Home ದೇಶ ಮೀಸಲಾತಿ ವಿರೋಧಿ ಹೋರಾಟದ ಮೂಲಕ‌ ಸೋಕಾಲ್ಡ್ ಮೇಲ್ಜಾತಿಗಳು ತಮ್ಮ ಜಾತಿ ಪ್ರಾಬಲ್ಯವನ್ನು ‌ಉಳಿಸಿಕೊಳ್ಳಲು ಯತ್ನಿಸುತ್ತಿವೆ: ಪ್ರಕಾಶ್‌...

ಮೀಸಲಾತಿ ವಿರೋಧಿ ಹೋರಾಟದ ಮೂಲಕ‌ ಸೋಕಾಲ್ಡ್ ಮೇಲ್ಜಾತಿಗಳು ತಮ್ಮ ಜಾತಿ ಪ್ರಾಬಲ್ಯವನ್ನು ‌ಉಳಿಸಿಕೊಳ್ಳಲು ಯತ್ನಿಸುತ್ತಿವೆ: ಪ್ರಕಾಶ್‌ ಅಂಬೇಡ್ಕರ್

0

ದೆಹಲಿ: ದೆಹಲಿಯಲ್ಲಿ ನಡೆದ “ಮೀಸಲಾತಿ ವಿರೋಧಿ” ಪ್ರತಿಭಟನೆಯು ಪ್ರಬಲ ಜಾತಿಗಳ ಸ್ಥಾನಮಾನವನ್ನು ಬಹಿರಂಗವಾಗಿ ಸಮರ್ಥಿಸಿಕೊಳ್ಳುವ ಪ್ರಯತ್ನವನ್ನು ಬಯಲು ಮಾಡಿದೆ ಎಂದು ವಂಚಿತ್ ಬಹುಜನ ಆಘಾಡಿ (ವಿಬಿಎ) ಮುಖ್ಯಸ್ಥ ಪ್ರಕಾಶ್ ಅಂಬೇಡ್ಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅವರ ರಾಜಕೀಯ ಹೇಳಿಕೆಗಳು ಯಾವುದೇ ಮುಜುಗರವಿಲ್ಲದೆ, ಮೇಲ್ಜಾತಿ ಅಸ್ಮಿತೆಯನ್ನು ಮುಂಚೂಣಿಯಲ್ಲಿಟ್ಟುಕೊಂಡು ಹೊರಬಂದಿವೆ. ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ಪಂಗಡ (ಎಸ್‌ಟಿ) ಮತ್ತು ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಸಿಗಬೇಕಾದ ಸಾಮಾಜಿಕ ನ್ಯಾಯದ ವಿರುದ್ಧ ತಮ್ಮ ಪ್ರಾಬಲ್ಯವನ್ನು ಅಸ್ತ್ರವಾಗಿಸಲು ಹಾಗೂ ಸಾಮಾಜಿಕ ಜಾತಿ ಶ್ರೇಣೀಕರಣವನ್ನು ಬಲವಾಗಿ ರಕ್ಷಿಸಲು ಈ ಪ್ರತಿಭಟನೆಯನ್ನು ಬಳಸಿಕೊಳ್ಳಲಾಗಿದೆ ಎಂದು ಅವರು ಟೀಕಿಸಿದ್ದಾರೆ.

1949 ರ ನವೆಂಬರ್ 25 ರಂದು ಸಂವಿಧಾನ ರಚನಾ ಸಭೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಸಮಾರೋಪ ಭಾಷಣದಲ್ಲಿ ಎಚ್ಚರಿಸಿದ ದೇಶವಿರೋಧಿ ಅಪಾಯದ ಜೀವಂತ ರೂಪವೇ ನಿನ್ನೆಯ ಈ ವಿದ್ಯಮಾನ ಎಂದು ಪ್ರಕಾಶ್ ಅಂಬೇಡ್ಕರ್ ಉಲ್ಲೇಖಿಸಿದ್ದಾರೆ.

