ದಕ್ಷಿಣ ಗಾಝಾದಲ್ಲಿನ ವೈದ್ಯಕೀಯ ಸಿಬ್ಬಂದಿ ಇಸ್ರೇಲ್ ಬಾಂಬ್ ದಾಳಿಗೆ ಒಳಗಾಗಿ ಮೃತಪಟ್ಟ ಮಹಿಳೆಯೊಬ್ಬರಿಗೆ ಹೆರಿಗೆ ಮಾಡಿಸಿ ಮಗುವನ್ನು ಬದುಕಿಸಿದ್ದಾರೆ.
ಈ ಕುರಿತು ವೀಡಿಯೋ ವರದಿಯೊಂದನ್ನು ಹಂಚಿಕೊಂಡಿರುವ ಅಲ್ ಜಜೀರಾ ಮುಬಾಶರ್ ದಕ್ಷಿಣ ಗಾಜಾದ ನಾಸರ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆಯೆಂದು ಹೇಳಿದೆ. ಪ್ರಸ್ತುತ ಮಗುವನ್ನು ನವಜಾತ ಶಿಶುಗಳ ವಾರ್ಡಿನಲ್ಲಿ ಇರಿಸಲಾಗಿದ್ದು ಮಗುವಿನ ದೇಹಕ್ಕೆ ಆಕ್ಸಿಜನ್ ಮತ್ತು ಇತರ ಟ್ಯೂಬುಗಳನ್ನು ಜೋಡಿಸಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ಮಗುವನ್ನು ಕಾಪಾಡಿ, ಅಗತ್ಯ ಚಿಕಿತ್ಸೆಯನ್ನು ನೀಡಲಾಗಿದೆ ಎಂದು ಡಾ ನಾಸರ್ ಅಲ್-ನವಾಜಾ ಅಲ್ ಜಜೀರಾ ವಾಹಿನಿಗೆ ತಿಳಿಸಿದ್ದಾರೆ.
ಪ್ರಸ್ತುತ ಮಗುವಿನ ಆರೋಗ್ಯ ಸ್ಥಿರವಾಗಿದೆ. ಆದರೆ ಇಸ್ರೇಲ್ ದಾಳಿಯ ನಂತರ ಗಾಝಾ ಪ್ರದೇಶವು ಇಂದನ ಕೊರತೆಯನ್ನು ಎದುರಿಸುತ್ತಿದ್ದು, ನಾಸರ್ ಆಸ್ಪತ್ರೆಯ ಸಂಕೀರ್ಣವು ಯಾವುದೇ ಕ್ಷಣದಲ್ಲಿ ವಿದ್ಯುತ್ ನಿಲುಗಡೆಯಾಗಬಹುದಾದ ಪರಿಸ್ಥಿತಿಯನ್ನು ಎದುರಿಸುತ್ತಿದೆ.
ಇಸ್ರೇಲ್ ಗಾಝಾ ಪ್ರದೇಶಕ್ಕೆ ಇಂಧನ ಪೂರೈಕೆ ತಡೆದಿದ್ದು ಇದರಿಂದಾಗಿ ಜನರಿಗೆ ನೀರು ಮತ್ತು ಆಹಾರವನ್ನು ಪಡೆಯದಂತೆ ಮಾಡಿದೆ. ಆಸ್ಪತ್ರೆಗಳು ವಿದ್ಯುತ್ತಿಗಾಗಿ ಜನರೇಟರುಗಳನ್ನೇ ಅವಲಂಬಿಸಿದ್ದು, ಇಂಧನ ದೊರೆಯದೆ ಹೋದರೆ ಆಸ್ಪತ್ರೆಗಳು ಕಾರ್ಯಾಚರಿಸುವುದು ಕಷ್ಟವಾಗಲಿದೆ.
ತಕ್ಷಣವೇ ಇಂಧನ ಸಾಗಾಟದ ಮೇಲಿನ ನಿರ್ಬಂಧವನ್ನು ತೆಗೆದುಹಾಕದೆ ಹೋದರೆ ತಮ್ಮೆಲ್ಲ ಕಾರ್ಯಾಚರಣೆಗಳನ್ನು ನಾವು ನಿಲ್ಲಿಸಬೇಕಾದ ಅನಿವಾರ್ಯತೆಗೆ ಒಳಗಾಗಲಿದ್ದೇವೆ ಎಂದು ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ UNRWA ಹೇಳಿದೆ.