ಬೆಂಗಳೂರು, ಸೆ. 10: ರಾಜ್ಯ ವಿಧಾನಸಭೆಗಳು ಅಂಗೀಕರಿಸಿದ ವಿಧೇಯಕಗಳಿಗೆ ರಾಜ್ಯಪಾಲರು ಅನುಮೋದನೆ ನೀಡುವ ಅಧಿಕಾರವನ್ನು ನಿಯಂತ್ರಿಸುವ ಸಂವಿಧಾನದ ವಿಧಿ 200ರಲ್ಲಿ ‘ಸಾಧ್ಯವಾದಷ್ಟು ಬೇಗ’ ಎಂಬ ಪದವಿಲ್ಲದಿದ್ದರೂ, ರಾಜ್ಯಪಾಲರು ನಿರ್ದಿಷ್ಟ ಸಮಯದೊಳಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.
ಶಾಸಕಾಂಗವು ಅಂಗೀಕರಿಸಿ ಕಳುಹಿಸಿದ ವಿಧೇಯಕಗಳಿಗೆ ರಾಜ್ಯಪಾಲರು ಒಪ್ಪಿಗೆ ನೀಡಲು ಅಥವಾ ರಾಷ್ಟ್ರಪತಿಗೆ ಸಲ್ಲಿಸಲು ನ್ಯಾಯಾಲಯವು ನಿರ್ದಿಷ್ಟ ಕಾಲಮಿತಿ ನಿಗದಿಪಡಿಸಬಹುದೇ ಎಂಬ ವಿಷಯದ ಕುರಿತು ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠದ ಮುಂದೆ ಎಂಟನೇ ದಿನವೂ ವಿಚಾರಣೆ ಮುಂದುವರೆಯಿತು.
ವಿಧಾನಸಭೆಗಳು ಅಂಗೀಕರಿಸಿದ ವಿಧೇಯಕಗಳಿಗೆ ಸಂಬಂಧಿಸಿದಂತೆ ರಾಜ್ಯಪಾಲರ ಅಧಿಕಾರಗಳನ್ನು ವಿಧಿ 200 ವಿವರಿಸುತ್ತದೆ. ಇದರ ಪ್ರಕಾರ, ರಾಜ್ಯಪಾಲರು ವಿಧೇಯಕಕ್ಕೆ ಒಪ್ಪಿಗೆ ನೀಡಬೇಕು, ಅಥವಾ ಒಪ್ಪಿಗೆಯನ್ನು ತಡೆಹಿಡಿಯಬೇಕು, ಇಲ್ಲವೇ ಮರುಪರಿಶೀಲನೆಗಾಗಿ ಹಿಂದಿರುಗಿಸಬೇಕು, ಅಥವಾ ರಾಷ್ಟ್ರಪತಿಗೆ ಕಾಯ್ದಿರಿಸಬೇಕು ಎಂದು ನ್ಯಾಯಾಲಯ ತಿಳಿಸಿದೆ. ಈ ವಿಷಯದಲ್ಲಿ ರಾಜ್ಯಪಾಲರು ನಿರ್ದಿಷ್ಟ ಸಮಯದೊಳಗೆ ನಿರ್ಧಾರ ತೆಗೆದುಕೊಳ್ಳಬೇಕೆಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಈ ಪ್ರಕರಣದ ವಾದಗಳನ್ನು ಸೆಪ್ಟೆಂಬರ್ 10ರಂದು ಪೂರ್ಣಗೊಳಿಸಲು ಪೀಠ ನಿರ್ಧರಿಸಿದೆ.