ಜಾತಿಗಳು ಮೂಲತಃ ದೇಶವಿರೋಧಿ ಎಂದು ಬಾಬಾಸಾಹೇಬರು ಪ್ರತಿಪಾದಿಸಿದ್ದರು; ಏಕೆಂದರೆ ಅವು ಸಾಮಾಜಿಕ ಜೀವನವನ್ನು ಛಿದ್ರಗೊಳಿಸುತ್ತವೆ, ಪ್ರತ್ಯೇಕತೆಯನ್ನು ಸಾಂಸ್ಥಿಕಗೊಳಿಸುತ್ತವೆ ಮತ್ತು ಸಮುದಾಯಗಳ ನಡುವೆ ನಿರಂತರ ಅಸೂಯೆ ಮತ್ತು ದ್ವೇಷದ ವಾತಾವರಣವನ್ನು ಸೃಷ್ಟಿಸುತ್ತವೆ. ನಿನ್ನೆ ಮೇಲ್ಜಾತಿಯ ಹೆಮ್ಮೆಯ ರಾಜಕೀಯ ಘೋಷಣೆಗಳೊಂದಿಗೆ ಮೆರವಣಿಗೆ ನಡೆಸಿದ ವ್ಯಕ್ತಿಗಳು ಆ ದೇಶವಿರೋಧಿ ವಿಭಜನೆಯನ್ನೇ ನೇರವಾಗಿ ಆಚರಣೆಗೆ ತಂದಿದ್ದಾರೆ. ನೈಜ ಭ್ರಾತೃತ್ವವನ್ನು ಅಸಾಧ್ಯವಾಗಿಸುವ ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ರಕ್ಷಿಸಲು ಅವರು ತಮ್ಮ ಮೇಲ್ಜಾತಿಯ ಪ್ರಾಬಲ್ಯ ಮತ್ತು ಹೆಮ್ಮೆಯನ್ನು ಅಸ್ತ್ರವಾಗಿಸಿಕೊಂಡಿದ್ದಾರೆ ಎಂದಿದ್ದಾರೆ.

“…ನಾವು ನಿಜವಾದ ಅರ್ಥದಲ್ಲಿ ಒಂದು ರಾಷ್ಟ್ರವಾಗಬೇಕೆಂದರೆ ಭ್ರಾತೃತ್ವ ಅತ್ಯಗತ್ಯ. ಏಕೆಂದರೆ ರಾಷ್ಟ್ರವಿದ್ದಾಗ ಮಾತ್ರ ಭ್ರಾತೃತ್ವ ಸಾಧ್ಯ. ಭ್ರಾತೃತ್ವವಿಲ್ಲದೆ ಸಮಾನತೆ ಮತ್ತು ಸ್ವಾತಂತ್ರ್ಯಗಳು ಕೇವಲ ಮೇಲ್ಪದರದ ಬಣ್ಣದ ಲೇಪನದಷ್ಟೇ ಆಗಿರುತ್ತವೆ,” ಎಂಬ ಬಾಬಾಸಾಹೇಬರ ಮಾತುಗಳನ್ನು ಅವರು ನೆನಪಿಸಿದ್ದಾರೆ.

ಬಾಬಾಸಾಹೇಬರ ಪ್ರಕಾರ, ಒಂದು ರಾಷ್ಟ್ರವು ಸಾಮಾಜಿಕವಾಗಿ ಮತ್ತು ಮಾನಸಿಕವಾಗಿ ನಿರ್ಮಾಣವಾಗಬೇಕು ಮತ್ತು ಅದಕ್ಕೆ ಭ್ರಾತೃತ್ವ ಅನಿವಾರ್ಯ. ಈ ಕಾರಣಕ್ಕಾಗಿಯೇ ಭ್ರಾತೃತ್ವದ ಬಗೆಗಿನ ಅವರ ಮಾತುಗಳು ಅತ್ಯಂತ ನಿರ್ಣಾಯಕವಾಗುತ್ತವೆ. ಭ್ರಾತೃತ್ವವಿಲ್ಲದೆ ಸಮಾನತೆಯು ಉಳಿಯಲು ಸಾಧ್ಯವಿಲ್ಲ ಎಂದು ಅವರು ವಿಶ್ಲೇಷಿಸಿದ್ದಾರೆ.

