರಣವಾಯಿತು. ಆ ನಂತರದ್ದು ತಮಿಳರ ಪತನದ ಇತಿಹಾಸ. ಎಲ್‌ಟಿಟಿಇ ಅಲ್ಲದವರನ್ನೂ ಕೇವಲ ತಮಿಳಿನ ಕಾರಣಕ್ಕೆ ಕೊಲ್ಲಲಾಗುತ್ತಿತ್ತು; ಅತ್ಯಾಚಾರ ಮಾಡಲಾಗುತ್ತಿತ್ತು…
ಈ ಘಟನೆ ಕುರಿತು ಖ್ಯಾತ ಶ್ರೀಲಂಕಾದ ತಮಿಳು ಕವಿ ಎಂ. ಎ. ನುಹ್ಮನ್ ಬರೆದ ಪ್ರಸಿದ್ಧ ಕವಿತೆ ಇಲ್ಲಿದೆ.
ಬುದ್ಧನ ಕೊಲೆ
ಕಳೆದ ರಾತ್ರಿ, ನನ್ನ ಕನಸಲ್ಲಿ
ಬುದ್ಧಗುರುವನ್ನು ಕೊಲ್ಲಲಾಯಿತು
ಮಫ್ತಿಯ ಪೊಲೀಸರು
ಬುದ್ಧನನು ಗುಂಡಿಟ್ಟು ಕೊಂದರು.
ಜಾಫ್ನಾ ಲೈಬ್ರರಿಯ ಮೆಟ್ಟಿಲುಗಳ ಮೇಲೆ
ರಕ್ತಮಡುವಿನಲ್ಲಿ ಮುಳುಗಿ
ಅಂಗಾತ ಬಿದ್ದ ಬುದ್ಧನ ದೇಹ..
ರಾತ್ರಿಯ ಕಗ್ಗತ್ತಲಿನಲ್ಲೇ
ಓಡೋಡಿ ಬಂದ ಮಂತ್ರಿ ಕೆಂಡಾಮಂಡಲ,
‘ಅವನ ಹೆಸರು ನಮ್ಮ ಯಾದಿಯಲ್ಲಿರಲಿಲ್ಲ,
ಕೊಂದಿದ್ದು ಏಕೆ?’
‘ಇಲ್ಲ, ಇಲ್ಲ,’ ಪೊಲೀಸರೆಂದರು,
‘ಏನೂ ಪ್ರಮಾದವಾಗಿಲ್ಲ.
ಅವನ ಕೊಲ್ಲದೇ ಹೋಗಿದ್ದರೆ
ಒಂದೇ ಒಂದು ನೊಣವನ್ನೂ
ಕೊಲ್ಲಲಾಗುತ್ತಿರಲಿಲ್ಲ.
ಎಂದೇ..’
‘ಆಯಿತು, ಆಯಿತು.
ಕೂಡಲೇ ಶವ ವಿಲೇವಾರಿ ಮಾಡಿಬಿಡಿ’,
ಕರಗಿಹೋದರು ಗುಡುಗಿದ ಮಂತ್ರಿ..
ಮಫ್ತಿಯ ಪೊಲೀಸರು
ಶವವನ್ನು ಒಳಗೆಳೆದು
ಬುದ್ಧನ ದೇಹವನ್ನು
ತೊಂಭತ್ತು ಸಾವಿರ ಪುಸ್ತಕಗಳಿಂದ ಮುಚ್ಚಿದರು.
ಸಿಕಲೋಕವಾದ ಸುತ್ತದಿಂದ ಬೆಂಕಿಯಿಟ್ಟರು
ಬುದ್ಧಗುರುವಿನ ದೇಹ ಬೂದಿಯಾಯ್ತು
ಅಂತೆಯೇ ಧಮ್ಮಪದವೂ..
ಅನುವಾದ: ಡಾ. ಎಚ್.ಎಸ್.ಅನುಪಮಾ