ಬೆಂಗಳೂರು: ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ (DCRE) ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರು, ಹಿರಿಯ ಅಧಿಕಾರಿಗಳಿಂದ ಜಾತಿ ಆಧಾರಿತ ಕಿರುಕುಳ ನಡೆಯುತ್ತಿದೆ ಎಂದು ಆರೋಪಿಸಿದ್ದು, ಕಿರುಕುಳ ಮುಂದುವರಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.
ಡಿಜಿಆರ್‌ಇ ಪಶ್ಚಿಮ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀನಿವಾಸ್ ಟಿ.ಆರ್., ತಮ್ಮ ಇಲಾಖೆಯ ಮುಖ್ಯ ಕಚೇರಿಯಲ್ಲಿರುವ ಇಬ್ಬರು ಅಧಿಕಾರಿಗಳು ತಾವು ದಲಿತರಾಗಿರುವ ಕಾರಣಕ್ಕಾಗಿ ಗುರಿಯಾಗಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಡಿಜಿಆರ್‌ಇ ಮಹಾನಿರ್ದೇಶಕ ಉಮೇಶ್ ಕುಮಾರ್ ಅವರಿಗೆ ಸಲ್ಲಿಸಿದ ಮನವಿಯಲ್ಲಿ, ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲಿ ಮೇಲ್ಜಾತಿಯ ಆರೋಪಿಗಳ ಪರವಾಗಿ ಕೆಲಸ ಮಾಡುವಂತೆ ಒತ್ತಡ ಹೇರಲಾಗುತ್ತಿದೆ ಎಂದು ಶ್ರೀನಿವಾಸ್ ದೂರಿದ್ದಾರೆ. ಈ ಕುರಿತು ಅವರು ವಿಡಿಯೋವೊಂದನ್ನು ರೆಕಾರ್ಡ್ ಮಾಡಿ ಹಂಚಿಕೊಂಡಿದ್ದಾರೆ.
ಇನ್ಸ್‌ಪೆಕ್ಟರ್ ಆರೋಪದ ಪ್ರಕಾರ, ಹಿರಿಯ ಅಧಿಕಾರಿಗಳ ಕುಮ್ಮಕ್ಕಿನಿಂದ ದೂರುದಾರರನ್ನು ಬಳಸಿಕೊಂಡು ತಮ್ಮ ವಿರುದ್ಧ ಸುಳ್ಳು ಅರ್ಜಿಗಳನ್ನು ಸೃಷ್ಟಿಸಲಾಗುತ್ತಿದೆ ಮತ್ತು ವಿಚಾರಣೆಯ ನೆಪದಲ್ಲಿ ಕಿರುಕುಳ ನೀಡಲಾಗುತ್ತಿದೆ. ಉಡುಪಿಗೆ ತಮ್ಮ ವರ್ಗಾವಣೆಯ ವಿರುದ್ಧ ಕರ್ನಾಟಕ ಆಡಳಿತ ನ್ಯಾಯಮಂಡಳಿಯಿಂದ (KAT) ತಡೆಯಾಜ್ಞೆ ತಂದಿದ್ದರೂ, ಸಂಚು ರೂಪಿಸಿ “ನಕಲಿ ದಾಖಲೆಗಳನ್ನು” ಸೃಷ್ಟಿಸಿ ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ ಎಂದು ಅವರು ದೂರಿದ್ದಾರೆ.
“ಹೀಗೆ ಕಿರುಕುಳ ಮುಂದುವರಿದು, ಹಿರಿಯ ಅಧಿಕಾರಿಗಳಿಂದ ನಡೆಯುತ್ತಿರುವ ತಾರತಮ್ಯ ನಿಲ್ಲದಿದ್ದರೆ, ನಾನು ಅಂತಿಮ ನಿರ್ಧಾರವನ್ನು (ಆತ್ಮಹತ್ಯೆ) ಕೈಗೊಳ್ಳಬಹುದು. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳೇ ಜವಾಬ್ದಾರರಾಗುತ್ತಾರೆ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಶ್ರೀನಿವಾಸ್ ಎಚ್ಚರಿಸಿದ್ದಾರೆ.