ಪ್ರಬಲ ಜಾತಿಗಳು ತಮ್ಮ ಜಾತಿ ಸವಲತ್ತುಗಳನ್ನು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳ ಸಾಮಾಜಿಕ ನ್ಯಾಯದ ನೀತಿಯ ವಿರುದ್ಧ ಅಸ್ತ್ರವಾಗಿ ಬಳಸುವಾಗ, ಆ ಸಮಾಜವು ಭ್ರಾತೃತ್ವವನ್ನು ಸಾಧಿಸಿದೆ ಎಂದು ಹೇಳಿಕೊಳ್ಳಲು ಸಾಧ್ಯವೇ ಇಲ್ಲ. ಅಂಚಿನಲ್ಲಿರುವ ಮತ್ತು ತಾರತಮ್ಯಕ್ಕೊಳಗಾದ ಸಮುದಾಯಗಳ ಪ್ರಗತಿಯನ್ನು ಪ್ರಬಲ ಜಾತಿಯ ಪ್ರಾಬಲ್ಯದ ಮೇಲಿನ ನೇರ ದಾಳಿ ಎಂದು ಪರಿಗಣಿಸಿದಾಗ ನೈಜ ಪ್ರಜಾಪ್ರಭುತ್ವ ಕುಸಿದುಬೀಳುತ್ತದೆ. ಭ್ರಾತೃತ್ವವು ವಾಸ್ತವವಾಗಿ ಅನುಷ್ಠಾನಕ್ಕೆ ಬಾರದಿದ್ದರೆ, ಸಮಾನತೆ ಮತ್ತು ಸ್ವಾತಂತ್ರ್ಯಗಳು ಸಾಮಾಜಿಕ ನ್ಯಾಯದ ಮೊದಲ ಕಿಡಿಗೆ ಕಳಚಿಬೀಳುವ ಮೇಲ್ಪದರದ “ಬಣ್ಣದ ಲೇಪನ”ವಷ್ಟೇ ಆಗಿರುತ್ತವೆ ಎಂದು ಅವರು ಹೇಳಿದ್ದಾರೆ.

ಈ ಪ್ರತಿಭಟನೆಯು ಆರೆಸ್ಸೆಸ್ ಮತ್ತು ಬಿಜೆಪಿಯ ರಾಜಕೀಯ ಪ್ರೇರಿತ ಕೃತ್ಯ ಎಂಬುದರಲ್ಲಿ ತಮಗೆ ಯಾವುದೇ ಸಂದೇಹವಿಲ್ಲ ಎಂದಿರುವ ಅವರು, ಈ ವಿಚಾರದಲ್ಲಿ ಕಾಂಗ್ರೆಸ್ ನಾಯಕತ್ವದ ಮೌನವೂ ಅಷ್ಟೇ ಖಂಡನೀಯ. ಸಾಮಾಜಿಕ ನ್ಯಾಯದ ವಿರುದ್ಧ ಜಾತಿ ಸವಲತ್ತುಗಳನ್ನು ಇಷ್ಟು ಬಹಿರಂಗವಾಗಿ ಬಳಸಿಕೊಳ್ಳುತ್ತಿರುವಾಗ, ವಹಿಸುವ ಮೌನವೂ ಕೂಡ ಅಷ್ಟೇ ದೊಡ್ಡ ಅಪರಾಧ ಎಂದು ಕಿಡಿಕಾರಿದ್ದಾರೆ.

You cannot copy content of this page

Exit mobile version