Home ದೇಶ ಮೀಸಲಾತಿ ವಿರೋಧಿ ಹೋರಾಟಗಾರರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ: ಕೇಂದ್ರ ಸಚಿವ ರಾಮದಾಸ್ ಅಠಾವಳೆ ಆಗ್ರಹ

ಮೀಸಲಾತಿ ವಿರೋಧಿ ಹೋರಾಟಗಾರರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ: ಕೇಂದ್ರ ಸಚಿವ ರಾಮದಾಸ್ ಅಠಾವಳೆ ಆಗ್ರಹ

0

ಮೀಸಲಾತಿ ವ್ಯವಸ್ಥೆಯನ್ನು ವಿರೋಧಿಸುವವರ ಅಥವಾ ಅದನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸುವವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕು ಎಂದು ಕೇಂದ್ರ ಸಚಿವ ರಾಮದಾಸ್ ಅಠಾವಳೆ ಆಗ್ರಹಿಸಿದ್ದಾರೆ.

ಭಾನುವಾರ ಹೇಳಿಕೆ ನೀಡಿದ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಠಾವಳೆ) ಅಧ್ಯಕ್ಷರೂ ಆಗಿರುವ ರಾಮದಾಸ್ ಅಠಾವಳೆ, ಇತ್ತೀಚೆಗೆ ನಡೆದ ಮೀಸಲಾತಿ ವಿರೋಧಿ ಪ್ರತಿಭಟನೆಗಳು ಈ ವಿಚಾರವನ್ನು ಮತ್ತೆ ಸಾರ್ವಜನಿಕ ಚರ್ಚೆಗೆ ತಂದಿವೆ ಎಂದಿದ್ದಾರೆ. ಹಾಲಿ ಮೀಸಲಾತಿ ವ್ಯವಸ್ಥೆಯನ್ನು ತೆಗೆದುಹಾಕಲು ಅಥವಾ ಬದಲಾಯಿಸಲು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಅಭಿಯಾನಗಳ ಕುರಿತೂ ಅವರು ಪ್ರಸ್ತಾಪಿಸಿದ್ದಾರೆ.

“ಮೀಸಲಾತಿಯನ್ನು ವಿರೋಧಿಸುವುದು ಎಂದರೆ ಸಂವಿಧಾನವನ್ನು ವಿರೋಧಿಸಿದಂತೆ. ಮೀಸಲಾತಿ ವಿರೋಧಿ ನಿಲುವು ತೆಗೆದುಕೊಳ್ಳುವವರು ಸಂವಿಧಾನ ವಿರೋಧಿಗಳು, ಅವರ ವಿರುದ್ಧ ದೇಶದ್ರೋಹದ ಕಠಿಣ ಕ್ರಮ ಕೈಗೊಳ್ಳಬೇಕು,” ಎಂದು ಅಠಾವಳೆ ಒತ್ತಾಯಿಸಿದ್ದಾರೆ. ಮೀಸಲಾತಿಯು ಸಾಂವಿಧಾನಿಕವಾಗಿ ನೀಡಲಾಗಿರುವ ಹಕ್ಕಾಗಿದ್ದು, ಅದನ್ನು ಯಾವುದೇ ಕಾರಣಕ್ಕೂ ರದ್ದುಪಡಿಸಬಾರದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನಾಕಾರರ ಗುಂಪೊಂದು ಜಮಾಯಿಸಿ, ಜಾತಿ ಆಧಾರಿತ ಮೀಸಲಾತಿ ವಿರುದ್ಧ ಘೋಷಣೆಗಳನ್ನು ಕೂಗಿದ ಬೆನ್ನಲ್ಲೇ ಸಚಿವರ ಈ ಹೇಳಿಕೆ ಹೊರಬಿದ್ದಿದೆ. ಬ್ಯಾನರ್‌ಗಳು, ಭಿತ್ತಿಪತ್ರಗಳು ಮತ್ತು ಕೇಸರಿ ಧ್ವಜಗಳನ್ನು ಹಿಡಿದಿದ್ದ ಪ್ರತಿಭಟನಾಕಾರರು, ಮೀಸಲಾತಿ ಮತ್ತು ಇತರ ಸರ್ಕಾರಿ ಸವಲತ್ತುಗಳನ್ನು ನೀಡುವಾಗ ಜಾತಿಗಿಂತ ಆರ್ಥಿಕ ಪರಿಸ್ಥಿತಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದ್ದರು. ಮೀಸಲಾತಿ ನೀತಿಗಳು ಜಾತಿ ಅಸ್ಮಿತೆಯ ಬದಲಿಗೆ ಮುಖ್ಯವಾಗಿ ಆರ್ಥಿಕ ಹಿಂದುಳಿದಿರುವಿಕೆಯನ್ನು ಆಧರಿಸಿರಬೇಕು ಎಂಬುದು ಅವರ ವಾದವಾಗಿತ್ತು.

ಮತ್ತೊಂದೆಡೆ, ಮೀಸಲಾತಿ ಸುಧಾರಣೆಗಳ ಕುರಿತು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಅಥವಾ ಸಭೆ ನಡೆಸಲು ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗೆ ಅನುಮತಿ ನೀಡಿಲ್ಲ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿನ ದಾರಿತಪ್ಪಿಸುವ ಪೋಸ್ಟ್‌ಗಳ ಆಧಾರದ ಮೇಲೆ ಜನರು ಗುಂಪುಗೂಡದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

You cannot copy content of this page

Exit mobile version