ಸರ್ಕಾರವನ್ನು ಪ್ರಶ್ನಿಸುವ ಹಿರಿಯ ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ಸೇರಿದಂತೆ ಇತರ ಪತ್ರಕರ್ತರನ್ನು ‘ದಿಮಾಗಿ ನಕ್ಸಲ್’ (ಬುದ್ಧಿಜೀವಿ ನಕ್ಸಲರು) ಎಂದು ಬಿಂಬಿಸಿರುವ ಆಡಳಿತಾರೂಢ ಬಿಜೆಪಿಯ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳ ನಡವಳಿಕೆಯನ್ನು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ (ಇಜಿಐ) ತೀವ್ರವಾಗಿ ಖಂಡಿಸಿದೆ.
ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಬಿಜೆಪಿ ಸಂಸದ ಹಾಗೂ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ, “ಇಂತಹ ‘ಬುದ್ಧಿಜೀವಿ ನಕ್ಸಲರು’ ನಕ್ಸಲರಿಗೆ ಸಾಂತ್ವನ ಮತ್ತು ಬೌದ್ಧಿಕ ಬೆಂಬಲ ನೀಡುತ್ತಾರೆ, ಭದ್ರತಾ ಸಿಬ್ಬಂದಿಯ ಸಾವನ್ನು ಸಂಭ್ರಮಿಸುತ್ತಾರೆ ಹಾಗೂ ಸಂಸದೀಯ ಪ್ರಕ್ರಿಯೆಯ ಮೂಲಕ ಪರಿಹಾರ ಕಂಡುಕೊಳ್ಳುವ ಬದಲು ಬೀದಿಗಿಳಿದು ಪ್ರತಿಭಟಿಸುವುದನ್ನು ಬೆಂಬಲಿಸುತ್ತಾರೆ” ಎಂದು ಹೇಳಿದ್ದರು.
ಇಂಡಿಯಾ ಟುಡೆ ಟಿವಿಯ ಹಿರಿಯ ಪತ್ರಕರ್ತ ಮತ್ತು ಮಾಧ್ಯಮ ನಿರೂಪಕರಾಗಿ ದೀರ್ಘಕಾಲದ ವೃತ್ತಿಜೀವನ ಹೊಂದಿರುವ ರಾಜ್‌ದೀಪ್ ಸರ್ದೇಸಾಯಿ ಅವರು ಬೆಳವಣಿಗೆಗಳನ್ನು ವಸ್ತುನಿಷ್ಠವಾಗಿ ವಿಶ್ಲೇಷಿಸುತ್ತಾ ಬಂದಿದ್ದಾರೆ. ಅವರ ಕಾರ್ಯಗಳನ್ನು ಯಾವುದೇ ಕಾರಣಕ್ಕೂ ‘ದಿಮಾಗಿ ನಕ್ಸಲ್’ ಎಂದು ಕರೆಯಲಾಗದು ಎಂದು ಎಡಿಟರ್ಸ್ ಗಿಲ್ಡ್ ಹೇಳಿದೆ.
ಇಂತಹ ಬೆದರಿಕೆಗಳು ಯಾವುದೋ ಅಪರಿಚಿತ ಗುಂಪುಗಳಿಂದ ಬಾರದೆ, ಆಡಳಿತ ಪಕ್ಷದ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳಿಂದಲೇ ಬಂದಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ. ಇಂತಹ ದಾಳಿಗಳು ದೇಶದ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ತರುತ್ತವೆ ಮತ್ತು ಸಂವಿಧಾನ ನೀಡಿರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತವೆ ಎಂದು ಸಂಘಟನೆ ಆತಂಕ ವ್ಯಕ್ತಪಡಿಸಿದೆ.
ಸ್ವತಂತ್ರ ಮಾಧ್ಯಮಗಳಿಗೆ ಅವಕಾಶಗಳು ಕಿರಿದಾಗುತ್ತಿರುವುದೇ ‘ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್’ (ಆರ್‌ಎಸ್‌ಎಫ್) ಬಿಡುಗಡೆ ಮಾಡಿದ 2026ರ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತ 180 ದೇಶಗಳ ಪೈಕಿ 157ನೇ ಸ್ಥಾನಕ್ಕೆ ಕುಸಿಯಲು ಕಾರಣ ಎಂದು ಗಿಲ್ಡ್ ಉಲ್ಲೇಖಿಸಿದೆ.
ತಮ್ಮ ವೃತ್ತಿಪರ ಕರ್ತವ್ಯವನ್ನು ನಿಭಾಯಿಸುತ್ತಿರುವ ಮಾಧ್ಯಮ ಪ್ರತಿನಿಧಿಗಳನ್ನು ಸಾರ್ವಜನಿಕ ಶತ್ರುಗಳಂತೆ ಬಿಂಬಿಸುವುದನ್ನು ಬಿಜೆಪಿ ನಿಲ್ಲಿಸಬೇಕು ಹಾಗೂ ಭಿನ್ನಾಭಿಪ್ರಾಯ ಮತ್ತು ಸರ್ಕಾರದ ಮೇಲ್ವಿಚಾರಣೆಯು ಪ್ರಜಾಪ್ರಭುತ್ವ ಪ್ರಕ್ರಿಯೆಯ ಅವಿಭಾಜ್ಯ ಅಂಗ ಎಂಬುದನ್ನು ಗುರುತಿಸಬೇಕು ಎಂದು ಎಡಿಟರ್ಸ್ ಗಿಲ್ಡ್ ಕರೆ ನೀಡಿದೆ.
