ವ್ಯಕ್ತಿಯೊಬ್ಬರು ತುರ್ತು ಸಂದರ್ಭಗಳಲ್ಲಿ ಅಸ್ವಸ್ಥರಾದಾಗ ಅಥವಾ ಸ್ವತಃ ನಿರ್ಧಾರ ತೆಗೆದುಕೊಳ್ಳಲು ಅಸಮರ್ಥರಾದಾಗ, ಅವರ ಪರವಾಗಿ ಆರೋಗ್ಯ ಸಂಬಂಧಿ ವೈದ್ಯಕೀಯ ನಿರ್ಧಾರಗಳನ್ನು ಕೈಗೊಳ್ಳಲು ತಮ್ಮ ಸಲಿಂಗಿ ಅಥವಾ ಕ್ವೀರ್ ಸಂಗಾತಿಯನ್ನು ನಾಮನಿರ್ದೇಶನ ಮಾಡಲು ವಯಸ್ಕರಿಗೆ ಅವಕಾಶ ನೀಡಬಹುದು ಎಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಾಗೂ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಸಲ್ಲಿಸಿರುವ ಜಂಟಿ ಅಫಿಡವಿಟ್‌ನಲ್ಲಿ, ಅಗತ್ಯ ಕಾನೂನು ಮತ್ತು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳಿಗೆ ಒಳಪಟ್ಟು ಪ್ರಸ್ತುತ ಇರುವ ಕಾನೂನು ಮತ್ತು ನೈತಿಕ ಚೌಕಟ್ಟಿನಲ್ಲೇ ಇಂತಹ ವ್ಯವಸ್ಥೆಗೆ ಅವಕಾಶ ಕಲ್ಪಿಸಲು ಸಂಪೂರ್ಣ ಸಾಧ್ಯವಿದೆ ಎಂದು ಸ್ಪಷ್ಟಪಡಿಸಲಾಗಿದೆ.
ಸಲಿಂಗಿ ಅಥವಾ ಭಿನ್ನಲಿಂಗೀಯವಲ್ಲದ ಸಂಬಂಧದಲ್ಲಿರುವ ಸಂಗಾತಿಯನ್ನು ತುರ್ತು ವೈದ್ಯಕೀಯ ಸನ್ನಿವೇಶಗಳಲ್ಲಿ ರೋಗಿಯ ಪ್ರತಿನಿಧಿಯಾಗಿ ಗುರುತಿಸಿ, ಚಿಕಿತ್ಸೆಗೆ ಒಪ್ಪಿಗೆ ನೀಡುವ ಅಧಿಕಾರ ನೀಡುವಂತೆ ಮಾರ್ಗಸೂಚಿ ರೂಪಿಸಬೇಕೆಂದು ಕೋರಿ ಅರ್ಶಿಯಾ ಟಕ್ಕರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಕೇಂದ್ರ ಈ ನಿಲುವು ವ್ಯಕ್ತಪಡಿಸಿದೆ.
ಎಲ್‌ಜಿಬಿಟಿಕ್ಯುಐಎ+ (LGBTQIA+) ಸಮುದಾಯದ ವ್ಯಕ್ತಿಗಳು ಸೇರಿದಂತೆ ಪ್ರತಿಯೊಬ್ಬ ನಾಗರಿಕನಿಗೂ ಸಂವಿಧಾನ ನೀಡಿರುವ ಘನತೆ, ಗೌಪ್ಯತೆ, ಸ್ವಾಯತ್ತತೆ, ಸಮಾನತೆ ಮತ್ತು ವೈಯಕ್ತಿಕ ಆಯ್ಕೆಯ ಹಕ್ಕುಗಳನ್ನು ತಾನು ಗೌರವಿಸುವುದಾಗಿ ಕೇಂದ್ರ ತಿಳಿಸಿದೆ. ಒಬ್ಬ ಸಕ್ಷಮ ವಯಸ್ಕ ವ್ಯಕ್ತಿಯು ತುರ್ತು ಸಂದರ್ಭಗಳಲ್ಲಿ ನಿರ್ಧಾರ ಕೈಗೊಳ್ಳಲು ತನ್ನ ಸಂಗಾತಿಯನ್ನು ನಾಮನಿರ್ದೇಶನ ಮಾಡಿದ್ದರೆ, ಲಿಂಗ, ಲೈಂಗಿಕ ದೃಷ್ಟಿಕೋನ ಅಥವಾ ಅವರ ಸಂಬಂಧವು ಸಾಂಪ್ರದಾಯಿಕ ವಿವಾಹದ ವ್ಯಾಪ್ತಿಗೆ ಬರುವುದಿಲ್ಲ ಎಂಬ ಕಾರಣ ನೀಡಿ ಅವರನ್ನು ಹೊರಗಿಡಲು ಯಾವುದೇ ವೈದ್ಯಕೀಯ ಅಥವಾ ನೈತಿಕ ಕಾರಣಗಳಿಲ್ಲ ಎಂದು ಅಫಿಡವಿಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಔಪಚಾರಿಕ ವಿವಾಹ ಅಥವಾ ರಕ್ತಸಂಬಂಧವನ್ನು ಮೀರಿದ ಪರಸ್ಪರ ಅವಲಂಬನೆ ಮತ್ತು ಕಾಳಜಿಯ ಸಂಬಂಧಗಳನ್ನು ಆಡಳಿತಾತ್ಮಕ ವ್ಯವಸ್ಥೆಗಳು ಈಗಾಗಲೇ ಗುರುತಿಸುತ್ತಿವೆ ಎಂದು ಕೇಂದ್ರ ತಿಳಿಸಿದೆ. ಭಾರತೀಯ ವೈದ್ಯಕೀಯ ಮಂಡಳಿ ನಿಯಮಗಳು 2002 ರ ಷರತ್ತು 7.16 ಅಡಿಯಲ್ಲಿ ರೋಗಿ ಅಥವಾ ಪತಿ/ಪತ್ನಿ, ಪೋಷಕರು ವೈದ್ಯಕೀಯ ಒಪ್ಪಿಗೆ ನೀಡಲು ಅವಕಾಶವಿದೆ.
ಈ ನಿಯಮವನ್ನು ವಿಶಾಲ ದೃಷ್ಟಿಕೋನದಿಂದ ಅರ್ಥೈಸಿಕೊಂಡು, ಅಧಿಕೃತವಾಗಿ ನಾಮನಿರ್ದೇಶನಗೊಂಡ ಕ್ವೀರ್ ಸಂಗಾತಿಯನ್ನೂ ಈ ವ್ಯಾಪ್ತಿಗೆ ಸೇರಿಸುವುದು ರೋಗಿಯ ಸ್ವಾಯತ್ತತೆಯನ್ನು ಕಾಪಾಡುವ ತಾರ್ಕಿಕ ವಿಸ್ತರಣೆಯಾಗಲಿದೆ ಎಂದು ಕೇಂದ್ರ ವಿವರಿಸಿದೆ. ಪೂರ್ವಭಾವಿ ನಾಮನಿರ್ದೇಶನ ಇಲ್ಲದಿದ್ದರೂ, ಸೂಕ್ತ ಪರಿಶೀಲನೆಯ ನಂತರ ಅಂತಹ ಸಂಗಾತಿಯನ್ನು ಕಾಳಜಿ ವಹಿಸುವ ವ್ಯಕ್ತಿ ಅಥವಾ ‘ಆಪ್ತ ಸ್ನೇಹಿತ’ ಎಂದು ಪರಿಗಣಿಸಿ ನಿರ್ಧಾರ ತೆಗೆದುಕೊಳ್ಳಲು ಅವಕಾಶ ನೀಡಬಹುದು ಎಂದು ತಿಳಿಸಲಾಗಿದೆ.
ಇದಕ್ಕೂ ಮುನ್ನ ದೆಹಲಿ ಹೈಕೋರ್ಟ್, ಸಲಿಂಗಿ ಸಂಗಾತಿಗಳಿಗೆ ಒಟ್ಟಿಗೆ ಜೀವಿಸುವ ಹಕ್ಕಿರುವಾಗ ಒಬ್ಬರಿಗೊಬ್ಬರು ವೈದ್ಯಕೀಯ ಒಪ್ಪಿಗೆ ನೀಡುವ ಹಕ್ಕನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತ್ತು. ಸಂವಿಧಾನದ 15 ಮತ್ತು 21 ನೇ ವಿಧಿಗಳ ಅಡಿಯಲ್ಲಿ ಇದು ಸಮಾನತೆ ಹಾಗೂ ಜೀವಿಸುವ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದರು.
