Home ದೇಶ ‌ಮನುಸ್ಮೃತಿ ಟೀಕಿಸುವ ಮೂಲಕ ರಾಹುಲ್‌ ಗಾಂಧಿ ಭಾರತದ ಸಂಸ್ಕೃತಿ ಮತ್ತು ಪರಂಪರೆಯನ್ನು ಅಪಮಾನಿಸಿದ್ದಾರೆ: ಯೋಗಿ ಆದಿತ್ಯನಾಥ್

‌ಮನುಸ್ಮೃತಿ ಟೀಕಿಸುವ ಮೂಲಕ ರಾಹುಲ್‌ ಗಾಂಧಿ ಭಾರತದ ಸಂಸ್ಕೃತಿ ಮತ್ತು ಪರಂಪರೆಯನ್ನು ಅಪಮಾನಿಸಿದ್ದಾರೆ: ಯೋಗಿ ಆದಿತ್ಯನಾಥ್

0

ಮಹಾರಾಷ್ಟ್ರದಲ್ಲಿ ಸಂಸದ ರಾಹುಲ್ ಗಾಂಧಿ ಅವರು ಮನುಸ್ಮೃತಿಯ ಕುರಿತು ನೀಡಿರುವ ಹೇಳಿಕೆಯನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತೀವ್ರವಾಗಿ ಖಂಡಿಸಿದ್ದು, ಭಾರತದ ಪರಂಪರೆ ಮತ್ತು ಸಂಸ್ಕೃತಿಯನ್ನು ಅವಮಾನಿಸುವುದನ್ನು ಕಾಂಗ್ರೆಸ್ ನಾಯಕರು ಚಾಳಿಯಾಗಿಸಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ರಾಯ್‌ಬರೇಲಿ ಸಂಸದ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿರುವ ರಾಹುಲ್ ಗಾಂಧಿ ಅವರಿಂದ ದೇಶವು ಜವಾಬ್ದಾರಿಯುತ ನಡವಳಿಕೆಯನ್ನು ನಿರೀಕ್ಷಿಸುತ್ತದೆ ಎಂದ ಯೋಗಿ, “ಸಂವಿಧಾನದ ಮೇಲೆ ಪ್ರಮಾಣ ವಚನ ಸ್ವೀಕರಿಸಿದ ನೀವು ಭಾರತದ ಸಂಸ್ಕೃತಿ ಮತ್ತು ಪರಂಪರೆಯನ್ನು ನಿರಂತರವಾಗಿ ನಿಂದಿಸುತ್ತಿದ್ದೀರಿ. ಉತ್ತರ ಪ್ರದೇಶದಿಂದ ಹೊರಗೆ ಹೋದರೆ ಯುಪಿಯನ್ನು ಅವಮಾನಿಸುತ್ತೀರಿ, ದೇಶದ ಹೊರಗೆ ಹೋದರೆ ಭಾರತವನ್ನು ಕೀಳಾಗಿ ಕಾಣುತ್ತೀರಿ. ಗಡಿಯಲ್ಲಿ ಸೈನಿಕರು ಹೋರಾಡುವಾಗ ಸಾಕ್ಷಿ ಕೇಳುತ್ತೀರಿ, ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ದೇಶವಿರೋಧಿ ಶಕ್ತಿಗಳಿಗೆ ಪರೋಕ್ಷ ಬೆಂಬಲ ನೀಡುತ್ತೀರಿ ಹಾಗೂ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಅಸ್ತಿತ್ವವನ್ನೇ ನಿಮ್ಮ ಪಕ್ಷ ಪ್ರಶ್ನಿಸಿತ್ತು,” ಎಂದು ಆಕ್ರೋಶ ಹೊರಹಾಕಿದ್ದಾರೆ.

