ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರ ಗಡಿಪಾರಿಗೆ ಸಂಬಂಧಿಸಿದಂತೆ ಪುತ್ತೂರು ಸಹಾಯಕ ಆಯುಕ್ತರ ಕಛೇರಿಯಿಂದ ನೋಟೀಸ್ ಜಾರಿ ಮಾಡಲಾಗಿದೆ. ವಿಚಾರಣೆ ಸಂಬಂಧ ನೋಟೀಸ್ ಗೆ ಉತ್ತರಿಸಲು ತಕ್ಷಣವೇ ಆಯುಕ್ತರ ಕಛೇರಿಗೆ ಆಗಮಿಸಲು ನೋಟೀಸ್ ನಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ಕಂದಾಯ ಇಲಾಖೆ ಸಹಾಯಕ ಆಯುಕ್ತರು ಜೂ.6 ರಂದು ವಿಚಾರಣೆಯನ್ನು ನಿಗದಿಪಡಿಸಿದ್ದಾರೆ. ಈ ವಿಚಾರಣೆಗೆ ಅರುಣ್ ಕುಮಾರ್ ಪುತ್ತಿಲ ಅವರು ತಪ್ಪದೇ ಹಾಜರಾಗುವಂತೆ ಸೂಚಿಸಲಾಗಿದೆ. ಈ ಪ್ರಕರಣದಲ್ಲಿ ಅರುಣ್ ಕುಮಾರ್ ಪುತ್ತಿಲ ಅವರು ಸ್ವತಃ ಯಾ ನ್ಯಾಯವಾದಿಯವರ ಮೂಲಕ ವಿಚಾರಣೆಗೆ ಹಾಜರಾಗಿ ವಾದಿಸಬಹುದೆಂದು ಸಹ ಉಲ್ಲೇಖ ಮಾಡಲಾಗಿದೆ. ತಪ್ಪಿದ್ದಲ್ಲಿ ನೇರವಾಗಿ ಗಡಿಪಾರಿಗೆ ಆದೇಶಿಸಲಾಗುವುದು ಎಂದು ಉಲ್ಲೇಖಿಸಲಾಗಿದೆ.
ಅರುಣ್ ಕುಮಾರ್ ಪುತ್ತಿಲ ಅವರ ಮೇಲೆ ಹಲವು ಪ್ರಕರಣಗಳು ಇದ್ದು, ಪ್ರಮುಖವಾಗಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಿಜೆಪಿ ನಾಯಕ ಅರುಣ್ ಕುಮಾರ್ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. 47 ವರ್ಷದ ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ಅವರ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಲಾಗಿದೆ. ಸಧ್ಯಕ್ಕೆ ಈ ಪ್ರಕರಣದಿಂದ ಜಾಮೀನು ಪಡೆದು ಹೊರಗಿದ್ದಾರೆ.
ಇದಿಷ್ಟೇ ಅಲ್ಲದೆ ಕೋಮು ಸಂಘರ್ಷವನ್ನು ಹುಟ್ಟು ಹಾಕುವ ಸಂಬಂಧ ಅನೇಕ ಪ್ರಕರಣಗಳು ಅರುಣ್ ಕುಮಾರ್ ಪುತ್ತಿಲ ಅವರ ಮೇಲಿದ್ದು ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲೇ ಹಲವು ಪ್ರಕರಣಗಳು ದಾಖಲಾಗಿವೆ. ಹಲವು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಕಲಬುರ್ಗಿ ಜಿಲ್ಲೆಯ ಶಹಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡೀಪಾರು ಮಾಡುವಂತೆ ಈಗಾಗಲೇ ಜಾರಿಯಾದ ನೋಟಿಸ್ನಲ್ಲಿ ಆದೇಶಿಸಲಾಗಿದೆ.