ಮನುಸ್ಮೃತಿಯ ಕುರಿತಾದ ಟೀಕೆಗೆ ಪ್ರತಿಕ್ರಿಯಿಸಿದ ಅವರು, “ಮನು ಬಗ್ಗೆ ತಿಳಿದುಕೊಳ್ಳಬೇಕಾದರೆ ಅಥರ್ವವೇದ, ಶತಪಥ ಬ್ರಾಹ್ಮಣ ಮತ್ತು ಮತ್ಸ್ಯ ಪುರಾಣಗಳನ್ನು ಓದಬೇಕು. ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ತಾಯಿ, ಸಹೋದರಿ, ಪತ್ನಿ ಅಥವಾ ಮಗಳ ರೂಪದಲ್ಲಿ ಹೆಣ್ಣಿನ ಉಪಸ್ಥಿತಿ ಮತ್ತು ರಕ್ಷಣೆ ಇದ್ದೇ ಇರುತ್ತದೆ. ತಂದೆಯಿಲ್ಲದ ಮಗಳು, ಅಣ್ಣನಿಲ್ಲದ ತಂಗಿ, ಪತಿಯಿಲ್ಲದ ಪತ್ನಿ ಅಥವಾ ಮಗನಿಲ್ಲದ ತಾಯಿಯ ಅಸ್ತಿತ್ವವನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ? ಹೀಗಿರುವಾಗ ಅರ್ಬನ್ ನಕ್ಸಲರ ಕೈಗೊಂಬೆಯಾಗಿ ದೇಶದ ಯುವ ಪೀಳಿಗೆಯ ಭವಿಷ್ಯವನ್ನು ಮತ್ತು ಭಾರತದ ಪರಂಪರೆಯನ್ನು ಏಕೆ ಹಾಳುಮಾಡಲು ಹೊರಟಿದ್ದೀರಿ?” ಎಂದು ಪ್ರಶ್ನಿಸಿದ್ದಾರೆ.

ಜಂತರ್ ಮಂತರ್‌ನಲ್ಲಿ ಇತ್ತೀಚೆಗೆ ಯುವತಿಯೊಬ್ಬಳು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅನುಚಿತ ಭಾಷೆ ಬಳಸಿದ್ದನ್ನು ಉಲ್ಲೇಖಿಸಿದ ಅವರು, “ನಂತರ ಆ ಯುವತಿ ಮತ್ತು ಆಕೆಯ ಪೋಷಕರು ಕ್ಷಮೆಯಾಚಿಸಿದರು. ದೇಶದ ಯುವ ಪೀಳಿಗೆಯನ್ನು ಇಂತಹ ಹಾದಿಗೆ ತಳ್ಳುತ್ತಿರುವವರು ಯಾರು? ಅರ್ಬನ್ ನಕ್ಸಲರ ಕೈಗೊಂಬೆಯಾಗಿ ದೇಶದ ಯುವಜನರ ಭವಿಷ್ಯವನ್ನು ಮತ್ತು ಭಾರತದ ಪರಂಪರೆಯನ್ನು ಏಕೆ ಹಾಳುಮಾಡಲು ಹೊರಟಿದ್ದೀರಿ?” ಎಂದು ಕಾಂಗ್ರೆಸ್ ನಾಯಕರಿಗೆ ಪ್ರಶ್ನಿಸಿದ್ದಾರೆ.

ವಿರೋಧ ಪಕ್ಷದ ನಾಯಕರಿಂದ ದೇಶವು ರಚನಾತ್ಮಕ ಮತ್ತು ಜವಾಬ್ದಾರಿಯುತ ಪಾತ್ರವನ್ನು ನಿರೀಕ್ಷಿಸುತ್ತದೆ ಎಂದ ಯೋಗಿ, “ಆದರೆ ನೀವು ನಿಮ್ಮ ಜವಾಬ್ದಾರಿಗಳಿಂದ ಸಂಪೂರ್ಣವಾಗಿ ವಿಮುಖರಾಗಿದ್ದೀರಿ. ರಾಯ್‌ಬರೇಲಿ ಮತ್ತು ಅಮೇಠಿ ಕ್ಷೇತ್ರಗಳ ಜನರು ಒಂದು ಕುಟುಂಬವನ್ನು ಇಷ್ಟು ವರ್ಷಗಳ ಕಾಲ ಬೆಂಬಲಿಸಿದರು. ಆದರೆ ಆ ಕುಟುಂಬವು ಸ್ಥಳೀಯ ವೀರರಾದ ರಾಣಾ ಬೇಣಿ ಮಾಧವ ಬಕ್ಷ್ ಸಿಂಗ್, ಲಾಲ್‌ಚಂದ್ ಸ್ವರ್ಣಕಾರ್ ಅಥವಾ ವೀರ ಪಾಸಿ ಅವರಂತಹ ಮಹಾನ್ ನಾಯಕರನ್ನು ಎಂದಿಗೂ ಗುರುತಿಸದೆ ಕೇವಲ ತಮ್ಮ ಹೆಸರನ್ನೇ ಮುನ್ನೆಲೆಗೆ ತಂದಿತು,” ಎಂದು ವಾಗ್ದಾಳಿ ನಡೆಸಿದ್ದಾರೆ.

You cannot copy content of this page

Exit mobile version